Advertisement

ಮನೆ ಮಂಜೂರಾದರೂ ನಿರ್ಮಿಸಲು ಹಿಂದೇಟು

11:35 AM Oct 28, 2018 | Team Udayavani |

ಬೆಂಗಳೂರು: ವಸತಿ ಯೋಜನೆಯಡಿ ಮನೆ ಮಂಜೂರಾದರೂ ಫ‌ಲಾನುಭವಿಗಳು ನಿರ್ಮಿಸಲು ಮುಂದಾಗುತ್ತಿಲ್ಲ. ಹೌದು, ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿ ಅಧಿಕಾರಿಗಳೇ ಫ‌ಲಾನುಭವಿಗಳ ಮನೆಗೆ ಹೋಗಿ ದುಂಬಾಲು ಬಿದ್ದರೂ ವಸತಿ ನಿರ್ಮಾಣಕ್ಕೆ ಮನಸ್ಸು ಮಾಡುತ್ತಿಲ್ಲ. ಹೀಗಾಗಿ ಎರಡು ಸಾವಿರಕ್ಕೂ ಅಧಿಕ ವಸತಿಗಳ ನಿರ್ಮಾಣದ ಕಾರ್ಯ ನೆನೆಗುದಿಗೆ ಬಿದ್ದಿದೆ. ಸಕಾಲದಲ್ಲಿ ಮನೆ ನಿರ್ಮಾಣ ಮಾಡದ ಕಾರಣ ಯೋಜನೆ ಫ‌ಲಾನುಭವಿಗಳ ಕೈ ತಪ್ಪುವ ಸ್ಥಿತಿ ನಿರ್ಮಾಣವಾಗಿದೆ.

Advertisement

ಬೆಂಗಳೂರು ನಗರ ಪಂಚಾಯ್ತಿ ವ್ಯಾಪ್ತಿಯಲ್ಲಿ ರಾಜ್ಯ ಸರ್ಕಾರ ವಸತಿ ಇಲ್ಲದ ಕಡು -ಬಡವರಿಗಾಗಿ ಬಸವ ಯೋಜನೆಯಡಿ 5643 ನಿವಾಸಗಳನ್ನು ಮಂಜೂರು ಮಾಡಿದೆ. ಇದರಲ್ಲಿ 3562ಮನೆಗಳು ನಿರ್ಮಾಣಗೊಂಡಿವೆ. ಆದರೆ ಅನೇಕ ನಾನಾ ಕಾರಣಗಳಿಂದಾಗಿ ಇನ್ನೂ 2,081 ಮನೆಗಳ ನಿರ್ಮಾಣ ಕೆಲಸ ಆರಂಭವಾಗಿಲ್ಲ. ಕೇಂದ್ರ ಸರ್ಕಾರ  ಅಂಬೇಡ್ಕರ್‌ ಯೋಜನೆಯಲ್ಲಿ 1950 ನಿವಾಸಗಳನ್ನು ಮಂಜೂರು ಮಾಡಿದೆ. ಇದರಲ್ಲಿ 1726 ಮನೆಗಳ ನಿರ್ಮಾಣ ಕಾರ್ಯ ಸಂಪೂರ್ಣಗೊಂಡಿದ್ದು, ಇನ್ನೂ 224 ಮನೆಗಳ ನಿರ್ಮಾಣ ಪ್ರಾರಂಭವಾಗಿಲ್ಲ.

ಮರಳು, ಸಿಮೆಂಟ್‌ ಬೆಲೆ ಜಾಸ್ತಿ: ಫ‌ಲಾನುಭವಿಗಳಾಗಿ ಆಯ್ಕೆಗೊಂಡರೂ ಮನೆ ನಿರ್ಮಿಸದಿರಲು ಸಿಮೆಂಟ್‌, ಕಬ್ಬಿಣ, ಮರಳು, ಕಲ್ಲು ಸೇರಿದಂತೆ ಅಗತ್ಯ ಪರಿಕರಗಳ ಬೆಲೆ ದ್ವಿಗುಣಗೊಂಡಿರುವುದು ಕಾರಣ. ಬಸವ ಯೋಜನೆಯಡಿ ರಾಜ್ಯ ಸರ್ಕಾರ ಫ‌ಲಾನುಭವಿಗಳಿಗೆ 1,34,800 ರೂ.ನೀಡುತ್ತದೆ. ಆದರೆ  ಈ ಹಣದಲ್ಲಿ ಮನೆ ನಿರ್ಮಾಣ ಮಾಡಲು ಸಾಧ್ಯವಾಗುತ್ತಿಲ್ಲ. ಮರಳು, ಸಿಮೆಂಟ್‌, ಕಬ್ಬಿಣ ಬೆಲೆ ದಿನೇ ದಿನೇ ಹೆಚ್ಚಾಗುತ್ತಲೆ ಇದೆ. ಹೀಗಾಗಿ ಸರ್ಕಾರ ಕೊಡುವ ದುಡ್ಡಿನಲ್ಲಿ ಕಡು ಬಡವರು ಹೇಗೆ ಮನೆಕಟ್ಟಲು ಸಾಧ್ಯ ಎಂದು ಫ‌ಲಾನುಭವಿಗಳು ಪ್ರಶ್ನಿಸುತ್ತಾರೆ.

ಕೇಂದ್ರ ಸರ್ಕಾರ ಅಂಬೇಡ್ಕರ್‌ ನಿವಾಸ ಯೋಜನೆಯಡಿ ಅರ್ಹ ಫ‌ಲಾನುಭವಿಗಳಿಗೆ ಮನೆ ನಿರ್ಮಾಣಕ್ಕಾಗಿ 1,64,800 ರೂ. ಹಾಗೂ  ರಾಜ್ಯ ಸರ್ಕಾರ ಬಸವ ಯೋಜನೆಯಡಿ 1,34,800 ರೂ.ನೀಡುತ್ತದೆ. ಫ‌ಲಾನುಭವಿ ಮನೆಯ ಅಡಿಪಾಯ ಹಾಕಿದ ವೇಳೆ 35 ಸಾವಿರ ರೂ.ಬಿಡುಗಡೆ ಮಾಡಲಾಗುತ್ತದೆ.  ಉಳಿದ ಹಣವನ್ನು ಹಂತ -ಹಂತವಾಗಿ ನೀಡಲಾಗುತ್ತದೆ.ಒಂದೇ ವೇಳೆ ಫ‌ಲಾನುಭವಿ ವಸತಿ ನಿರ್ಮಾಣ ಮಾಡುವ ಕೆಲಸ 3 ತಿಂಗಳ ಒಳಗೆ ಆರಂಭಿಸದಿದ್ದರೆ.ಆತನಿಗೆ ಮಂಜೂರಾದ ಹಣ ಸರ್ಕಾರಕ್ಕೆ ವಾಪಸ್‌ ಆಗುತ್ತದೆ ಎಂದು ಬೆಂಗಳೂರು ನಗರ ಜಿಲ್ಲಾ ಪಂಚಾಯ್ತಿಯ ಹಿರಿಯ ಅಧಿಕಾರಿಯೊಬ್ಬರು ಉದಯವಾಣಿಗೆ ಮಾಹಿತಿ ನೀಡಿದ್ದಾರೆ.

ಆನೇಕಲ್‌ ತಾಲೂಕು ಪಂಚಾಯಿತಿ ವ್ಯಾಪ್ತಿಯಲ್ಲಿ ಶೇ.34.24ರಷ್ಟು, ಬೆಂಗಳೂರು ಪೂರ್ವ ತಾಲೂಕಿನಲ್ಲಿ ಶೇ.35.01ರಷ್ಟು, ಬೆಂಗಳೂರು ಉತ್ತರದಲ್ಲಿ ಶೇ.34.77ರಷ್ಟು ಮತ್ತು ಬೆಂಗಳೂರು ದಕ್ಷಿಣ ವ್ಯಾಪ್ತಿಯಲ್ಲಿ ಶೇ.39.53ರಷ್ಟು ವಸತಿ ನಿರ್ಮಾಣ ಮಾಡಲಾಗಿದ್ದು ಒಟ್ಟಾರೆ  ಶೇ.35.65 ರಷ್ಟು ಯೋಜನೆ ಕಾರ್ಯಗತಗೊಂಡಿದೆ. ರಾಜ್ಯಕ್ಕೆ ಹೋಲಿಕೆ ಮಾಡಿದಾಗ ಬೆಂಗಳೂರು ನಗರ ಜಿಲ್ಲಾಡಳಿತ ಯೋಜನೆ ಜಾರಿ ಪಟ್ಟಿಯಲ್ಲಿ 16ನೇ ಸ್ಥಾನದಲ್ಲಿದೆ ಎಂದು ಹೇಳುತ್ತಾರೆ.

Advertisement

ಕಡು ಬಡವರಿಗೆ ಸೂರು ಕಲ್ಪಿಸಬೇಕೆಂಬ ಉದ್ದೇಶದಿಂದ ಸರ್ಕಾರ ವಸತಿ ಯೋಜನೆ ರೂಪಿಸಿದೆ. ನಾನಾ ಕಾರಣಗಳಿಗಾಗಿ ಫ‌ಲಾನುಭವಿಗಳು ಮನೆ ನಿರ್ಮಾಣಕ್ಕೆ ತಡ ಮಾಡುತ್ತಿದ್ದಾರೆ. ಆದರೂ ಯೋಜನೆಯ ಸಂಪೂರ್ಣ ಯಶಸ್ಸಿಗಾಗಿ ಬೆಂಗಳೂರು ನಗರ ಜಿಲ್ಲಾ ಪಂಚಾಯ್ತಿ ಅಗತ್ಯ ಕ್ರಮಕೊಂಡಿದೆ.
-ಎಂ.ಎಸ್‌.ಅರ್ಚನಾ, ಬೆಂಗಳೂರು ನಗರ ಜಿ.ಪಂ ಸಿಇಒ

* ದೇವೇಶ ಸೂರಗುಪ್ಪ

Advertisement

Udayavani is now on Telegram. Click here to join our channel and stay updated with the latest news.

Next