Advertisement
ಮೂರ್‍ನಾಲ್ಕು ದಶಕಗಳ ಹಿಂದಿನ ಮಾತು. ಆ ವೇಳೆ ರಾಜ್ಯದ ರಾಜಕೀಯವು ಇಷ್ಟೊಂದು ಗೊಂದಲಮಯವಾಗಿರಲಿಲ್ಲ. ಏಕೆಂದರೆ ಚುನಾವಣಾ ಕಣಕ್ಕೆ ಇಳಿಯುತ್ತಿದ್ದ ವಿವಿಧ ಪಕ್ಷಗಳ ಅಭ್ಯರ್ಥಿಗಳು ಸಾಮಾನ್ಯವಾಗಿ ಮೊದಲು ಸಾಮಾಜಿಕ ಕಾರ್ಯ ಕರ್ತರಾಗಿ ಗುರುತಿಸಿಕೊಂಡು ನಂತರ ಜನತೆಯ ಒತ್ತಾಸೆಯ ಮೇರೆಗೆ ಚುನಾವಣಾ ಆಖಾಡಕ್ಕೆ ಇಳಿಯುತ್ತಿದ್ದರು. ಆ ರೀತಿ ಪರಿಗಣಿಸಲ್ಪಟ್ಟವರ ಪೈಕಿ ಸಿರಿವಂತರೆಂದೆನಿಸಿಕೊಂಡವರ ಸಂಖ್ಯೆ ಕೇವಲ ಬೆರಳೆಣಿಕೆಯಷ್ಟು ಮಾತ್ರ. ಅಂತಹ ಕೆಲವರನ್ನು° ಹೊರತು ಪಡಿಸಿ ಇತರರಿಗೆ ಬಂಡವಾಳಶಾಹಿಗಳ ಅವಶ್ಯಕತೆಯಂತೂ ಇದ್ದೇ ಇರುತ್ತಿತ್ತು. ಕೈಗಾರಿಕೋದ್ಯಮಿಗಳು, ಮದ್ಯದ ದೊರೆಗಳು, ಜಮೀನಾªರರು ಇತ್ಯಾದಿ ಸಮಾಜದ ಕುಬೇರರ ಮುಂದೆ ಹೆಚ್ಚಿನ ಪಕ್ಷಗಳ ಅಭ್ಯರ್ಥಿಗಳು ಕೈಕಟ್ಟಿ ನಿಲ್ಲುತ್ತಿದ್ದರು. ಪರಿಣಾಮವಾಗಿ ಧನಬಲ ಒದಗಿಸಿದವರೇ ಮುಂದೆ “ಕಿಂಗ್ ಮೇಕರ್’ಗಳಾ ಗುತ್ತಿದ್ದರು. ಅಂತಹ ಪರಿಸ್ಥಿತಿಯನ್ನು ಮನಗಂಡೋ ಏನೋ ರಾಜ್ಯದ ಮಾಜಿ ಮುಖ್ಯಮಂತ್ರಿ ದಿ. ರಾಮಕೃಷ್ಣ ಹೆಗಡೆಯವರು ಒಂದು ಮಾತನ್ನು ಆಗಾಗ ಉಲ್ಲೇಖೀಸುತ್ತಿದ್ದರು. “ಈ ದೇಶದಲ್ಲೂ ಕೂಡಾ ಬ್ರಿಟನ್ ಮಾದರಿಯ ಚುನಾವಣಾ ವ್ಯವಸ್ಥೆ ಇರುತ್ತಿದ್ದರೆ ಬಹುಶಃ ರಾಜಕಾರಣಿಗಳು ರಬ್ಬರ್‌ಸ್ಟಾಂಪಾಗಿ ಬದುಕುವುದಾದರೂ ತಪ್ಪುತ್ತಿತ್ತೇನೋ?’ ಆ ನುಡಿಯ ಮೊನಚು ಎತ್ತ ನಾಟುತ್ತದೆ ಯೋಚಿಸಿರಿ.
“ಮಿನಿ ಕುಬೇರನೇ’ ಆಗಿದ್ದಾನೆ. ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳು ಹಣಕ್ಕಾಗಿ ಯಾರ ಮುಂದೆಯೂ ತಲೆಬಾಗಿ ಕುಳಿತಿರಬೇಕಾಗಿಲ್ಲ. ಅಭ್ಯರ್ಥಿಗಳ ಮನೆ ಮುಂದೆ ಕಾರ್ಯಕರ್ತರ ತಂಡ ಸಾಲುಸಾಲಾಗಿ ಖಾಲಿ ಸೂಟ್‌ಕೇಸ್ ಸಹಿತ ಕಾಯುತ್ತಿರುತ್ತದೆ. ಇಂತಹ ಸೂಟ್‌ಕೇಸ್‌ಗಳು ಅಲ್ಲಿಂದ ನಿರ್ಗಮಿಸುವ ವೇಳೆ ಭಾರವಾಗಿರುತ್ತವೆ. ಒಟ್ಟಾರೆ ಹೇಳುವುದಾದರೆ ಇಂದು ಲೋಕಸಭೆ-ವಿಧಾನಸಭೆಗಳಿಗೆ ಸ್ಪರ್ಧಿಸುವ ಬಹುತೇಕ ಅಭ್ಯರ್ಥಿಗಳು ಬೃಹತ್ ಉದ್ಯಮಪತಿ ರಾಜಕಾರಣಿಗಳೇ ಆಗಿದ್ದಾರೆ ಅಥವಾ ಕೋಟಿ, ಮಿಲಿಯಗಳನ್ನು ದಾಟಿದ ಬಿಲಿಯಾಧಿ ಪತಿಗಳಾಗಿದ್ದಾರೆ. ಪಕ್ಷಗಳು ನೀಡುವ ಕಿಂಚಿತ್ ಫಂಡ್‌ಗಾಗಿ ಇಂತಹವರು ಕಾಯುವುದಿಲ್ಲ. ತಮ್ಮ ಚುನಾವಣಾ ಟಿಕೇಟ್‌ನ ಖಾತರಿಗಾಗಿ ತಾವೇ ಪಕ್ಷಕ್ಕೆ ಫಂಡ್ ಒದಗಿಸುತ್ತಾರೆ. ಹೈಕಮಾಂಡ್ ಗಟ್ಟಿಯಾದರೆ ತಾವೂ ಬಲಿಷ್ಠರಾಗುತ್ತೇವೆ ಎನ್ನುವುದು ಅವರಿಗೆ ತಿಳಿದಿದೆ. ಬಹುತೇಕ ಎಲ್ಲಾ ಪಕ್ಷಗಳಿಗೂ ಸಾಮಾನ್ಯವಾಗಿ ಈ ಮಾತು ಅನ್ವಯಿಸುತ್ತದೆ. ಸರ್ವೋಚ್ಚ ನ್ಯಾಯಾಲಯವು ರಾಜಕೀಯದಲ್ಲಿ ಬಂಡವಾಳ ಶಾಹಿ ರಾಜಕಾರಣಿಗಳ ಆಟಾಟೋಪವನ್ನು ಕಂಡು ದಂಗು
ಬಡಿದು ಈ ಕುರಿತು ಮಾಹಿತಿ ಪಡೆಯಲು ಸ್ವಯಂಪ್ರೇರಿತ ಆಜ್ಞೆಯೊಂದನ್ನು ಹೊರಡಿಸಿತು. ಆ ವೇಳೆ ಮಿಲಿಯಾಧಿಪತಿ
ಗಳಾದ ಕೆಲವು ರಾಜಕೀಯ ನಾಯಕರು ತಲೆಕೆಡಿಸಿಕೊಂಡರು. ನಂತರ ಎಲ್ಲವೂ ಅಲ್ಲೇ ತಣ್ಣಗಾಯಿತು. ಇದು ಏಕೆ ಹೀಗಾಯಿತು? ಈ ಪ್ರಶ್ನೆಗೆ ಉತ್ತರ ಹೇಳುವವರೂ ಇಲ್ಲ, ಪ್ರಶ್ನಿಸುವವರಂತೂ ಮೊದಲೇ ಇಲ್ಲ.
Related Articles
Advertisement
ಕರಾವಳಿಯ ಸಚಿವರೊಬ್ಬರು ಹಿಂದೆ ಒಂದು ಸಂದರ್ಶನದಲ್ಲಿ “ತಮ್ಮ ಕ್ಷೇತ್ರದಲ್ಲಿ ನಿರ್ವಹಿಸುವ ಕಾಮಗಾರಿಗಳಲ್ಲಿ ಕ್ಷೇತ್ರದ ಶಾಸಕರಿಗೆ ಶೇ. 25ರಷ್ಟು ಕೆಲವೊಮ್ಮೆ ಅದಕ್ಕಿಂತಲೂ ಅಧಿಕ ಕಮಿಷನ್ ದೊರೆಯುತ್ತದೆ. ನಾನಂತೂ ಅದನ್ನು ಪಡೆಯು ವುದಿಲ್ಲ’ಎಂದಿದ್ದರು. ಇದು ಸಚಿವ, ಶಾಸಕ, ಕಾರ್ಪೊರೇಟರ್, ಪುರಸಭಾ ಸದಸ್ಯ ಎಲ್ಲರಿಗೂ ಅನ್ವಯಿಸುತ್ತದೆ. ಈ ನೆಲೆಯಲ್ಲಿ ಓರ್ವ ಸಚಿವ ಅಥವಾ ಶಾಸಕನ ವಾರ್ಷಿಕ ಆದಾಯದ ಲೆಕ್ಕ ಹಾಕಿದರೆ ನಮ್ಮ ಜನತೆಯ ಬೆವರಿನ ಬೆಲೆಯ ಕುರಿತು ಮರುಕವಾಗುತ್ತದೆ. ಸಚಿವರ ಗೂಟದ ಕಾರು, ಐಷಾರಾಮಿ ಬಂಗಲೆ, ದೂರವಾಣಿ ಬಿಲ್ಲು, ರಕ್ಷಣಾ ವೆಚ್ಚ ಪ್ರವಾಸ ಭತ್ಯೆ ಎಲ್ಲವನ್ನೂ ಭರಿಸುವ ಸರಕಾರ ಗೌರವಾನ್ವಿತವಾಗಿ ಐದಂಕಿಯ ಸಂಬಳವನ್ನೂ ನೀಡುತ್ತದೆ. ಅದರ ಜತೆ ಪಡೆಯುವ ಅನ್ಯ ಲಾಭಗಳು ಅನೇಕ.
ಇಂತಹ ಲಾಭದಾಯಕ ಹುದ್ದೆ ಯಾರಿಗೆ ತಾನೇ ಬೇಡ? ಬಿಳಿಯಾನೆಗಳನ್ನು ಸಾಕುವ ವ್ಯವಸ್ಥೆಯನ್ನು ಮಾತ್ರ ನಮ್ಮ ಸರಕಾರಗಳು ರೂಪಿಸಿವೆಯೇ ಹೊರತು, ಇಂತಹ ಬಿಳಿಯಾನೆ ಗಳನ್ನು ದುಡಿಸುವ “ರಿಂಗ್ ಮಾಸ್ಟರ’ನ್ನು ಮಾತ್ರ ಹುಡುಕುವ ಗೋಜಿಗೆ ಹೋಗಲಿಲ್ಲ. ಇಂತಹ ರಿಂಗ್ ಮಾಸ್ಟರಾಗಬೇಕಾದ ಮತದಾರ ಐದು ವರ್ಷಕ್ಕೊಮ್ಮೆ ಚಾಟಿ ಬೀಸಿದರೂ ಅದರ ಏಟಂತೂ ನಾಟುವುದೇ ಇಲ್ಲ. ಇದು ಮತದಾರನ ದುರಂತ.
ಉಳ್ಳಾಲ ಶ್ರೀನಿವಾಸ ಮಲ್ಯ, ವೈಕುಂಠ ಬಾಳಿಗಾ, ಟಿ.ಎ.ಪೈ, ಜಾರ್ಜ್ ಫೆರ್ನಾಂಡೀಸ್, ರಾಮಕೃಷ್ಣ ಹೆಗಡೆ, ಅಬ್ದುಲ್ ನಝೀರ್ ಸಾಬ್, ಡಾ| ಆಚಾರ್ಯ, ಕಾಪು ಭಾಸ್ಕರ ಶೆಟ್ಟಿ ಮೊದಲಾದವರ ಕಾಲದ ಜನೋಪಯೋಗಿ ಅಭಿವೃದ್ಧಿ ಕಾರ್ಯಗಳ ಜತೆಗೆ ಇಂದಿನ ಕೆಲವು ರಾಜಕಾರಣಿಗಳ ಬೃಹತ್ ಉದ್ಯಮಗಳು, ಪಂಚತಾರಾ ಹೊಟೇಲ್, ಕಾಫಿ, ಟೀ ಎಸ್ಟೇಟ್‌ಗಳು ಪರಸ್ಪರ ಸ್ಪರ್ಧಿಸುವಂತೆ ಭಾಸವಾಗುವುದಿಲ್ಲವೇ? ಈ ನಿಟ್ಟಿನಲ್ಲಿ ಒಂದು ಅನುಮಾನ ಕಾಡುತ್ತದೆ. ನಮಗೆ ಇಂತಹ ಬಂಡವಾಳಶಾಹಿ ರಾಜಕೀಯ ಹಾಗೂ ರಾಜಕಾರಣಿಗಳು ತೀರಾ ಅನಿವಾರ್ಯವೇ?
ಮೋಹನದಾಸ ಸುರತ್ಕಲ್