ವಾಷಿಂಗ್ಟನ್: ಏಳು ಇಸ್ಲಾಮಿಕ್ ದೇಶಗಳ ಮೇಲೆ ನಿರ್ಬಂಧ ಹೇರಿರುವ ಅಮೆರಿಕ ಅಧ್ಯಕ್ಷ ಟ್ರಂಪ್ ಎಲ್ಲೆಡೆ ಟೀಕೆಗೆ ಗುರಿಯಾಗಿದ್ದು, ಮುಜುಗರ ತಪ್ಪಿಸಿಕೊಳ್ಳಲು ನಿರ್ಬಂಧ ಸಡಿಲಿಸಲು ಮುಂದಾಗಿದ್ದಾರೆ. “ಅಮೆರಿಕದಲ್ಲಿ ಗ್ರೀನ್ ಕಾರ್ಡ್ ಹೊಂದಿರುವ ಈ ದೇಶಗಳ ಪ್ರಜೆಗಳಿಗೆ ಈ ನೀತಿ ಅನ್ವಯವಾಗದು. ಗ್ರೀನ್ ಕಾರ್ಡ್ ಹೊಂದಿರುವ ಇಸ್ಲಾಮಿಕ್ ದೇಶಗಳ ಪ್ರಜೆಗಳು ಅಮೆರಿಕಕ್ಕೆ ಬರಲು ಅಭ್ಯಂತರವಿಲ್ಲ’ ಎಂದು ವೈಟ್‌ಹೌಸ್ ವಕ್ತಾರ ಸೀನ್ ಸ್ಪೈಸರ್ ಹೇಳಿದ್ದಾರೆ. ಈ ನೀತಿ ಹೊರಬರುತ್ತಿದ್ದಂತೆ ಅಮೆರಿಕದ ಬೇರೆ ಬೇರೆ ವಿಮಾನ ನಿಲ್ದಾಣದಿಂದ ಹೊರಡಲು ಅಣಿಯಾಗಿದ್ದ 1000ಕ್ಕೂ ಅಧಿಕ ಗ್ರೀನ್‌ಕಾರ್ಡ್ ಪ್ರಜೆಗಳನ್ನು ಸುಂಕ ಮತ್ತು ಗಡಿ ರಕ್ಷಣಾಧಿಕಾರಿಗಳು ತಡೆಹಿಡಿದು, ನಿಶ್ಚಿಂತರಾಗಿ ಅಮೆರಿಕದಲ್ಲಿ ನೆಲೆಸಲು ಸೂಚಿಸಿದ್ದಾರೆ. ಉಳಿದಂತೆ ಏಳು ಇಸ್ಲಾಮಿಕ್ ರಾಷ್ಟ್ರದ ವಲಸಿಗರಿಗೆ 90 ದಿನಗಳ ವರೆಗೆ ಅಮೆರಿಕ ಪ್ರವೇಶ ನಿರ್ಬಂಧವಿದೆ. ನಿಯಮ ಜಾರಿಯಾದ ಕೂಡಲೇ ಅಮೆರಿಕದಾದ್ಯಂತ ಪ್ರತಿಭಟನೆ, ಧರಣಿಗಳು ನಡೆದಿದ್ದವು.