Advertisement
ವಿಧಾನಮಂಡಲದ ಉಭಯ ಸದನಗಳ ನಾಯಕರ ಜೊತೆ ಗುರುವಾರ ಸಭೆ ನಡೆಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಗೋವಾ ಸರ್ಕಾರ ಮಹದಾಯಿ ನ್ಯಾಯ ಮಂಡಳಿಯ ಅವಧಿಯನ್ನು ಮತ್ತೂಂದು ವರ್ಷ ವಿಸ್ತರಣೆ ಮಾಡುವಂತೆ ಕೇಳಿಕೊಂಡಿದೆ ಎಂದು ತಿಳಿಸಿದರು.ಒಂದೊಮ್ಮೆ ನ್ಯಾಯಮಂಡಳಿ ಅವಧಿ ವಿಸ್ತರಣೆಯಾದರೆ ರಾಜ್ಯಕ್ಕೆ ಅನ್ಯಾಯವಾಗುತ್ತದೆ ಎಂದು ತಿಳಿಸಿದಾಗ ನ್ಯಾಯಾಧಿಕರಣದಲ್ಲಿ ಗೋವಾ ಮನವಿಗೆ ಆಕ್ಷೇಪ ವ್ಯಕ್ತಪಡಿಸಿ ರಾಜ್ಯಕ್ಕಕ್ಕಾಗುವ ಅನ್ಯಾಯ ಮನವರಿಕೆ ಮಾಡಿಕೊಡಲು ಸಭೆಯಲ್ಲಿ ನಿರ್ಧರಿಸಲಾಗಿದೆ.
Related Articles
Advertisement
ಅಲ್ಲದೇ ಗೋವಾ ಸರ್ಕಾರ ಸಲ್ಲಿಸಿದ್ದ ನ್ಯಾಯಾಂಗ ನಿಂದನೆ ಅರ್ಜಿಗೆ ರಾಜ್ಯ ಸರ್ಕಾರ ಲಿಖೀತ ಅಫಿಡವಿಟ್ ಸಲ್ಲಿಸಿದೆ. ಯಾವುದೇ ನ್ಯಾಯಾಂಗ ನಿಂದನೆಯಾಗಿಲ್ಲ ಎಂದು ನ್ಯಾಯ ಮಂಡಳಿಗೆ ಮನವರಿಕೆ ಮಾಡಿಕೊಡಲಾಗಿದೆ ಎಂದು ಹೇಳಿದರು.ಅಶೋಕ್ ದೇಸಾಯಿ ನೇಮಕ: ರಾಜ್ಯದ ನೀರಾವರಿ ಯೋಜನೆಗಳ ಬಗ್ಗೆ ಸುಪ್ರೀಂ ಕೋರ್ಟ್‌ನಲ್ಲಿ ವಾದ ಮಂಡಿಸುತ್ತಿದ್ದ ಹಿರಿಯ ನ್ಯಾಯವಾದಿ ಫಾಲಿ ಎಸ್. ನಾರಿಮನ್ ಅನಾರೋಗ್ಯ ಪೀಡಿತರಾಗಿರುವುದರಿಂದ ಅವರ ಜಾಗಕ್ಕೆ ಮಹರಾಷ್ಟ್ರದವರೇ ಆಗಿರುವ ಅಶೋಕ್ ದೇಸಾಯಿಯನ್ನು ರಾಜ್ಯ ಸರ್ಕಾರ ನೇಮಿಸಿದೆ. ಅವರೊಂದಿಗೆ ಶಾಮ್ ದಿವಾನ್, ಮೋಹನ್ ಕಾತರಿಕಿಯವರೂ ಇರುತ್ತಾರೆ ಎಂದು ಹೇಳಿದರು. ಇದೇ ವೇಳೆ, ಕೇಂದ್ರದ ಹೆಚ್ಚುವರಿ ಸಾಲಿಸಿಟರ್ ಜನರಲ್ ಆಗಿರುವ ಶಾಂತಾರಾಮ್ ನಾಡಕರ್ಣಿ ಅವರಿಗೆ ಗೋವಾ ರಾಜ್ಯದ ಪರವಾಗಿ ವಾದ ಮಾಡಲು ಕೇಂದ್ರ ಸರ್ಕಾರ ಅವಕಾಶ ನೀಡಬಾರದಿತ್ತು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಪ್ರಾಯ ಪಟ್ಟಿದ್ದಾರೆ. ಪ್ರಧಾನಿ ಮಧ್ಯಸ್ಥಿಕೆಗೆ ಬಿಜೆಪಿ ವಿರೋಧ: ಮಹದಾಯಿ ವಿವಾದವನ್ನು ನ್ಯಾಯ ಮಂಡಳಿಯ ಹೊರಗೆ ಮಾತುಕತೆ ಮೂಲಕ ಬಗೆ ಹರಿಸಿಕೊಳ್ಳಲು ಪ್ರಧಾನಿ ಮಧ್ಯಸ್ಥಿಕೆಗೆ ಮನವಿ ಮಾಡುವ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದಾಗ ಬಿಜೆಪಿ ನಾಯಕರು ಸಭೆಯಿಂದ ಹೊರ ನಡೆಯುವುದಾಗಿ ಎಚ್ಚರಿಸಿದರು ಎನ್ನಲಾಗಿದೆ. ಪ್ರಧಾನಿ ಬಗ್ಗೆ ಮಾತನಾಡುವುದಾದರೆ, ನಾವು ಬರುವುದಿಲ್ಲ ಎಂದು ಪ್ರತಿಪಕ್ಷದ ನಾಯಕರಾದ ಜಗದೀಶ್ ಶೆಟ್ಟರ್ ಹಾಗೂ ಕೆ.ಎಸ್. ಈಶ್ವರಪ್ಪ ಹೇಳಿದರು ಎಂದು ತಿಳಿದು ಬಂದಿದೆ. ಪ್ರಧಾನಿ ಬಳಿ ನಿಯೋಗ ತೆಗೆದುಕೊಂಡು ಹೋಗುವ ಕುರಿತು ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಸರ್ವ ಪಕ್ಷ ನಿಯೋಗ ಕರೆದುಕೊಂಡು ಹೋಗಲು ಸಮಯ ನೀಡುವಂತೆ ಪ್ರಧಾನಿಗೆ ಪತ್ರ ಬರೆದಿದ್ದೇನೆ. ಅವರು ಸಮಯ ನೀಡಿದರೆ ನಿಯೋಗ ತೆಗೆದುಕೊಂಡು ಹೋಗಲಾಗುವುದು ಎಂದು ಹೇಳಿದರು.