Advertisement

ನಿನಗೆ ಬೇರೆ ಹೆಸರು ಬೇಕೆ? ಇಂದು ವಿಶ್ವ ಹೆಣ್ಣು ಮಕ್ಕಳ ದಿನ

11:37 PM Oct 10, 2022 | Team Udayavani |

ಹೆಣ್ಣು ಎಂದರೆ ಮನೆಯ ಬೆಳಕು. ಹೆಣ್ಣೆಂದರೆ ನಮ್ಮ ಹುಟ್ಟಿನಿಂದ ಹಿಡಿದು ಸಾಯುವ ತನಕ ಆಕೆಯ ಪಾತ್ರ ವಿಧ ವಿಧವಾದದ್ದು, ಆಕೆ ಇಲ್ಲದೆ ಜೀವನವಿದೆಯಾ? ಖಂಡಿತವಾಗಿಯೂ ಇಲ್ಲ. ಜಗದ ಸೃಷ್ಟಿಕರ್ತೆಯೇ ಅವಳಾಗಿರುವಾಗ ಆಕೆ ಇಲ್ಲದೆ ನಾವು ಹೇಗೆ ಜೀವಿಸುವುದು.

Advertisement

ಇದು ಎಲ್ಲರಿಗೂ ತಿಳಿದಿರುವ ವಿಷಯ. ಆದರೂ ಯಾರಿಗೂ ಈ ಮಾತು ಬೆಳಕಾಗಿರಲಿಲ್ಲ. ವಂಶೋದ್ಧಾರಕ ಪುತ್ರ ಮಾತ್ರ ಎಂಬುದು ಸತ್ಯ ಎನಿಸುತ್ತಿತ್ತು. ಇಂದು ಕಾಲ ಬದಲಾಗುತ್ತಿದೆ. ಕೆಲವು ಮನೆಗಳಲ್ಲಿ ಯಾವುದಾದರೂ ಇರಲಿ, ಮಕ್ಕಳಿರಲಿ ಎಂಬ ಭಾವ ಇದ್ದರೂ ಮನದಲ್ಲಿ ಗಂಡೇ ಇರಲಿ ಎಂಬ ಮನೋಭಾವ ಬೆಳೆದಿರುತ್ತದೆ. ಇನ್ನು ಕೆಲವರು ಹೆಣ್ಣು ಮಗುವನ್ನು ಮನಸಾರೆ ಆಶಿಸಿರುತ್ತಾರೆ. ಇತ್ತೀಚಿನ ದಿನಗಳಲ್ಲಿ ಇವರ ಸಂಖ್ಯೆ ತುಂಬಾ ಹೆಚ್ಚಿದೆ ಎಂದರೆ ತಪ್ಪಾಗಲಾರದು.

ಐದು ವರ್ಷಗಳ ಹಿಂದೆ ನೋಡಿದರೆ ಲಿಂಗಾನುಪಾತ ಸಮತೋಲನ ಇಲ್ಲದ ತಕ್ಕಡಿಯಾಗಿತ್ತು. ಈಗ ಸಮತೋಲನಕ್ಕೆ ಬಂದು ನಿಂತಿದೆ. ಈ ಮನೋಧರ್ಮ ಯಾವಾಗಲೂ ಹೀಗೆ ಇದ್ದರೆ ಬಹುಶಃ ಗಂಡು, ಹೆಣ್ಣು ಎಂಬ ತಾರತಮ್ಯವಿಲ್ಲದಂತಾಗುತ್ತದೆ. ಮಗನಿರಲಿ, ಮಗಳಿರಲಿ ಮಕ್ಕಳಿಗಾಗಿ ಸಡಗರ ಪಡಬೇಕು, ಸಂಭ್ರಮಿಸಬೇಕು. ಇಂದು ತುಂಬಾ ಮನೆಗಳಲ್ಲಿ ಅವು ಸಾಧ್ಯವಾಗಿದೆಯಾದರೂ ಅದರ ಪೂರ್ಣ ಫ‌ಲಿತಾಂಶ ಸಿಕ್ಕಾಗ ಬಹುಶಃ ಈ ದಿನ ಆಚರಿಸುತ್ತಿರುವುದಕ್ಕೆ ಒಂದು ಅರ್ಥಬಂದಂತಾಗುತ್ತದೆ.

ಆಚರಣೆ
ಹೆಣ್ಣು ಮಕ್ಕಳಿಗೂ ಸ್ಥಾನಮಾನ ಸಿಗಬೇಕು. ಅವರ ಕುರಿತಾಗಿನ ಕೀಳರಿಮೆ ತೊಲಗಬೇಕು ಎಂಬ ಉದ್ದೇಶದಿಂದ 2012ರ ಅಕ್ಟೋಬರ್‌ 11ರಂದು ವಿಶ್ವಸಂಸ್ಥೆ ಈ ದಿನವನ್ನು ಆಚರಣೆಗೆ ತಂದಿತು. ಇದರ ಮುಖ್ಯ ಉದ್ದೇಶ ಹೆಣ್ಣು ಮಕ್ಕಳ ಬಗ್ಗೆ ಜಾಗೃತಿ ಮೂಡಿಸುವುದಾಗಿದೆ.

ಥೀಮ್‌
ಪ್ರತೀ ವರ್ಷ ಹೆಣ್ಣು ಮಕ್ಕಳ ಅಂತಾರಾಷ್ಟ್ರೀಯ ದಿನವನ್ನು ಒಂದು ಥೀಮ್‌ನೊಂದಿಗೆ ಆಚರಿಸಲಾಗುತ್ತದೆ. 2022ರ ಅಂತಾರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆಯ ಥೀಮ್‌ “ಈಗ ನಮ್ಮ ಸಮಯ- ನಮ್ಮ ಹಕ್ಕುಗಳು’ ಎಂಬುದಾಗಿದೆ. ಜಗತ್ತಿನಾದ್ಯಂತ ಮಹಿಳೆಯರ ಹಕ್ಕುಗಳ ಕುರಿತಾಗಿ ಜಾಗೃತಿ ಮೂಡಿಸಿ ಆಕೆಯನ್ನು ಸಬಲೆಯನ್ನಾಗಿಸುವುದು ಮತ್ತು ಆಕೆಗೆ ಗೌರವಪೂರ್ಣ ಬದುಕು ಕಲ್ಪಿಸು ವಂತೆ ಮಾಡುವುದೇ ಇದರ ಉದ್ದೇಶವಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next