Advertisement

ಪಿಣರಾಯಿ ಭಾಷಣಕ್ಕೆ ಅನುಮತಿ ಬೇಡ: ದ.ಕ. ಜಿಲ್ಲಾ ಶ್ರೀರಾಮ ಸೇನೆ

12:06 PM Feb 22, 2017 | Harsha Rao |

ಮಂಗಳೂರು: ಮಂಗಳೂರಿನಲ್ಲಿ ಫೆ. 25ರಂದು ನಡೆಯುವ ಕೋಮು ಸೌಹಾರ್ದ ರ್ಯಾಲಿಯಲ್ಲಿ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರ ಭಾಷಣಕ್ಕೆ ಅನುಮತಿ ನೀಡಬಾರದು ಎಂದು ದಕ್ಷಿಣ ಕನ್ನಡ ಜಿಲ್ಲಾ ಶ್ರೀ ರಾಮ ಸೇನೆ ಜಿಲ್ಲಾಡಳಿತವನ್ನು ಆಗ್ರಹಿಸಿದೆ.

Advertisement

ಶ್ರೀರಾಮ ಸೇನೆ ಮುಖಂಡ ಆನಂದ್‌ ಶೆಟ್ಟಿ ಅಡ್ಯಾರ್‌ ಅವರು ನಗರದ ಆರ್ಯ ಸಮಾಜದಲ್ಲಿ ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಪಕ್ಷದ ಸಮಾವೇಶಕ್ಕೆ ನಮ್ಮ ವಿರೋಧವಿಲ್ಲ. ಆದರೆ ಕೇರಳದಲ್ಲಿ 1999ರಿಂದ ಇಲ್ಲಿವರೆಗೆ 200ಕ್ಕೂ ಹೆಚ್ಚು ಹಿಂದೂಗಳ ಹತ್ಯೆ ನಡೆದಿದ್ದು, ಇದಕ್ಕೆಲ್ಲಾ ಕಮ್ಯುನಿಸ್ಟ್‌ ಪಕ್ಷವೇ ಕಾರಣವಾಗಿರುತ್ತದೆ ಎಂದು ಅಂಕಿ-ಅಂಶ ದಾಖಲೆಗಳು ಹೇಳುತ್ತವೆ. ಇಷ್ಟೆಲ್ಲ ಹತ್ಯೆಗಳು ನಡೆದಿದ್ದರೂ ಯಾವುದೇ ಕ್ರಮ ಕೈಗೊಳ್ಳದೇ ಇರುವ ಆ ಪಕ್ಷದ ನೇತಾರ ಪಿಣರಾಯಿ ವಿಜಯನ್‌ ಮಂಗಳೂರಿನಲ್ಲಿ ಕೋಮು ಸೌಹಾರ್ದ ರ್ಯಾಲಿಯಲ್ಲಿ ಮಾತನಾಡುವುದನ್ನು ವಿರೋಧಿಸಲಾಗುತ್ತದೆ ಎಂದರು.

ಸುಮಾರು 5 ವರ್ಷಗಳಿಂದ ಸಂಘಟನೆಯ ಸಂಸ್ಥಾಪಕ ಪ್ರಮೋದ್‌ ಮುತಾಲಿಕ್‌ ಅವರಿಗೆ ಬಹಿರಂಗ ಭಾಷಣಕ್ಕೆ ಅನುಮತಿ ನೀಡದ ಆಡಳಿತ ವ್ಯವಸ್ಥೆಯು, ಕೇರಳದಲ್ಲಿ ಹಿಂದೂಗಳ ಹತ್ಯೆಗೆ ಕಾರಣವಾಗಿರುವ ಪಿಣರಾಯಿ ಅವರಿಗೆ ಅನುಮತಿ ನೀಡುತ್ತಿದೆ. ಇಂತಹ ಇಬ್ಬಗೆ ನೀತಿ ಖಂಡನೀಯ ಎಂದ ಅವರು, ಪಿಣರಾಯಿ ಭಾಷಣಕ್ಕೆ ಅನುವು ನೀಡಿದಲ್ಲಿ ಸಂಘಟನೆಯು ಅದನ್ನು ಪ್ರತಿಭಟಿಸಲಿದೆ. ಅಲ್ಲದೇ ಸಂಘ ಪರಿವಾರ ಕರೆ ನೀಡಿರುವ ಫೆ. 25ರ ದ.ಕ. ಜಿಲ್ಲಾ ಬಂದ್‌ಗೆ ಬೆಂಬಲ ನೀಡುವುದಾಗಿ ಅವರು ತಿಳಿಸಿದರು.

ಜಿಲ್ಲಾಧ್ಯಕ್ಷ ಜೀವನ್‌ ನೀರುಮಾರ್ಗ, ಮುಖಂಡರಾದ ಗುರು ಪಾಂಡೇಶ್ವರ, ಪ್ರದೀಪ್‌ ಮೂಡುಶೆಡ್ಡೆ, ಹರೀಶ್‌ ಶೆಟ್ಟಿ ಬೊಕ್ಕಪಟ್ಣ, ವೆಂಕಟೇಶ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next