ಮೈಸೂರು: ಅಂತಾರಾಷ್ಟ್ರೀಯ ಯೋಗಾ ದಿನ ಅಂಗವಾಗಿ ನಗರದಲ್ಲಿ ಯೋಗಾಸಕ್ತರು ತಮ್ಮ ಮನೆಯಲ್ಲಿಯೇ ಯೋಗಾಸನ ಪ್ರದರ್ಶಿಸುವ ಮೂಲಕ ಯೋಗ ದಿನ ಆಚರಿಸಿದರು. 6ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಹಿನ್ನೆಲೆಯಲ್ಲಿ ಯೋಗ ತವರು ಮೈಸೂರಲ್ಲಿ ಸರಳವಾಗಿ ಆಚರಿಸಲಾಯಿತು.
ಕಳೆದ 5 ವರ್ಷಗಳಿಂದ ಸಹಸ್ರಾರು ಜನರ ಸಮ್ಮುಖದಲ್ಲಿ ನಡೆಯುತ್ತಿದ್ದ ಯೋಗ ದಿನಾಚರಣೆ ಕೋವಿಡ್ 19 ಸೋಂಕು ನಿಯಂತ್ರಣಕ್ಕಾಗಿ ಯೋಗ ಗುರುಗಳು, ಯೋಗಾಸಕ್ತರು ತಮ್ಮ ತಮ್ಮ ಮನೆಯ ಮಹಡಿ, ಅಂಗಳದಲ್ಲಿ ಯೋಗಾಸನದ ವಿವಿಧ ಭಂಗಿಗಳನ್ನು ಪ್ರದರ್ಶಿಸುವ ಮುಖೇನ ಯೋಗಾ ದಿನಾಚರಣೆಗೆ ಮೆರುಗು ನೀಡಿದರು.
ಅರಮನೆ ಆವರಣದಲ್ಲಿ: ಕೋವಿಡ್-19 ಹಿನ್ನೆಲೆಯಲ್ಲಿ ಮನೆಗಳಲ್ಲಿ ಯೋಗ ಮಾಡುವವರ ಅನುಕೂಲಕ್ಕಾಗಿ ಜಿಲ್ಲಾಡಳಿತ ಹಾಗೂ ಯೋಗ ಸಂಸ್ಥೆಗಳ ಸಹಯೋಗದಲ್ಲಿ ಅರಮನೆ ಆವರಣದಲ್ಲಿ ಭಾನುವಾರ ಯೋಗಾಸನ ಪ್ರದರ್ಶನ ಆಯೋಜಿಸಿ ಫೇಸ್ ಬುಕ್‌ನಲ್ಲಿ ನೇರ ಪ್ರಸಾರ ಮಾಡಲಾಯಿತು. ಫೇಸ್‌ಬುಕ್ ನೇರ ಪ್ರಸಾರವನ್ನು ವೀಕ್ಷಿಸುವ ಮೂಲಕ ಯೋಗಾಸಕ್ತರು ತಮ್ಮ ಮನೆಯಲ್ಲಿಯೇ ಯೋಗ ಪ್ರದರ್ಶಿಸಿದರು.
ಎಸ್‌ಎಸ್ ಯೋಗ ಫೌಂಡೇಷನ್ ಮುಖ್ಯಸ್ಥ ಶ್ರೀಹರಿ ಮಾತನಾಡಿ, ಕಳೆದ ಐದು ವರ್ಷಗಳಿಂದ ಅರಮನೆಯ ಆವರಣದಲ್ಲಿ ಸಹಸ್ರಾರು ಯೋಗ ಪಟುಗಳೊಂದಿಗೆ ಯೋಗ ದಿನಾಚರಣೆ ಆಚರಿಸುತ್ತದ್ದೆವು. ಆದರೆ ಈ ಬಾರಿ ಕೋವಿಡ್ 19 ಸೋಂಕು ತಡೆಗಟ್ಟಲು ಮನೆಗಳಲ್ಲೇ ಆಚರಿಸುವಂತೆ ಮನವಿ ಮಾಡಲಾಗಿದೆ. ಮೈಸೂರು ರಾಜರ ಕಾಲದಿಂದಲೂ ಯೋಗಕ್ಕೆ ವಿಶೇಷ ಸ್ಥಾನಮಾನ ನೀಡಲಾಗಿದೆ.
ಆದರೆ ಇಂದಿನ ಬಿಕ್ಕಟ್ಟಿನ ಸಂದರ್ಭದಲ್ಲಿ ಯೋಗಾ ಸ್ತಕರು ತಮ್ಮ ತಮ್ಮ ಮನೆಯಲ್ಲಿ ಯೋಗಾಭ್ಯಾಸ ಮಾಡಿ ರೋಗನಿರೋಧಕ ಶಕ್ತಿಯನ್ನು ವೃದಿಸಿಕೊಳ್ಳಬೇಕು ಎಂದು ತಿಳಿಸಿದರು. ಈ ವೇಳೆ ಶ್ರೀ ಪತಂಜಲಿ ಯೋಗ ಶಿಕ್ಷಣ ಸಂಸ್ಥೆಯ ರವಿಶಂಕರ್, ಮೈಸೂರು ಯೋಗ ನ್ಪೋರ್ಟ್ಸ್ ಫೌಂಡೇಷನ್‌ನ ಗಣೇಶ್ ಕುಮಾರ್, ಬಾಬಾ ರಾಮ್ ದೇವ್ ಪತಂಜಲಿ ಯೋಗ ಶಿಕ್ಷಣ ಸಮಿತಿಯ ಶಶಿಕುಮಾರ್, ಮೈಸೂರು ಯೋಗ ಒಕ್ಕೂಟದ ಬಿ.ಪಿ.ಮೂರ್ತಿ ಇದ್ದರು. ವಿವಿಧೆಡೆ ಯೋಗಾ ಫೆಡರೇಷನ್ ಹಾಗೂ ಸಂಘ-ಸಂಸ್ಥೆಗಳು ಮನೆಯ ತಾರಸಿಯಲ್ಲಿ ನಡೆದ ಯೋಗ ಪ್ರದರ್ಶನವನ್ನು ಡ್ರೋನ್ ಮೂಲಕ ಸೆರೆ ಹಿಡಿಯಲಾಯಿತು.
ಆಸನಗಳ ಪ್ರದರ್ಶನ: ಯೋಗಭ್ಯಾಸದಲ್ಲಿ ತಾಡಾಸನ, ವೃಕ್ಷಾಸನ, ಪಾದ ಹಸ್ತಾಸನ, ಅರ್ಧ ಚಕ್ರಾಸನ, ತ್ರಿಕೋಣಾಸನ, ಸಮದಂಡಾಸನ, ಭದ್ರಾ ಸನ, ವಜ್ರಾಸನ, ಅರ್ಧ ಉಷ್ಟ್ರಾಸನ, ಶಶಂಕಾಸನ, ಪವನ ಮುಕ್ತಾಸನ, ಮಕರಾಸನ, ಭುಜಂಗಾಸನ, ಸೇತು ಬಂದಾಸನ, ಅರ್ಧ ಹಲಾಸನ ಸೇರಿದಂತೆ ಇನ್ನಿತರ ಆಸನಗಳು ಹಾಗೂ ಪ್ರಾಣಾಯಾ ಮವನ್ನು ಸರ್ಕಾರದ ಶಿಷ್ಟಾಚಾರದಂತೆ ಅಭ್ಯಾಸ ಮಾಡಲಾಯಿತು.