Advertisement

ಸರಕಾರಿ ಬಸ್‌ ಪೈಪೋಟಿ ಬೇಡ; ರಾಷ್ಟ್ರೀಕರಣ ಮಾಡಿ

06:40 AM Aug 31, 2017 | Team Udayavani |

ಉಡುಪಿ: ಸಮಯ ಪಾಲನೆ ಮಾಡದೆ ನಿಯಮ ಉಲ್ಲಂಘಿಸಿ ಸರಕಾರಿ ಬಸ್‌ಗಳು ಖಾಸಗಿ ಬಸ್‌ಗಳೊಂದಿಗೆ ಅನಾರೋಗ್ಯಕರ ಪೈಪೋಟಿ ನಡೆಸುತ್ತಿವೆ. ಇದರಿಂದ ಖಾಸಗಿ ಬಸ್‌ನ ಮಾಲಕರು ನಷ್ಟಕ್ಕೊಳಗಾಗುತ್ತಿದ್ದಾರೆ. ಹೈಕೋರ್ಟ್‌ ಆದೇಶವನ್ನೂ ಸರಿಯಾಗಿ ಪಾಲಿಸುತ್ತಿಲ್ಲ. ಒಮ್ಮೆಗೆ ರಾಷ್ಟ್ರೀಕರಣ ಮಾಡಿ ಬಿಡಿ. ನಾವು ಬೇರೆ ಉದ್ಯಮವನ್ನಾದರೂ ಆರಿಸಿಕೊಳ್ಳುತ್ತೇವೆ ಎಂದು ಉಡುಪಿ ಬಸ್‌ ಮಾಲಕರ ಸಂಘದ ಅಧ್ಯಕ್ಷ ಕುಯಿಲಾಡಿ ಸುರೇಶ್‌ ನಾಯಕ್‌ ಹೇಳಿದರು.

Advertisement

ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಬುಧವಾರ ಮಣಿಪಾಲದಲ್ಲಿ ನಡೆದ ರಸ್ತೆ ಸಾರಿಗೆ ಪ್ರಾಧಿಕಾರ (ಆರ್‌ಟಿಎ) ಸಭೆಯಲ್ಲಿ ಅವರು ಮಾತನಾಡಿದರು. ಕಾಪುವಿನಿಂದ ಮೂಡುಬೆಳ್ಳೆ ಮಾರ್ಗವಾಗಿ ಸರಕಾರಿ ಬಸ್‌ ಓಡಿಸಲು ಬೆಳ್ಳೆ ಶಿವಾಜಿ ಸುವರ್ಣ ಮನವಿ ನೀಡಿದರು. 

ಪರ್ಮಿಟ್‌ ಇದ್ದರೂ ಖಾಸಗಿ ಬಸ್‌ ಓಡಿಸೋದಿಲ್ಲ. ಕಂಪೆನಿ ಬಸ್‌ಗಳು ಯಾರ್ಯಾರಿಗೋ ನಡೆಸಲಿಕ್ಕೆ ಕೊಡುತ್ತಾರೆ. ಅವರು ಗೂಂಡಾಗಿರಿ ಮಾಡುತ್ತಾರೆ. ಹೆಬ್ರಿ ಸುತ್ತಮುತ್ತಲ ಕುಗ್ರಾಮಗಳಿಗೆ ಸರಕಾರಿ ಬಸ್‌ ಹಾಕಿ ಎಂದು ಹೆಬ್ರಿಯ ಸಂಜೀವ ಶೆಟ್ಟಿ  ಆಗ್ರಹಿಸಿದರು. 

ಬೈಂದೂರಿನಲ್ಲಿ ಕೆಸ್ಸಾರ್ಟಿಸಿ ಬಸ್‌ಗಳು ಬಸ್‌ ನಿಲ್ದಾಣಕ್ಕೆ ಬರುವುದಿಲ್ಲ ಎಂದು ಸುಬ್ರಹ್ಮಣ್ಯ ಬಿಜೂರು ದೂರಿದರು. ಈ ಬಗ್ಗೆ  ಕ್ರಮ ಕೈಗೊಳ್ಳುವುದಾಗಿ ಕೆಎಸ್ಸಾರ್ಟಿಸಿ ಅಧಿಕಾರಿ ಜೈಶಾಂತ್‌ ಕುಮಾರ್‌ ಹೇಳಿದರು. 

ಉಡುಪಿ-ಶಿವಮೊಗ್ಗಕ್ಕೆ ಹೆಚೆಚ್ಚು ಸರಕಾರಿ ಮಿನಿ ಬಸ್‌ ಹಾಕಿ ಎನ್ನುವ ಆಗ್ರಹ ಕೇಳಿ ಬಂದಿತು. ಪರ್ಮಿಟ್‌ ಇಲ್ಲದೆ ಸರಕಾರಿ ಬಸ್‌ ಓಡುತ್ತಿದೆ ಎಂದು ಬಸ್‌ ಮಾಲಕ ಸುಧಾಕರ ಶೆಟ್ಟಿ ಆರೋಪಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಕೆಎಸ್ಸಾರ್ಟಿಸಿ ಅಧಿಕಾರಿ, ಪರ್ಮಿಟ್‌ ಸಭೆ ಕರೆಯಿರಿ, ಖಾಸಗಿಯವರು ಪರ್ಮಿಟ್‌ ಹಿಡಿದುಕೊಂಡು ಬರಲಿ. ನಾವೂ ಬರುತ್ತೇವೆ ಎಂದರು.

Advertisement

ಬಸ್‌ನಲ್ಲಿ  ಮಾಹಿತಿ ಅಚ್ಚು ಹಾಕಿ
ಎಲ್ಲ ಬಸ್‌ಗಳು ತಮ್ಮ ಬಸ್‌ಗಳ ಮೇಲೆ ತಮಗೆ ನೀಡಿರುವ ಪರ್ಮಿಟ್‌ ಸಂಖ್ಯೆ, ಮಾರ್ಗ ಮತ್ತು ಸಮಯದ ಕುರಿತು ಮಾಹಿತಿ ಅಚ್ಚು ಹಾಕುವಂತೆ ಎಸ್‌ಪಿ ಸೂಚಿಸಿದರು. ಇದನ್ನು ಮೀರಿ ಸಂಚರಿಸುವ ವಾಹನಗಳ ಕುರಿತು ದೂರು ಸಲ್ಲಿಸುವಂತೆ ಅವರು ತಿಳಿಸಿದರು.

ಸಂಚಾರ ತಪ್ಪಿಸುವ ಸರಕಾರಿ ಬಸ್‌
ಕೆಎಸ್ಸಾರ್ಟಿಸಿ ಬಸ್‌ಗಳು ವೇಳಾಪಟ್ಟಿಯನ್ನು ಅನುಸರಿಸುವುದೇ ಇಲ್ಲ. ಅಧಿಕಾರಿಗಳಲ್ಲಿ ಹೇಳಿದರೆ ಪರಿಶೀಲಿಸುತ್ತೇವೆ ಎನ್ನುವ ಉತ್ತರ ಮಾತ್ರ ಬರುತ್ತಿದೆ. ಕಾರ್ಕಳದಲ್ಲಿ ಒಂದೇ ಸಮಯಕ್ಕೆ ಸರಕಾರಿ, ಖಾಸಗಿ ಬಸ್‌ ಹೋಗುತ್ತಿದೆ. ಕಾರ್ಕಳದಿಂದ ಕುಂದಾಪುರಕ್ಕೆ ಪರ್ಮಿಟ್‌ ಇದ್ದರೂ ಕೆಸ್ಸಾರ್ಟಿಸಿ ಬಸ್‌ಗಳು ಉಡುಪಿಯವರೆಗೆ ಮಾತ್ರ ಸಂಚರಿಸುತ್ತಿವೆ. ಇದೇ ರೀತಿ ಬೇರೆ ರೂಟ್‌ನಲ್ಲೂ ಮಾಡುತ್ತಲಿದ್ದಾರೆ ಎಂದು ಕುಯಿಲಾಡಿ ಸುರೇಶ್‌ ನಾಯಕ್‌ ಅವರು ಆರೋಪಿಸಿದರು. ಸರಕಾರಿ ಬಸ್‌ನಿಂದಾಗಿ ತಮಗಾಗುತ್ತಿರುವ ಹಲವು ಸಮಸ್ಯೆಗಳ ಕುರಿತು ಬಸ್‌ಗಳ ಮಾಲಕರು ಜಿಲ್ಲಾಧಿಕಾರಿಗಳ ಮುಂದೆ ಬಿಚ್ಚಿಟ್ಟರು.

ಲಿಖೀತವಾಗಿ ಕೊಡಿ: ಜಿಲ್ಲಾಧಿಕಾರಿ
ಅಲ್ಲಿ ಬಸ್‌ ಹೆಚ್ಚಿದೆ, ಇಲ್ಲಿ ಬಸ್‌ ಇಲ್ಲವೇ ಇಲ್ಲ ಎಂದು ಯಾರೂ ಒಟ್ಟಾರೆಯಾಗಿ ಮಾತನಾಡ ಬೇಡಿ. ಯಾವುದೇ ಆಕ್ಷೇಪ, ಆಗ್ರಹ ಗಳಿದ್ದರೆ ಲಿಖೀತ, ಸ್ಪಷ್ಟವಾಗಿ ತಿಳಿಸಿ. ಕ್ರಮ ಕೈಗೊಳ್ಳಲಾಗುವುದು ಎಂದು ಆರ್‌ಟಿಎ ಅಧ್ಯಕ್ಷೆ, ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್‌ ಹೇಳಿದರು. ಪ್ರಭಾರ ಆರ್‌ಟಿಒ ರಾಮಕಷ್ಣ ರೈ ಉಪಸ್ಥಿತರಿದ್ದರು.

ತರಾಟೆಗೆ ತೆಗೆದುಕೊಂಡ ಎಸ್‌ಪಿ
ಆರ್‌ಟಿಎ ಸಭೆಯಲ್ಲಿ ಅಧ್ಯಕ್ಷರಾದ ಜಿಲ್ಲಾಧಿಕಾರಿಗಳೇ ಉತ್ತರಿಸುವುದು ಈ ಹಿಂದಿನ ಸಭೆಗಳಲ್ಲಿ ನಡೆದಿತ್ತು. ಆದರೆ ಬುಧವಾರ ನಡೆದ ಸಭೆಯಲ್ಲಿ ಕೆಎಸ್ಸಾರ್ಟಿಸಿಯವರು ಗಲಾಟೆ ಮಾಡುತ್ತಾರೆ, ಟ್ರಾಫಿಕ್‌ ಜಾಂ ಮಾಡಿಸುತ್ತಾರೆ ಎಂದು ಬಸ್‌ ಮಾಲಕರು ಹಾಗೂ ಅವರ ಪರವಾಗಿ ಬಂದವರು ಹೇಳಿದಾಗ ಎಸ್‌ಪಿ ಡಾ| ಸಂಜೀವ ಎಂ. ಪಾಟೀಲ್‌ ಅವರು ಮಧ್ಯ ಪ್ರವೇಶಿಸಿ ಅಲ್ಲಿ ಹಾಗೆ ಆಯಿತು, ಇಲ್ಲಿ ಹೀಗೆ ಆಯಿತು ಎಂದು ಮಾತನಾಡಬೇಡಿ. ಯಾವುದೇ ನಿರ್ದಿಷ್ಟ ಪ್ರಕರಣ ಇದ್ದರೆ ಅದನ್ನು ನಮೂದಿಸಿ ದೂರು ಕೊಡಿ. ನಿರ್ದಿಷ್ಟ ವಿಷಯವಿಲ್ಲದಿದ್ದರೆ ಮಾತನಾಡಬೇಡಿ ಎಂದರು. 

ಸಾರ್ವಜನಿಕರಾದ ಹೆಬ್ರಿ ಸಂಜೀವ ಶೆಟ್ಟಿ  ಅವರು ಬಸ್‌ ಮಾಲಕರ ಮಾತಿಗೆ ಬಹಳ ಆಕ್ಷೇಪ ವ್ಯಕ್ತಪಡಿಸಿದರು. ಕೊನೆಯಲ್ಲಿ ಸಭೆ ಮುಗಿಸಿ ಡಿಸಿ ಹೊರ ನಡೆಯುತ್ತಿದ್ದಂತೆ ಕೆಲ ಬಸ್‌ ಮಾಲಕರು ಕೆಎಸ್ಸಾರ್ಟಿಸಿ ಬಸ್‌ಗಳ ಪರ ಮಾತನಾಡಿದ ಹೆಬ್ರಿಯ ಸಂಜೀವ ಶೆಟ್ಟಿ ಅವರ ಬಳಿ ತೆರಳಿ ಅವರ ಮೇಲೆ ಮುಗಿಬೀಳಲು ಮುಂದಾದರು. ಇದನ್ನು ಸಹಿಸದ ಎಸ್‌ಪಿಯವರು ಬಸ್‌ ಮಾಲಕರಿಗೆ ಏರು ದನಿಯಲ್ಲಿ ಸಭಾಂಗಣದೊಳಗೆ ಗಲಾಟೆಗೆ ಯತ್ನಿಸುವಿರಾ, ಹೊರನಡೆಯಿರಿ ಎಂದರು. ಬಳಿಕ ಎಲ್ಲರೂ ಹೊರನಡೆದರು.

Advertisement

Udayavani is now on Telegram. Click here to join our channel and stay updated with the latest news.

Next