Advertisement

ಬೇಡವೇ ಬೇಡ ಕ್ಯಾಂಟೀನ್‌ ಊಟ

11:52 AM Oct 30, 2018 | |

ಬೆಂಗಳೂರು: ಇಂದಿರಾ ಕ್ಯಾಂಟೀನ್‌ಗಳಿಂದ ಪೂರೈಕೆ ಮಾಡಲಾಗಿದ್ದ ಊಟ ಮಾಡದೆ ಅಸಡ್ಡೆ ತೋರಿದ ಪಾಲಿಕೆ ಸದಸ್ಯರು, ಖಾಸಗಿ ಹೋಟೆಲ್‌ನಿಂದ ಭರ್ಜರಿ ಊಟ ತರಿಸಿದ ತಿಂದ ಪ್ರಸಂಗ ಸೋಮವಾರ ನಡೆಯಿತು.

Advertisement

ಇಂದಿರಾ ಕ್ಯಾಂಟೀನ್‌ಗಳಲ್ಲಿ ನೀಡಲಾಗುತ್ತಿರುವ ಆಹಾರದ ರುಚಿ ಹಾಗೂ ಗುಣಮಟ್ಟ ಹೇಗಿದೆ ಎಂಬುದನ್ನು ಪಾಲಿಕೆ ಸದಸ್ಯರಿಗೆ ತಿಳಿಸುವ ಉದ್ದೇಶದಿಂದ ನೂತನ ಮೇಯರ್‌ ಗಂಗಾಂಬಿಕೆ ಅವರು ಸೋಮವಾರ ಪಾಲಿಕೆ ಸದಸ್ಯರು ಹಾಗೂ ಅಧಿಕಾರಿಗಳಿಗಾಗಿ ಇಂದಿರಾ ಕ್ಯಾಂಟೀನ್‌ನಿಂದ 500 ಜನರಿಗೆ ಊಟ ತರಿಸಲಾಗಿತ್ತು. ಆದರೆ, ಊಟ ತಿನ್ನುವ ಮೊದಲೇ ಇಂದಿರಾ ಕ್ಯಾಂಟೀನ್‌ ಊಟ ಕಳೆಪೆಯಾಗಿರುತ್ತದೆ.

ಬಡವರು ತಿನ್ನುವ ಊಟ ನಾವೇಕೆ ತಿನ್ನಬೇಕೆಂದು ಊಟ ಮಾಡದೆ ಸದಸ್ಯರು ಹೊರಟು ಹೋದರು. ಮೇಯರ್‌, ಆಯುಕ್ತರು ಹಾಗೂ ಆಡಳಿತ ಪಕ್ಷ ನಾಯಕ ಸೇರಿ ಭದ್ರತಾ ಸಿಬ್ಬಂದಿ ಮಾತ್ರ ಊಟ ಮಾಡುವಂತಾಯಿತು. ಹೀಗಾಗಿ ಸುಮಾರು 400 ಜನರಿಗಾಗುಷ್ಟು ಊಟ ಉಳಿದಿತ್ತು. ಜತೆಗೆ ಪಾಲಿಕೆ ಸದಸ್ಯರಿಗಾಗಿ ತರಿಸಲಾಗಿದ್ದ ಚಿಪ್ಸ್‌, ಬಿಸ್ಕತ್ತು ಪ್ಲೇಟುಗಳಲ್ಲಿಯೇ ಉಳಿದಿತ್ತು. 

ಹೋಟೆಲ್‌ ಊಟ ಬಲು ರುಚಿ: ಇಂದಿರಾ ಕ್ಯಾಂಟೀನ್‌ಗಳಲ್ಲಿ ಊಟದ ಗುಣಮಟ್ಟ ಹೆಚ್ಚಾಗಿಲ್ಲ, ರುಚಿ ಸರಿಯಾಗಿರುವುದಿಲ್ಲವೆಂದು ಪಾಲಿಕೆ ಸಭೆಗಳಲ್ಲಿ ಸದಾ ಆಡಳಿತ ಪಕ್ಷದ ವಿರುದ್ಧ ಆರೋಪ ಮಾಡುವ ವಿರೋಧ ಪಕ್ಷ ನಾಯಕ ಪದ್ಮನಾಭರೆಡ್ಡಿ ಅವರು, ಸೋಮವಾರ ಇಂದಿರಾ ಕ್ಯಾಂಟೀನ್‌ನಿಂದ ತರಿಸಲಾಗಿದ್ದ ಊಟ ಮಾಡಲು ಮುಂದಾಗಲಿಲ್ಲ. ಬದಲಿಗೆ, ಖಾಸಗಿ ಹೋಟೆಲ್‌ನಿಂದ ಊಟವನ್ನು ತರಿಸಿಕೊಂಡು ಊಟ ಮಾಡಿದರು.

ಈ ಕುರಿತು ಕೇಳಿದರೆ, ಮೇಯರ್‌ ಪ್ರಚಾರಕ್ಕಾಗಿ ತರಿಸಿದ್ದಾರೆಂದು ಹೇಳಿದರು. ಇನ್ನು ಒಮ್ಮೆಯೂ ಇಂದಿರಾ ಕ್ಯಾಂಟೀನ್‌ಗಳಲ್ಲಿ ಊಟ ಮಾಡಿಲ್ಲವೆಂದು ತಾವೇ ಹೇಳುವ ಬಿಜೆಪಿ ಅಟ್ಟೂರು ಪಾಲಿಕೆ ಸದಸ್ಯೆ ನೇತ್ರಾ ಪಲ್ಲವಿ, ಇಂದಿರಾ ಕ್ಯಾಂಟೀನ್‌ ಊಟ ಕಳಪೆಯಾಗಿರುತ್ತದೆ. ಹೀಗಾಗಿ ಊಟ ಮಾಡುತ್ತಿಲ್ಲ ಎಂದು ಆರೋಪಿಸಿದರು. 

Advertisement

ಇಂದಿರಾ ಕ್ಯಾಂಟೀನ್‌ ಊಟ – ಗಂಗಾಂಬಿಕೆ: ಈ ಕುರಿತು ಪ್ರತಿಕ್ರಿಯಿಸಿದ ಮೇಯರ್‌ ಗಂಗಾಂಬಿಕೆ ಅವರು, ಉಪಮೇಯರ್‌ ರಮೀಳಾ ಉಮಾಶಂಕರ್‌ ಅವರಿಗೆ ನಿಧನದ ಸಂತಾಪ ನಡೆಸಿ ಸಭೆಯನ್ನು ಮುಂದೂಡಿದರಿಂದ ಸಭೆಯಲ್ಲಿ ಊಟದ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಲು ಸಾಧ್ಯವಾಗಲಿಲ್ಲ. ಆದರೆ, ಹೊರಗೆ ಬಂದ ಕೂಡಲೇ ಎಲ್ಲ ಸದಸ್ಯರಿಗೆ ಊಟ ಮಾಡಿಕೊಂಡು ಹೋಗುವಂತೆ ಹೇಳಿದ್ದೇನೆ ಎಂದು ಹೇಳಿದರು.

ಇನ್ನು ಸಭೆ ಅವಧಿಗೂ ಮುನ್ನವೇ ಮುಕ್ತಾಯವಾಗಿದ್ದರಿಂದ ಸದಸ್ಯರು ಊಟ ಮಾಡುವುದಕ್ಕೆ ಬಾರದೇ ಹೋಗಿದ್ದು, ಇಂದಿರಾ ಕ್ಯಾಂಟೀನ್‌ ಊಟ ಎಂಬ ಕಾರಣಕ್ಕೆ ಸದಸ್ಯರು ಊಟ ಮಾಡದೆ ಹೋಗಿಲ್ಲ. ಇಂದಿರಾ ಕ್ಯಾಂಟೀನ್‌ ಊಟವನ್ನು ಸ್ವತಃ ಊಟ ಮಾಡಿದ್ದು ತುಂಬಾ ರುಚಿಯಾಗಿತ್ತು.

ಇಂದಿರಾ ಕ್ಯಾಂಟೀನ್‌ಗಳಲ್ಲಿ ಗುಣಮಟ್ಟದ ಊಟ ದೊರೆಯುತ್ತಿಲ್ಲ ಎಂಬ ದೂರುಗಳು ಬಂದ ಹಿನ್ನೆಲೆಯಲ್ಲಿ ಈ ಕ್ರಮಕ್ಕೆ ಮುಂದಾಗಿದ್ದೇವೆ ಎಂದು ಹೇಳಿದರು. ಸೋಮವಾರ ತರಿಸಲಾಗಿದ್ದ ಊಟವನ್ನೂ ಇಂದಿರಾ ಕ್ಯಾಂಟೀನ್‌ಗಳಿಗೆ ವಾಪಸ್‌ ಕಳುಹಿಸಿದ್ದ ಊಟ ವ್ಯರ್ಥವಾಗಿಲ್ಲ. ತಮ್ಮ ಅವಧಿಯಲ್ಲಿ ನಡೆಯುವಂತಹ ಎಲ್ಲ ಸಭೆಗಳಿಯೂ ಇಂದಿರಾ ಕ್ಯಾಂಟೀನ್‌ನಿಂದಲೇ ಊಟ ತರಿಸಲಾಗುವುದು ಎಂದು ಸ್ಪಷ್ಟಪಡಿಸಿದರು.

ಕೆಲ ಸದಸ್ಯರು ಇಂದಿರಾ ಕ್ಯಾಂಟೀನ್‌ನಿಂದ ತರಲಾದ ಊಟ ಮಾಡದೇ ಕಳಪೆ ಎಂದು ಆರೋಪ ಮಾಡಿವುದು ಸರಿಯಲ್ಲ.  ಮೇಯರ್‌, ಆಯುಕ್ತರು ಹಾಗೂ ತಾವು ಊಟ ಮಾಡಿದ್ದು, ತುಂಬಾ ಚನ್ನಾಗಿತ್ತು. ಇಂದಿರಾ ಕ್ಯಾಂಟೀನ್‌ನಲ್ಲಿ ಮುದ್ದೆ ಹಾಗೂ ಚಪಾತಿ ಬೇಕೆಂದು ಸಾರ್ವಜನಿಕರಿಂದ ಬೇಡಿಕೆ ಇದೆ. ಅದನ್ನು ಪಾಲಿಕೆ ಸಭೆಯಲ್ಲಿ ಚರ್ಚೆ ಮಾಡಿ ಮುಂದಿನ ತೀರ್ಮಾನ ತೆಗೆದುಕೊಳ್ಳಲಾಗುವುದು.
-ಎಂ.ಶಿವರಾಜು, ಆಡಳಿತ ಪಕ್ಷ ನಾಯಕ 

ಸಾಮಾನ್ಯವಾಗಿ ಪಾಲಿಕೆ ಸದಸ್ಯರು 2 ಗಂಟೆಗೆ ಮೊದಲು ಊಟ ಮಾಡುವುದಿಲ್ಲ. ಆದರೆ, ಸಂತಾಪ ಸಭೆಯಿದ್ದರಿಂದ ಬೇಗ ಸಭೆ ಮುಂದೂಡಿದ ಕಾರಣ ಅವರು ತಿನ್ನದೇ ಹೋಗಿರಬಹುದು. 
-ಎನ್‌.ಮಂಜುನಾಥ ಪ್ರಸಾದ್‌

ಕ್ಯಾಂಟೀನ್‌ ಊಟದಲ್ಲಿ ಏನಿತ್ತು?: ಶಾವಿಗೆ ಕೀರು, ರೈಸ್‌ಬಾತ್‌, ಉರುಳಿಕಾಯಿ ಪಲ್ಯ, ಮೊಸರು ಬಜ್ಜಿ, ಅನ್ನ-ಸಂಬಾರು, ಉಪ್ಪಿನಕಾಯಿ ಹಾಗೂ ಮೊಸರನ್ನ

ರಮೀಳಾ ಅವರಿಗೆ ಸಂತಾಪ: ಉಪಮೇಯರ್‌ ರಮೀಳಾ ಉಮಾಶಂಕರ್‌ ಅವರ ಅಕಾಲಿಕ ನಿಧನರಾದ ಹಿನ್ನೆಲೆಯಲ್ಲಿ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಸಂತಾಪ ಸೂಚಿಸಿ, ಸಭೆಯನ್ನು ಅ. 31ಕ್ಕೆ ಮುಂದೂಡಲಾಯಿತು. ಈ ಅವಧಿಯ ಮೇಯರ್‌ ಹಾಗೂ ಉಪಮೇಯರ್‌ ಅವರು ಪ್ರಥಮ ಸಭೆಯಾಗಬೇಕಿತ್ತು.

ಸಂಪ್ರದಾಯದಂತೆ ನೂತನ ಮೇಯರ್‌ ಮತ್ತು ಉಪಮೇಯರ್‌ ಅವರಿಗೆ ಅಭಿನಂದನೆಗಳನ್ನು ಸಲ್ಲಿಸುವ ಮೂಲಕ ಆರಂಭವಾಗಬೇಕಿದ್ದ ಸಭೆ ಇತ್ತೀಚೆಗೆ ಹೃದಯಾಘಾತದಿಂದ ನಿಧನರಾದ ಉಪಮೇಯರ್‌ ರಮೀಳಾ ಉಮಾಶಂಕರ್‌ ಅವರಿಗೆ ಸಂತಾಪ ಸೂಚಿಸಲು ಮೀಸಲಿಡಲಾಯಿತು. ಜತೆಗೆ ಕಾವೇರಿಪುರ, ವಿಜಯನಗರ ಯಾವುದಾದರೂ ಒಂದು ವೃತ್ತ, ರಸ್ತೆಗೆ ಅವರ ಹೆಸರಿಡಬೇಕು ಎಂದು ಹಲವು ಸದಸ್ಯರು ಮನವಿ ಮಾಡಿದರು.

ಮಧುಮೇಹಿಗಳಿಗಾಗಿ ಚಪಾತಿ, ಮುದ್ದೆ ಊಟ  
ಬೆಂಗಳೂರು:
ಮಧುಮೇಹಿಗಳ ಅನುಕೂಲಕ್ಕಾಗಿ ಇಂದಿರಾ ಕ್ಯಾಂಟೀನ್‌ಗಳು ಹಾಗೂ ಪಾಲಿಕೆ ಸಭೆಗಳಲ್ಲಿ ಮುದ್ದೆ ಹಾಗೂ ಚಪಾತಿ ಊಟ ನೀಡುವ ಕುರಿತು ಚರ್ಚೆ ನಡೆಯುತ್ತಿದ್ದು, ಶೀಘ್ರದಲ್ಲಿಯೇ ಈ ಕುರಿತು ನಿರ್ಧರ ಕೈಗೊಳ್ಳುವ ಸಾಧ್ಯತೆಯಿದೆ. 

ಮೇಯರ್‌ ಗಂಗಾಂಬಿಕೆ ಹಾಗೂ ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ್ದು, ಮಧುಮೇಹ ಇರುವ ಪಾಲಿಕೆ ಸದಸ್ಯರಿಗೆ ಅನುಕೂಲವಾಗುವಂತೆ ಮುಂದಿನ ದಿನಗಳಲ್ಲಿ ಚಪಾತಿ ಹಾಗೂ ಮುದ್ದೆ ಊಟ ನೀಡುವ ಕುರಿತು ಚರ್ಚೆ ನಡೆಸಿದ್ದು, ಶೀಘ್ರದಲ್ಲಿಯೇ ಈ ಕುರಿತು ತೀರ್ಮಾನ ಕೈಗೊಳ್ಳಲು ತೀರ್ಮಾನಿಸಿದ್ದಾರೆ. 

ಮುದ್ದೆ, ಚಪಾತಿ ಊಟ ನೀಡಬೇಕಾದರೆ ಹೆಚ್ಚಿನ ಅನುದಾನ ಬೇಕಾಗುತ್ತದೆ. ಪಾಲಿಕೆಯಿಂದ ಹೆಚ್ಚುವರಿ ಮೊತ್ತ ಭರಿಸಿದರೆ ಅಂತಹ ಊಟ ನೀಡಲು ಸಮಸ್ಯೆಯಿಲ್ಲ ಎಂದು ಆಯುಕ್ತರು ಹೇಳಿದ್ದಾರೆ. ಅಂತಿಮವಾಗಿ ಮುಂದಿನ ಪಾಲಿಕೆ ಸಭೆಯಲ್ಲಿ ಈ ಕುರಿತು ಚರ್ಚಿಸಿ ತೀರ್ಮಾನ ಕೈಗೊಳ್ಳಲು ನಿರ್ಧರಿಸಿದ್ದು, ಕೌನ್ಸಿಲ್‌ ಒಪ್ಪಿಗೆ ಸಿಕ್ಕರೆ ಮುಂದೆ ಇಂದಿರಾ ಕ್ಯಾಂಟೀನ್‌ಗಳಲ್ಲಿ  ಮುದ್ದೆ, ಚಪಾತಿ ಊಟ ದೊರೆಯುವ ಸಾಧ್ಯತೆಯಿದೆ.

Advertisement

Udayavani is now on Telegram. Click here to join our channel and stay updated with the latest news.

Next