Advertisement

ಕಳಪೆಯಾಗಿ ನೋಡಬೇಡಿ, ಸಿನಿಮಾ ಗೆದ್ದರೆ ಯೋಗ್ಯತೆ ಬರುತ್ತದೆ

05:51 AM Mar 12, 2019 | Team Udayavani |

ಸಾಮಾನ್ಯವಾಗಿ ಯಾವುದೇ ಚಿತ್ರವಿರಲಿ, ಅದು ಗೆದ್ದರೆ ಅಥವಾ ಸೋತರೆ ಅದರ ಮೊದಲ ಕ್ರೆಡಿಟ್‌ ಹೋಗುವುದು ಅದರ ನಾಯಕ ನಟನಿಗೆ. ಇದು ಆರಂಭದಿಂದಲೂ ಚಿತ್ರರಂಗದಲ್ಲಿ ನಡೆದುಕೊಂಡು ಬಂದಿರುವ ರೂಢಿ. ಒಂದು ಸಿನಿಮಾದ ಗೆಲುವು ಅಥವಾ ಸೋಲು ಅದರ ನಾಯಕ ನಟನನ್ನು ಯಾವ ಹಂತಕ್ಕೆ ಬೇಕಾದರೂ ಕರೆದುಕೊಂಡು ಹೋಗುತ್ತದೆ. ಇದಕ್ಕೆ ಚಿತ್ರರಂಗದಲ್ಲೂ ಕೂಡ ಹತ್ತಾರು, ಸಾಕ್ಷಾತ್‌ ನಿದರ್ಶನಗಳು ಸಿಗುತ್ತವೆ.

Advertisement

ಕೆಲವು ನಾಯಕ ನಟರು ಈ ವಾಸ್ತವವನ್ನು ಅರ್ಥ ಮಾಡಿಕೊಂಡು ಸಿನಿಮಾ ಮಾಡುತ್ತಾರೆ. ಇನ್ನು ಕೆಲವರಿಗೆ ಇದು ಅರ್ಥವಾಗುವುದಿಲ್ಲ. ಮತ್ತೆ ಕೆಲವರು ಅರ್ಥವಾದ್ರೂ ಅರ್ಥವಾಗದಂತೆ ಇರುತ್ತಾರೆ. ಈಗ ಯಾಕೆ ಈ ವಿಷಯ ಅಂತೀರಾ? ಅದಕ್ಕೊಂದು ಕಾರಣವಿದೆ. ಕನ್ನಡ ಚಿತ್ರರಂಗದಲ್ಲಿ ಹಲವು ನಾಯಕರ ಜೊತೆ ಸಹ ನಟನಾಗಿ, ಹಾಸ್ಯ ನಟನಾಗಿ ಅನೇಕ ಪಾತ್ರಗಳಲ್ಲಿ ಅಭಿನಯಿಸಿ, ನಂತರ ನಾಯಕ ನಟನಾಗಿ ಬಡ್ತಿ ಪಡೆದವರು ನೀನಾಸಂ ಸತೀಶ್‌.

ಚಿತ್ರರಂಗದಲ್ಲಿ ಸಾಕಷ್ಟು ಏಳು-ಬೀಳುಗಳನ್ನು ಕಂಡಿರುವ ಸತೀಶ್‌ ಕೇವಲ ನಟನಾಗಿ ಮಾತ್ರವಲ್ಲದೆ, ನಿರ್ಮಾಪಕನಾಗಿ, ಇದೀಗ ನಿರ್ದೇಶಕನಾಗಿಯೂ ಗುರುತಿಸಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ಸತೀಶ್‌ ತಮ್ಮೊಳಗಿರುವ ನಾಯಕ ನಟನ ಮನದಾಳದ ನೋವನ್ನು ಹಂಚಿಕೊಂಡಿದ್ದಾರೆ. ಸತೀಶ್‌ ಮೊದಲ ಬಾರಿಗೆ ಆ್ಯಕ್ಷನ್‌ ಹೀರೋ ಆಗಿ ಕಾಣಿಸಿಕೊಂಡಿದ್ದ “ಟೈಗರ್‌ ಗಲ್ಲಿ’ ಸಿನಿಮಾದ ಮೇಲೆ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದರು.

ಆದರೆ, ಆ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಸೋಲು ಕಂಡಿತು. ಆ ಚಿತ್ರ ಸೋತರೂ ಅದೇ ದಿನ “ಅಯೋಗ್ಯ’ ಸಿನಿಮಾ ಶುರು ಮಾಡಿದ್ದರು. ಆ ಚಿತ್ರ ಶುರುವಾದ ನಂತರ ಹತ್ತಾರು ಸಮಸ್ಯೆಗಳು ಎದುರಾಯಿತು. ಕೊನೆಗೆ ಈ ಎಲ್ಲ ಸಮಸ್ಯೆಗಳನ್ನು ಎದುರಿಸಿದ್ದ ಚಿತ್ರ ಅಂತಿಮವಾಗಿ ಜನರ ಮುಂದೆ ಗೆಲುವಿನ ನಗೆ ಬೀರಿತ್ತು. ಇದರ ಹಿಂದಿನ ನೋವನ್ನು ತೆರೆದಿಟ್ಟ ಸತೀಶ್‌, “ಯಾವ ಹೀರೋನು ಕಳಪೆಯಾಗಿ ನೋಡಬೇಡಿ.

ಆತ ಒಂದೇ ಒಂದು ಅವಕಾಶ, ಒಂದೇ ಸಿನಿಮಾದಿಂದ ಎದ್ದು ಬರುತ್ತಾನೆ. ಯಾರು ಏನು ಬೇಕಾದರೂ ಆಗಬಹುದು. ಅದಕ್ಕೆ ಯಾವ ಕಲಾವಿದರ ಬಗ್ಗೆ ಏನು ಹೇಳಬೇಡಿ. ಅಂದು ನೋವು ತಿಂದು, ನಾವು ಇವತ್ತು ಸಿನಿಮಾದ ಸಂಭ್ರಮಾಚರಣೆ ಮಾಡುತ್ತಿದ್ದೇವೆ. ಇದರ ಹಿಂದೆ ತುಂಬ ದುಃಖಗಳು ಇವೆ’ ಎಂದರು. “ಸಿನಿಮಾ ಗೆದ್ದರೇ ಎಲ್ಲ ನನ್ನಿಂದ, ನಂದೇ ಸಿನಿಮಾ ಎನ್ನುತ್ತಾರೆ. ಆದರೆ, ಸಿನಿಮಾ ಸೋತರೇ ಹೀರೋ ಮೇಲೆ ಹಾಕುತ್ತಾರೆ.

Advertisement

ಆ ಹೀರೋಗೆ ಓಪನಿಂಗ್‌ ಇಲ್ಲ, ಕಲೆಕ್ಷನ್‌ ಇಲ್ಲ, ಟಿವಿ ರೈಟ್ಸ್‌ ಸೇಲ್‌ ಆಗಲ್ಲ, ಕೈ ಇಲ್ಲ, ಕಾಲ್‌ ಇಲ್ಲ.. ಅದು ಇಲ್ಲ.. ಇದು ಇಲ್ಲ.. ಹೀಗೆ ಏನೇನೋ ಹೇಳುತ್ತಾರೆ. ಆದರೆ ಸಿನಿಮಾವೊಂದು ದೊಡ್ಡ ಮಟ್ಟದಲ್ಲಿ ಹಿಟ್‌ ಆದ್ರೆ ಆ ಎಲ್ಲಾ ಮಾತುಗಳು ನಿಂತು ಹೋಗುತ್ತದೆ’ ಎಂದರು. ಅಂದಹಾಗೆ, ಸತೀಶ್‌ ಅವರ ಈ ಮನದಾಳದ ಮಾತುಗಳಿಗೆ ವೇದಿಕೆಯಾಗಿದ್ದು, ಅವರೇ ಅಭಿನಯಿಸಿ, ಕಳೆದ ವರ್ಷ ಯಶಸ್ವಿ ಪ್ರದರ್ಶನ ಕಂಡಿದ್ದ “ಅಯೋಗ್ಯ’ ಚಿತ್ರದ ಶತದಿನೋತ್ಸವ ಮತ್ತು ಶ್ರೀನಿ ನಿರ್ದೇಶಿಸಿ, ನಟಿಸಿರುವ “ಬೀರ್‌ಬಲ್‌’ ಚಿತ್ರದ ಐವತ್ತನೇ ದಿನದ ಸಮಾರಂಭ.

ಇದೇ ವೇಳೆ “ಅಯೋಗ್ಯ’ ಸಿನಿಮಾವನ್ನು ಗೆಲ್ಲಿಸಿ, ತಮಗೆ ಮರಳಿ ಫಾರ್ಮ್ ಕಂಡುಕೊಳ್ಳುವಂತೆ ಮಾಡಿದ ಜನರಿಗೆ ಧನ್ಯವಾದ ಹೇಳಲು ಮರೆಯಲಿಲ್ಲ ಸತೀಶ್‌. ಈ ಎರಡೂ ಚಿತ್ರಗಳನ್ನು ಟಿ.ಆರ್‌.ಚಂದ್ರಶೇಖರ್‌ ತಮ್ಮ ಕ್ರಿಸ್ಟಲ್‌ ಪಾರ್ಕ್‌ ಸಿನಿಮಾಸ್‌ನಡಿ ನಿರ್ಮಿಸಿದ್ದಾರೆ. 100 ಹಾಗೂ 50ರ ಸಂಭ್ರಮದಲ್ಲಿ ಚಿತ್ರಕ್ಕೆ ದುಡಿದ ಎಲ್ಲರನ್ನು ಚಿತ್ರತಂಡ ಸನ್ಮಾನಿಸಿತು.

Advertisement

Udayavani is now on Telegram. Click here to join our channel and stay updated with the latest news.

Next