Advertisement

ಸಮನ್ಸ್‌ಗೆ ಉತ್ತರಿಸಬೇಕೆಂಬ ಅರಿವಿಲ್ಲವೇ?

12:14 PM Apr 11, 2018 | Team Udayavani |

ಬೆಂಗಳೂರು: “ಒಬ್ಬ ಐಎಎಸ್‌ ಅಧಿಕಾರಿಯಾಗಿ ಕೋರ್ಟ್‌ ಸಮನ್ಸ್‌ಗಳಿಗೆ ಶೀಘ್ರವಾಗಿ ಉತ್ತರಿಸಬೇಕು ಎಂಬುದು ತಿಳಿದಿಲ್ಲವೇ?’ ಎಂದು ಬಿಡಿಎ ಆಯುಕ್ತರನ್ನು ಮಂಗಳವಾರ ತರಾಟೆ ತೆಗೆದುಕೊಂಡಿರುವ ಹೈಕೋರ್ಟ್‌, ಭೂ ಸ್ವಾಧೀನ ವ್ಯಾಜ್ಯಕ್ಕೆ ಸಂಬಂಧಿಸಿದಂತೆ ಆಕ್ಷೇಪಣೆ ಸಲ್ಲಿಸದೆ ವಿಳಂಬ ಧೋರಣೆ ಅನುಸರಿಸಿದ ಬೆಂಗಳೂರು ಅಭಿವೃಧಿ ಪ್ರಾಧಿಕಾರದ ಕಾರ್ಯವೈಖರಿಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

Advertisement

ವ್ಯಕ್ತಿಯೊಬ್ಬರಿಗೆ ಸೇರಿದ ನಿವೇಶನವನ್ನು ಬಿಡಿಎ ಸ್ವಾಧೀನಪಡಿಸಿಕೊಂಡ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ವಿನೀತ್‌ ಕೊಠಾರಿ ಅವರಿದ್ದ ಏಕಸದಸ್ಯ ಪೀಠ, ವಿಚಾರಣೆಗೆ ಖುದ್ದು ಹಾಜರಿದ್ದ ಬಿಡಿಎ ಆಯುಕ್ತ ರಾಕೇಶ್‌ ಸಿಂಗ್‌ ಅವರನ್ನು ತೀವ್ರ ತರಾಟೆ ತೆಗೆದುಕೊಂಡಿತು.

ಬಿಡಿಎಗೆ ಸಂಬಂಧಿಸಿದ ಕೇಸುಗಳಿಗೆ ಆಕ್ಷೇಪಣೆಗಳನ್ನು ಸಲ್ಲಿಸಲು ವಿಳಂಬವಾಗುತ್ತಿದೆ. ಕೋರ್ಟ್‌ ಸಮನ್ಸ್‌ಗಳನ್ನು ಸರಿಯಾಗಿ ಪಾಲಿಸುವುದಿಲ್ಲ ಎಂದರೆ ಏನು ಅ‌ರ್ಥ? ಪ್ರಾಧಿಕಾರದ ಈ ಧೋರಣೆಯಿಂದ ಕಳೆದ ನಾಲ್ಕೈದು ವರ್ಷಗಳಿಂದ ಕೇಸುಗಳು ಇತ್ಯರ್ಥವಾಗದೇ ಬಾಕಿ ಉಳಿದುಕೊಂಡಿವೆ. ಇದರಿಂದ ನ್ಯಾಯ ಬಯಸಿ ಕೋರ್ಟ್‌ಗೆ ಬರುವವರಿಗೆ ತೊಂದರೆಯಾಗುತ್ತಿದೆ ಎಂದು ನ್ಯಾಯಪೀಠ ಆಕ್ರೋಶ ವ್ಯಕ್ತಪಡಿಸಿತು.

ನ್ಯಾಯಾಲಯದ ಆದೇಶಗಳನ್ನು ಪಾಲಿಸದ ಪ್ರಾಧಿಕಾರದ ಧೋರಣೆಯನ್ನು ಸಹಿಸಲು ಸಾಧ್ಯವಿಲ್ಲ. ಐಎಎಸ್‌ ಅಧಿಕಾರಿಗಳಾಗಿ ಈ ಬಗ್ಗೆ ನಿಮಗೆ ತಿಳಿಯುವುದಿಲ್ಲವೇ ಎಂದು ಆಯುಕ್ತರನ್ನು ಪ್ರಶ್ನಿಸಿದ ನ್ಯಾಯಪೀಠ, ಕೂಡಲೇ ನ್ಯಾಯಾಲಯದ ಕೇಸುಗಳಿಗೆ ಸಕ್ರಿಯವಾಗಿ ಸಹಕಾರ ನೀಡುವಂತೆ ನಿರ್ದೇಶಿಸಿತು.

ಅಲ್ಲದೆ, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಒಂದು ವಾರದೊಳಗೆ ಆಕ್ಷೇಪಣೆ ಸಲ್ಲಿಸಬೇಕು. ಇನ್ನು ಮುಂದೆ ಕೂಡ ಪ್ರಾಧಿಕಾರ ತಪ್ಪು ತಿದ್ದಿಕೊಳ್ಳದಿದ್ದರೆ ನ್ಯಾಯಾಲಯ ಸೂಕ್ತ ಕ್ರಮ ಕೈಗೊಳ್ಳಲಿದೆ ಎಂದು ಮೌಖೀಕ ಎಚ್ಚರಿಕೆ ನೀಡಿ ವಿಚಾರಣೆಯನ್ನು ಬುಧವಾರಕ್ಕೆ ಮುಂದೂಡಿತು.

Advertisement

ಪ್ರಕರಣ ಏನು?: ಬೆಂಗಳೂರು ಪೂರ್ವ ತಾಲೂಕಿನ ಕೆ.ನಾರಾಯಣಪುರದಲ್ಲಿ ತಮ್ಮ ಹೆಸರಿನಲ್ಲಿರುವ ನಿವೇಶನವನ್ನು ಬಿಡಿಎ ಸ್ವಾಧೀನಪಡಿಸಿಕೊಂಡಿದೆ. ನಿವೇಶನಕ್ಕೆ ಸಂಬಂಧಿಸಿದ ಎಲ್ಲ ದಾಖಲೆಗಳಿದ್ದರೂ ಅದನ್ನು ಪರಿಗಣಿಸದೆ ಸ್ವಾಧೀನ ಪಡೆದುಕೊಂಡಿರುವ ಬಿಡಿಎ ಆದೇಶ ರದ್ದುಗೊಳಿಸುವಂತೆ ಕೋರಿ ಎಚ್‌.ಎಂ.ಸುಬ್ರಮಣಿ ಎಂಬುವವರು 2015ರಲ್ಲಿ ಹೈಕೋರ್ಟ್‌ ಮೆಟ್ಟಿಲೇರಿದ್ದರು.

ಪ್ರಕರಣಕ್ಕೆ ಸಂಬಂಧಿಸಿದಂತೆ ಸೂಕ್ತ ಆಕ್ಷೇಪಣೆಗಳನ್ನು ಸಲ್ಲಿಸಿ ವಾದ ಮಂಡಿಸುವಂತೆ ಹಲವು ಬಾರಿ ಸೂಚನೆ ನೀಡಿದ್ದರೂ ಬಿಡಿಎ ವಿಳಂಬ ಧೋರಣೆ ಅನುಸರಿಸುತ್ತಿತ್ತು. ಇದರಿಂದ ಅಸಮಾಧಾನಗೊಂಡಿದ್ದ ನ್ಯಾಯಮೂರ್ತಿಗಳು ಖುದ್ದು ಹಾಜರಾಗಿ ವಿವರಣೆ ನೀಡುವಂತೆ ಬಿಡಿಎ ಆಯುಕ್ತರಿಗೆ ಸೂಚಿಸಿತ್ತು.  

Advertisement

Udayavani is now on Telegram. Click here to join our channel and stay updated with the latest news.

Next