ತಿಪಟೂರು: ಭೂ ಸಂತ್ರಸ್ತರ ಮೇಲೆ ಜಿಲ್ಲಾಡಳಿತ ಹಾಗೂ ಪೊಲೀಸ್ ದೌರ್ಜನ್ಯವನ್ನು ಖಂಡಿಸಿ ರಾಷ್ಟ್ರೀಯ ಹೆದ್ದಾರಿ 206 ಭೂ ಸಂತ್ರಸ್ತರ ಹೋರಾಟ ಸಮಿತಿ, ರೈತ ಕೃಷಿ ಕಾರ್ಮಿಕರ ಸಂಘಟನೆ ಹಾಗೂ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ವತಿಯಿಂದ ಸೋಮವಾರ ಪ್ರತಿಭಟನಾ ಕಾಲ್ನಡಿಗೆ ಜಾಥಾ ನಡೆಸಿ ಉಪವಿಭಾಗಾಧಿಕಾರಿ ಕೆ.ಆರ್.ನಂದಿನಿ ಅವರಿಗೆ ಮನವಿ ಸಲ್ಲಿಸಿದರು.
ಜಿಲ್ಲಾ ರೈತ ಸಂಘದ ಅಧ್ಯಕ್ಷ ಆನಂದ್ ಪಟೇಲ್ ಮಾತನಾಡಿ, ಎತ್ತಿನಹೊಳೆ ಹಾಗೂ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗೆ ಭೂಮಿ ನೀಡಿರುವ ರೈತರಿಗೆ ಸರ್ಕಾರ ನ್ಯಾಯಯುತ ಪರಿಹಾರ ನೀಡುವರೆಗೂ ರೈತರ ಜಮೀನಿಗೆ ಕಾಲಿಡಕೂಡದು. ಒಂದು ವೇಳೆ ಬಂದರೆ ಅಧಿಕಾರಿಗಳನ್ನು ಕಂಬಕ್ಕೆ ಕಟ್ಟಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಕಳೆದ 4 ವರ್ಷಗಳಿಂದ ತಾಲೂಕಿನ ರೈತರು ಭೂ ಪರಿಹಾರಕ್ಕಾಗಿ ಸರ್ಕಾರಿ ಇಲಾಖೆಗಳಿಂದ ಇಲಾಖೆಗಳಿಗೆ ಅಲೆ ದಾಡುತ್ತಿದ್ದು ಭೂಮಿ ಕಳೆದುಕೊಂಡ ರೈತರಿಗೆ ಪರಿಹಾರ ನೀಡದೇ ಸರ್ಕಾರ, ಜಿಲ್ಲಾಡಳಿತ ಪೊಲೀಸರಿಂದ ರೈತರ ಮೇಲೆ ದೌರ್ಜನ್ಯ ನಡೆಸುವ ಕೆಲಸ ಮಾಡುತ್ತಿದೆ. ಸರ್ಕಾರ ಹಾಗೂ ಅಧಿಕಾರಿಗಳು ಗುತ್ತಿಗೆ ದಾರರೊಂದಿಗೆ ಶಾಮೀಲಾಗಿ ಪೊಲೀಸ ರನ್ನು ತನ್ನ ಕೆಲಸಕ್ಕೆ ಬಳಸಿಕೊಳ್ಳುತ್ತಿದೆ ಎಂದು ಆರೋಪಿಸಿದರು.
ವಿನಾಕಾರಣ ಸುಳ್ಳು ಪ್ರಕರಣ ದಾಖ ಲಿಸಿಕೊಂಡಿದ್ದು, ಮುಂದಿನ ದಿನಗಳಲ್ಲಿ ಜೈಲುಭರೋ ಚಳವಳಿಗೂ ನಾವು ಸಿದವಿದ್ದು, ಹೋರಾಟ ಹತ್ತಿಕ್ಕುವ ಕೆಲಸ ಮಾಡಬೇಡಿ ಎಂದು ಪೊಲೀಸರಿಗೆ ಎಚ್ಚರಿಸಿದ ಅವರು, ರೈತ ಪರ ಎಂದು ಹೇಳಿಕೊಳ್ಳುವ ಸಿಎಂ ರೈತರ ಮೇಲೆಯೇ ಕೇಸು ಹಾಕಿಸುತ್ತಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯ ರೈತ ಸಂಘದ ಉಪಾಧ್ಯಕ್ಷ ಕೆಂಕೆರೆ ಸತೀಶ್, ಎತ್ತಿನಹೊಳೆ ಹೋರಾಟ ಸಮಿತಿ ಉಪಾಧ್ಯಕ್ಷ ಸಿ.ಬಿ.ಶಶಿಧರ್, ಆರ್.ಕೆ.ಎಸ್. ರಾಜ್ಯ ಸಮಿತಿ ಸದಸ್ಯ ಎಸ್.ಎನ್. ಸ್ವಾಮಿ, ರಾಜ್ಯ ರೈತ ಸಂಘದ ಮುಖಂಡರಾದ ಬೆನ್ನಾಯಕನಹಳ್ಳಿ ದೇವರಾಜು, ತಿಮ್ಲಾಪುರ ದೇವರಾಜು, ಆರ್.ಕೆಎಸ್ ಜಿಲ್ಲಾ ಮುಖಂಡ ಲೋಕೇಶ್, ಎತ್ತಿನಹೊಳೆ ಹೋರಾಟ ಸಮಿತಿ ಸಹ ಕಾರ್ಯದಶಿ ಆರ್.ಡಿ. ಯೋಗಾನಂದಸ್ವಾಮಿ, ಬಳ್ಳೆಕಟ್ಟೆ ಸಿದ್ದಲಿಂಗಮೂರ್ತಿ ಇತರರು ಇದ್ದರು.