Advertisement

ಉಪನಗರ ರೈಲು ಯೋಜನೆಗೆ ಹೊಸ ನಿಬಂಧನೆ ಬೇಡ

06:36 AM Jan 20, 2019 | Team Udayavani |

ಬೆಂಗಳೂರು: ರಾಜಧಾನಿ ಬೆಂಗಳೂರಿಗೆ ಅಗತ್ಯವಾಗಿರುವ ಉಪನಗರ ರೈಲು (ಸಬ್‌ಅರ್ಬನ್‌) ಯೋಜನೆಯನ್ನು ವಿಳಂಬ ಮಾಡದೆ, ಆದ್ಯತೆ ಮೇರೆಗೆ ಅನುಷ್ಠಾನಕ್ಕೆ ತರುವಂತೆ ಸಂಸದ ಪಿ.ಸಿ.ಮೋಹನ್‌ ಅವರು ಮುಖ್ಯಮಂತ್ರಿ ಕುಮಾರಸ್ವಾಮಿಯವರಿಗೆ ಪತ್ರಬರೆದು ಕೋರಿಕೊಂಡಿದ್ದಾರೆ.

Advertisement

ಬೆಂಗಳೂರಿನ ವಾಹನ ದಟ್ಟಣೆ ಸಮಸ್ಯೆಗೆ ಉಪನಗರ ರೈಲು ಯೋಜನೆ ದೀರ್ಘ‌ಕಾಲಿಕ ಮತ್ತು ಪರಿಣಾಮಕಾರಿ ಪರಿಹಾರವಾಗಿದೆ. ಉಪನಗರ ರೈಲು ವ್ಯವಸ್ಥೆ ಪೂರ್ಣವಾದರೆ ನಿತ್ಯ 35 ಲಕ್ಷ ಪ್ರಯಾಣಿಕರು ಇದರಲ್ಲಿ ಸಂಚರಿಸಲಿದ್ದಾರೆ. ಇದರಿಂದ ವಾಹನ ದಟ್ಟಣೆ ಶೇ.25ರಷ್ಟು ನಿಯಂತ್ರಣಕ್ಕೆ ಬರಲಿದೆ. ಈ ಯೋಜನೆ ವಿಳಂಬವಾದಷ್ಟು ಸಮಸ್ಯೆ ಹೆಚ್ಚಾಗುತ್ತದೆ ಎಂದು ಪತ್ರದಲ್ಲಿ ಉಲ್ಲೇಖೀಸಿದ್ದಾರೆ.

ಈ ಯೋಜನೆ ಜಾರಿಗೆ ರಾಜ್ಯ ಸರ್ಕಾರ ಹೊಸ 19 ನಿಬಂಧನೆಗಳನ್ನು ವಿಧಿಸಿರುವುದು ಸರಿಯಲ್ಲ. ರೈಲು ನಿಲ್ದಾಣಗಳ ನಡುವೆ 4ರಿಂದ 5 ಕಿ.ಮೀ ಅಂತರ ಇರಬೇಕು. ಮೊದಲು ಯೋಜನೆಯನ್ನು ಅನುಷ್ಠಾನ ಮಾಡಿ, ನಂತರದ ದಿನಗಳಲ್ಲಿ ರೈಲು ನಿಲ್ದಾಣದ ವಿಸ್ತರಣೆ ಮಾಡಬಹುದು. ಅದನ್ನು ಬಿಟ್ಟು ಅನುಷ್ಠಾನಕ್ಕೂ ಮೊದಲೇ ಷರತ್ತು ವಿಧಿಸಿರುವುದು ಸರಿಯಲ್ಲ ಎಂದು ತಿಳಿಸಿದ್ದಾರೆ.

ಕೇಂದ್ರ ಸರ್ಕಾರ ಕಳೆದ ವರ್ಷದ ಬಜೆಟ್‌ನಲ್ಲಿ 15,050 ಕೋಟಿ ರೂ.ಗಳನ್ನು ಈ ಯೋಜನೆಗೆ ನೀಡುವುದಾಗಿ ಘೋಷಿಸಿದೆ. ರಾಜ್ಯದ ಎಲ್ಲ ಬೇಡಿಕೆಗಳಿಗೂ ಕೇಂದ್ರ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸುತ್ತಿದೆ. ಯೋಜನೆಯ ವಿಸ್ತೃತ ಯೋಜನಾ ವರದಿಗೂ ತಾತ್ವಿಕ ಅನುಮೋದನೆ ಸಿಕ್ಕಿದೆ. ಹೀಗಾಗಿ ರಾಜ್ಯ ಸರ್ಕಾರ ಹೊಸದಾಗಿ ವಿಧಿಸಿರುವ ನಿಬಂಧನೆಗಳನ್ನು ಹಿಂದಕ್ಕೆ ಪಡೆದು, ಆದಷ್ಟು ಬೇಗ ಯೋಜನೆ ಅನುಷ್ಠಾನ ಮಾಡಬೇಕು ಎಂದು ಕೋರಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next