ಒಬ್ಬೊಬ್ಬರೇ ಸ್ಟಾರ್ ನಟರು ತಮ್ಮ ಹುಟ್ಟುಹಬ್ಬ ಆಚರಣೆಯನ್ನು ಕೈ ಬಿಡುತ್ತಿದ್ದಾರೆ. ಈ ಮೂಲಕ ಅಭಿಮಾನಿಗಳು ತಮ್ಮ ಹುಟ್ಟುಹಬ್ಬದ ದಿನ ಅನವಶ್ಯಕವಾಗಿ ಖರ್ಚು ಮಾಡುವುದನ್ನು ತಪ್ಪಿಸುತ್ತಿದ್ದಾರೆ. ಇತ್ತೀಚೆಗಷ್ಟೇ ನಟ ಸುದೀಪ್, ಇನ್ನು ಮುಂದೆ ಹುಟ್ಟುಹಬ್ಬ ಆಚರಿಸುವುದಿಲ್ಲ. ಅಲ್ಲದೇ ಹುಟ್ಟುಹಬ್ಬಕ್ಕಾಗಿ ವ್ಯಯಿಸುವ ಹಣವನ್ನು ಒಳ್ಳೆಯ ಕಾರ್ಯಗಳಿಗೆ ಬಳಸಿ ಎಂದಿದ್ದರು. ಅದರಂತೆ ಈ ಬಾರಿ ಅವರು ಹುಟ್ಟುಹಬ್ಬ ಆಚರಿಸಿಕೊಳ್ಳಲೇ ಇಲ್ಲ.
ಈಗ ಮತ್ತೊಬ್ಬ ಸ್ಟಾರ್ ನಟ ಕೂಡಾ ತನ್ನ ಅಭಿಮಾನಿಗಳಿಗೆ “ನನ್ನ ಹುಟ್ಟುಹಬ್ಬಕ್ಕೆ ಅನವಶ್ಯಕ ಖರ್ಚು ಮಾಡದೇ ಪ್ರೀತಿಯಿಂದ ಶುಭಕೋರಿದರೆ ಸಾಕು’ ಎಂದಿದ್ದಾರೆ. ಹೀಗೆ ಹೇಳಿರುವುದು ನಟ ರಿಯಲ್ ಸ್ಟಾರ್ ಉಪೇಂದ್ರ. ಹೌದು, ನಟ ಉಪೇಂದ್ರ ಅವರ ತಮ್ಮ ಅಭಿಮಾನಿಗಳಿಗೆ, ತನ್ನ ಹುಟ್ಟುಹಬ್ಬಕ್ಕೆ ಅನವಶ್ಯಕವಾಗಿ ಹಾರ, ಕೇಕ್, ಬ್ಯಾನರ್‌ಗೆ ಖರ್ಚು ಮಾಡದೇ ನಿಮ್ಮ ಪ್ರೀತಿಯ ಹಾರೈಕೆಯೊಂದಿಗೆ ಶುಭಕೋರಿದರೆ ಸಾಕು ಎಂಬರ್ಥದಲ್ಲಿ ಟ್ವೀಟ್ ಮಾಡಿದ್ದಾರೆ.
ಅಲ್ಲಿಗೆ ಈ ವರ್ಷ ಅಭಿಮಾನಿಗಳು ಉಪ್ಪಿ ಮನೆ ಮುಂದೆ ಬ್ಯಾನರ್ ಕಟ್ಟಿ, ಕೇಕ್ ಹಿಡಿದು ಕ್ಯೂ ನಿಲ್ಲುವಂತಿಲ್ಲ. ಹಾಗಾಗಿ, ಸೆ.18ರ ಉಪೇಂದ್ರ ಅವರ ಹುಟ್ಟುಹಬ್ಬದಲ್ಲಿ ಅಭಿಮಾನಿಗಳಿಗೆ ಸರತಿ ಸಾಲಿನಲ್ಲಿ ಹೋಗಿ ಶುಭಕೋರಿ ಬರೋದಷ್ಟೇ ಕೆಲಸ. ಉಪೇಂದ್ರ ಅವರ ಮಾಡಿರುವ ಟ್ವೀಟ್ ಹೀಗಿದೆ, “ಪ್ರೀತಿಯ ಅಭಿಮಾನಿಗಳೇ ದಯವಿಟ್ಟು ಹಾರ, ಕೇಕ್, ಬ್ಯಾನರ್‌ಗಳಿಗೆ ಖರ್ಚು ಮಾಡದೇ ನಿಮ್ಮ ಪ್ರೀತಿಯ ಶುಭಾಶಯಗಳೊಂದಿಗೆ ಬಂದು ನನ್ನ ಹುಟ್ಟುಹಬ್ಬದಲ್ಲಿ ಪಾಲ್ಗೊಳ್ಳಿ’ ಎಂದು ಟ್ವೀಟ್ ಮಾಡಿದ್ದಾರೆ.
ತಮ್ಮ ಸ್ಟಾರ್ ನಟನ ಹುಟ್ಟುಹಬ್ಬಕ್ಕೆ ಬ್ಯಾನರ್ ಹಾಕಿ, ಕೇಕ್ ಕತ್ತರಿಸಿ ಸಂಭ್ರಮಿಸಬೇಕೆಂದುಕೊಂಡಿದ್ದ ಅಭಿಮಾನಿಗಳು ಕೊಂಚ ಬೇಸರವಾಗಿದ್ದರೂ ಅವರಿಗೆ ಖುಷಿ ತಂದಿದ್ದು, ಉಪೇಂದ್ರ ಅವರನ್ನು ಭೇಟಿಯಾಗಿ ಶುಭಕೋರುವ ಅವಕಾಶ. ಶುಭಾಶಯ ಹೇಳಿ ತಮ್ಮ ನೆಚ್ಚಿನ ನಟನ ಹುಟ್ಟುಹಬ್ಬ ಆಚರಿಸಲು ಅವಕಾಶವಿರುವುದು ಅಭಿಮಾನಿಗಳ ಖುಷಿಗೆ ಕಾರಣವಾಗಿದೆ. ಈ ವರ್ಷ ಶಿವರಾಜಕುಮಾರ್ ಕೂಡಾ ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡಿರಲಿಲ್ಲ. ಸುದೀಪ್ ಹೇಳಿದಂತೆ ಹುಟ್ಟುಹಬ್ಬ ದಿನ ಅಭಿಮಾನಿಗಳ ಕೈಗೆ ಸಿಗಲೇ ಇಲ್ಲ. ಈಗ ಉಪೇಂದ್ರ ಕೂಡಾ ಅದ್ಧೂರಿ ಹುಟ್ಟುಹಬ್ಬದಿಂದ ದೂರ ಉಳಿಯಲು ನಿರ್ಧರಿಸಿದ್ದಾರೆ.