Advertisement

ಕಣ್ಣುಗಳು ಮಂಜಾಗಿ ಕಾಣುತ್ತಿದ್ದರೆ ಹಗುರವಾಗಿ ಪರಿಗಣಿಸಬೇಡಿ

01:27 PM Nov 20, 2018 | |

ವಿಜಯಪುರ: ಪ್ರತಿ ಮನುಷ್ಯನಿಗೆ ಕಣ್ಣುಗಳೇ ಆತನ ಸದೃಢ ಶರೀರಕ್ಕೆ ಕನ್ನಡಿ. ಮಧುಮೇಹಿಗಳು ಕಾಲ-ಕಾಲಕ್ಕೆ ಕಣ್ಣಿನ ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ಅನುಗ್ರಹ ಕಣ್ಣಿನ ಆಸ್ಪತ್ರೆ ನೇತ್ರತಜ್ಞ ಡಾ| ಪ್ರಭುಗೌಡ ಚಬನೂರ ಹೇಳಿದರು.

Advertisement

ನಗರದ ಅನುಗ್ರಹ ಕಣ್ಣಿನ ಆಸ್ಪತ್ರೆಯಲ್ಲಿ ವಿಶ್ವ ಮಧುಮೇಹ ದಿನಾಚರಣೆ ನಿಮಿತ್ತ ಹಮ್ಮಿಕೊಂಡಿದ್ದ ಮಧುಮೇಹ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಣ್ಣಿನಲ್ಲಿರುವ ಅಕ್ಷಿಪಟಲ ಕ್ಯಾಮೆರಾ ಇದ್ದಂತೆ. ಅದರ ಮೇಲೆ ಕೊಲೆಸ್ಟ್ರಾಲ್‌
ಇಲ್ಲವೇ ರಕ್ತಸ್ರಾವವಾದರೆ ಕ್ಯಾಮೆರಾ ಕೆಲಸ ಮಾಡುವುದಿಲ್ಲ. ಹಾಗಾಗಿ ಅಕ್ಷಿಪಟಲ ಸದಾ ಶುಚಿಯಾಗಿಟ್ಟುಕೊಳ್ಳಬೇಕೆಂದರು.
 
ವಿಶೇಷವಾಗಿ ಮಧುಮೇಹಿಗಳ ಕಣ್ಣು ಮಂಜಾಗಿ ಕಾಣುತ್ತಿದ್ದರೆ, ಹಗುರವಾಗಿ ಪರಿಗಣಿಸುವಂತಿಲ್ಲ. ಮುಂದೆ 5 ವರ್ಷಗಳ ಬಳಿಕ ಅದು ದೊಡ್ಡ ಸಮಸ್ಯೆಯಾಗುತ್ತದೆ. ಬಳಿಕ ಲೇಸರ್‌ ಹಾಗೂ ಇಲ್ಲವೇ ಇಂಜೆಕ್ಷನ್‌ ಮಾಡಿಕೊಳ್ಳಬೇಕಾಗುತ್ತದೆ. ಪ್ರತಿ ವರ್ಷ ಕಣ್ಣುಗಳನ್ನು ನಿಯಮಿತವಾಗಿ ತಜ್ಞ ವೈದ್ಯರ ಬಳಿ ತಪಾಸಣೆ ಮಾಡಿಸಿಕೊಳ್ಳಬೇಕೆಂದರು.

ಕೈಗೆ, ಕಾಲಿಗೆ ಆಳುಗಳನ್ನು ಹೊಂದಿದ್ದ ರಾಜ ಮಹಾರಾಜರಿಗೆ ಶ್ರಮವಿರಲಿಲ್ಲ. ಹಾಗಾಗಿ ಈ ಕಾಯಿಲೆ ಅವರನ್ನು ಬಾಧಿಸುತ್ತಿತ್ತಂತೆ. ಹಾಗಾಗಿ ಮಧುಮೇಹಕ್ಕೆ ರಾಜ ಕಾಯಿಲೆ ಎನ್ನುವರು. ಆದರೆ ಇತ್ತೀಚೆಗೆ ಬದಲಾದ ಜೀವನ ಶೈಲಿಯಿಂದಾಗಿ ಜನಸಾಮಾನ್ಯರು ಈ ಕಾಯಿಲೆಗೆ ತುತ್ತಾಗುತ್ತಿದ್ದಾರೆ. ರೊಟ್ಟಿ, ತರಕಾರಿ ಉಣ್ಣುವುದನ್ನು ಬಿಟ್ಟು ನಾಲಿಗೆ ರುಚಿಗೆ ತಣಿಸಲು ಬಹುತೇಕರು ಮುಂದಾಗಿದ್ದಾರೆ.
ಇದು ಒಳ್ಳೆ ಬೆಳವಣಿಗೆಯಲ್ಲ. ಈ ರೋಗ ಬಾರದಂತಿರಬೇಕಾದರೆ, ನಾಲಿಗೆ ರುಚಿ ಬೆನ್ನು ಹತ್ತುವುದನ್ನು ಬಿಟ್ಟು ಮನೆ ಊಟ ಮಾಡಿದರೆ ಸದೃಢ ಆರೋಗ್ಯ ನಿಮ್ಮದಾಗುತ್ತದೆ ಎಂದರು.

ಮಧುಮೇಹಿಗಳು ಅತಿ ಹಣ್ಣಾದ ಸಿಹಿ ಹಣ್ಣು ತಿನ್ನುವ ಬದಲು ವಗರಾಗಿರುವ ಹಣ್ಣುಗಳನ್ನು ತಿನ್ನುವ ಮೂಲಕ ಸಕ್ಕರೆ ರೋಗವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಿ ಎಂದು ಸಲಹೆ ಮಾಡಿದರು. ಮಧುಮೇಹ ಒಮ್ಮೆ ಬಂದರೆ ಅದು ಶಮನವಾಗದ ರೋಗ. ಹಾಗಾಗಿ ಮಧುಮೇಹ ಮೊದಲೇ ಬಾರದ ನಿಟ್ಟಿನಲ್ಲಿ ಜೀವನ ಶೈಲಿಯನ್ನು ಬದಲಾಯಿಸಿಕೊಳ್ಳಿ ಎಂದು ಸಲಹೆ ಮಾಡಿದರು.

ಸಕ್ಕರೆ ಕಾಯಿಲೆ ತಜ್ಞ ಡಾ| ನಿತಿನ ಅಗರವಾಲ, ಮೂತ್ರಕೋಶ ತಜ್ಞ ಡಾ| ರವೀಂದ್ರ ಮದ್ರಕಿ, ಅಕ್ಷಿಪಟಲ ತಜ್ಞ ಡಾ| ಆನಂದ ಗಣ್ಣೂರ, ಶಸ್ತ್ರಚಿಕಿತ್ಸಾ ತಜ್ಞ ಡಾ| ಎಸ್‌.ಐ. ಭೀಮನಗೌಡ ಮಾತನಾಡಿದರು. ಡಾ| ಮಾಲಿನಿ ಪ್ರಭುಗೌಡ, ಡಾ| ಸಂತೋಷ ಪಾಟೀಲ, ಡಾ| ರೋಹಿಣಿ ಪಾಟೀಲ, ಡಾ| ಮಧು ಗಣ್ಣೂರ, ಡಾ| ಅಜಯ ಬದಾಮಿ, ಡಾ| ಸುಷ್ಮಾ ವಾರದ, ಡಾ| ಅರುಣ ದೇಸಾಯಿ, ಡಾ| ನಂದಾ, ದತ್ತಾತ್ರೇಯ ಹೊಸಮಠ, ಆನಂದ ಪಾಟೀಲ, ಬಸವರಾಜ ಯಾಳವಾರ, ಸುರೇಶ ಪೇಟಕರ, ಅರುಣ ಸೂರ್ಯವಂಶಿ ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next