Advertisement

ಕಂದಕ ಸೃಷ್ಟಿಸುವ ಕೆಲಸ ಮಾಡಬೇಡಿ: ಶ್ರೀಶೈಲ ಶ್ರೀ

10:17 AM Jan 10, 2018 | Team Udayavani |

ವಿಜಯಪುರ: ವೀರಶೈವ ಹಾಗೂ ಲಿಂಗಾಯತರನ್ನು ಬೇರ್ಪಡಿಸಲು ಯಾರಿಂದಲೂ ಸಾಧ್ಯವಿಲ್ಲ. ವೀರಶೈವ ಹಾಗೂ ಲಿಂಗಾಯತರಲ್ಲಿ ಒಡಕು ಹಾಗೂ ಕಂದಕ ಸೃಷ್ಟಿಸುವ ಕೆಲಸವನ್ನು ಯಾರೂ ಮಾಡಬಾರದು ಎಂದು ಶ್ರೀಶೈಲ ಜಗದ್ಗುರು ಡಾ| ಚನ್ನಸಿದ್ಧರಾಮ ಪಂಡಿತಾರಾಧ್ಯ
ಶಿವಾಚಾರ್ಯ ಭಗವತ್ಪಾದರು ಹೇಳಿದರು.

Advertisement

ತಾಲೂಕಿನ ಬಬಲೇಶ್ವರ ಬೃಹನ್ಮಠದ ಆವರಣದಲ್ಲಿ ಜರುಗಿದ ಹಾಗಲ್‌ ಕುಮಾರ ಶಿವಯೋಗಿಗಳ 150ನೇ ಜಯಂತ್ಯುತ್ಸವ ಹಾಗೂ ವೀರಶೈವ-ಲಿಂಗಾಯತ ಸಮನ್ವಯ ಜನಜಾಗೃತಿ  ಸಮಾವೇಶದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು. ಲಿಂಗಾಯತ ಪ್ರತ್ಯೇಕ ಧರ್ಮದ ಹೋರಾಟದ ಮುಂಚೂಣಿಯ  ಲ್ಲಿರುವ ವ್ಯಕ್ತಿಗಳು ವೀರಶೈವ ಬೇರೆ, ಲಿಂಗಾಯತ ಬೇರೆ ಎಂದು ಒಂದು ಕಡೆ, ಇನ್ನೊಂದು ಕಡೆ ವೀರಶೈವ ಎನ್ನುವುದು ಲಿಂಗಾಯತ ಧರ್ಮದ 99 ಉಪಪಂಗಡಗಳಲ್ಲಿ ಒಂದು ಎಂದು ಹೇಳುವ ಮೂಲಕಗೊಂದಲ ಸೃಷ್ಟಿಸುತ್ತಿದ್ದಾರೆ. ಮೊದಲು ಅವರಲ್ಲಿ ಈ ಸ್ಪಷ್ಟತೆ ಇಲ್ಲ ಎಂದರು. 

ವೀರಶೈವ-ಲಿಂಗಾಯತ ಒಂದೇ, ಎಂದೆಂದಿಗೂ ಒಂದೇ, ಲಿಂಗಾಯತ-ವೀರಶೈವ ಒಂದು-ವಿಶ್ವವೇ ನಮ್ಮ ಬಂಧು ಎಂದರು. ಬಬಲೇಶ್ವರ ಬೃಹನ್ಮಠದ ಡಾ| ಮಹಾದೇವ ಶಿವಾಚಾರ್ಯರು ಪ್ರಾಸ್ತಾವಿಕ ಮಾತನಾಡಿದರು. ಜಾಲಹಳ್ಳಿಯ ಜಯ ಶಾಂತಲಿಂಗೇಶ್ವರ ಸ್ವಾಮಿಗಳು ಸೇರಿದಂತೆ ಹಲವಾರು ಮಠಾಧೀಶರು ಭಾಗವಹಿಸಿದ್ದರು.

ವಚನ ಸಾಹಿತ್ಯಕ್ಕೆ ಉನ್ನತ ಗೌರವ: ಉಜ್ಜಯಿನಿ ಶ್ರೀ
ವಿಜಯಪುರ: ಬಹಳಷ್ಟು ಜನರು ವಚನಗಳು ತಮ್ಮ ಆಸ್ತಿ ಎಂಬಂತೆ ಹಾಗೂ ಪಂಚ ಪೀಠಗಳಿಗೂ-  ವಚನಗಳಿಗೂ ಸಂಬಂಧವಿಲ್ಲ ಎಂಬಂತೆ ಮಾತನಾಡುತ್ತಿದ್ದಾರೆ. ಬಸವಾದಿ ಶರಣರು ಹಾಗೂ ವಚನ ಸಾಹಿತ್ಯಕ್ಕೆ ಪಂಚಾಚಾರ್ಯರು ಉನ್ನತ ಗೌರವ ನೀಡಿದ್ದಾರೆ ಎಂದು ಉಜ್ಜಯಿನಿ ಜಗದ್ಗುರು
ಸಿದ್ಧಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರು ಹೇಳಿದರು.

ವೀರಶೈವ-ಲಿಂಗಾಯತ ಸಮನ್ವಯದ ಜನ ಜಾಗೃತಿ ಸಮಾವೇಶದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿ, ಬಸವಣ್ಣನವರ ಮೇಲೆ ವಾಗೀಶ ಪಂಡಿತಾರಾಧ್ಯ ಶ್ರೀಗಳು ಉನ್ನತ ಸಂಶೋಧನೆ ಕೈಗೊಂಡಿದ್ದಾರೆ. ಈ ವಿಷಯವನ್ನು ಪ್ರತ್ಯೇಕವಾದಿಗಳು ಅರ್ಥ ಮಾಡಿಕೊಳ್ಳಬೇಕು ಎಂದರು. ಆಚರಣೆಯಿಂದ ವೀರಶೈವ, ಅನುಸರಣೆಯಿಂದ ಲಿಂಗಾಯತರಾಗಬೇಕು. ಯಾರನ್ನು ನಾವು ನಾಯಕರನ್ನಾಗಿಸಬೇಕು, ಯಾರನ್ನು ಒಪ್ಪಿಕೊಳ್ಳಬೇಕು ಎಂಬುದು ಆಲೋಚಿಸಿ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ತಮಗೆ ಕೊಟ್ಟ ಅಸ್ತ್ರ ಬಳಸಬೇಕು ಎಂದು ಕರೆ ನೀಡಿದರು.

Advertisement

ವೀರಶೈವ ಎನ್ನುವುದು ಧರ್ಮ, ಲಿಂಗಾಯತ ಎನ್ನುವುದು ಆಚರಣೆ. ಉದಾಹರಣೆ ಮೂಲಕ ವಿಶ್ಲೇಷಿಸುವುದಾದರೆ, ಇಸ್ಲಾಂ ಎನ್ನುವುದು ಧರ್ಮ, ನಮಾಜ್‌, ಹಜ್‌ ಹಾಗೂ ರೋಜಾ, ಜಕಾತ್‌ ಎನ್ನುವುದು ಆ ಧರ್ಮದ ಆಚರಣೆಗಳು. ಆಚರಣೆಗಳು ಎಂದ ಮಾತ್ರಕ್ಕೆ ನಮಾಜ್‌ ಎನ್ನುವುದು ಧರ್ಮವಾಗುವುದಿಲ್ಲ. ನಮಾಜ್‌ ಅನ್ನುವುದು ಧರ್ಮ ಎಂದು ಅವರು ಒಪ್ಪುವುದಿಲ್ಲ. ಅದರಂತೆ ವೀರಶೈವ ಎನ್ನುವುದು ಧರ್ಮ, ಲಿಂಗಾಯತ ಎನ್ನುವುದು ಆಚರಣೆ.
 ●ಡಾ| ಚಂದ್ರಶೇಖರ ಶಿವಾಚಾರ್ಯರು, ಕಾಶಿ ಜಗದ್ಗುರು 

Advertisement

Udayavani is now on Telegram. Click here to join our channel and stay updated with the latest news.

Next