Advertisement
ತಮಿಳುನಾಡಿನ ಕನ್ಯಾಕುಮಾರಿಯಲ್ಲಿ ಶನಿವಾರ ರೋಡ್‌ಶೋ ನಡೆಸಿದ ಅನಂತರ ಮಾತನಾಡಿದ ಅಮಿತ್ ಶಾ, “ಅಯೋಧ್ಯೆಯ ರಾಮಮಂದಿರ ಲೋಕಾರ್ಪಣೆ ಸೇರಿದಂತೆ ಹಲವು ಸಂದರ್ಭಗಳಲ್ಲಿ ಸನಾತನ ಧರ್ಮದ ವಿರುದ್ಧ ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡುವ ಡಿಎಂಕೆಯವರು ಒಂದೆಡೆಯಾದರೆ, ಪ್ರಧಾನಿ ನರೇಂದ್ರ ಮೋದಿ ಮಾರ್ಗದರ್ಶನದಲ್ಲಿ ಸರ್ವರನ್ನೂ ಸಮಾನವಾಗಿ ಗೌರವಿಸುವ ಬಿಜೆಪಿ ಮತ್ತೂಂದೆಡೆಯಿದೆ. ಇವೆರಡರಲ್ಲಿ ನಿಮಗೆ ಯಾವುದು ಬೇಕು ಎಂದು ನಿರ್ಧರಿಸಿ, ಚುನಾವಣೆಯಲ್ಲಿ ದ್ರಾವಿಡ ಪಕ್ಷ ಡಿಎಂಕೆಯನ್ನು ಸೋಲಿಸಿ’ ಎಂದು ಮತದಾರರಿಗೆ ಕರೆ ನೀಡಿದ್ದಾರೆ.
ಯಾವುದೇ ಕಾರಣಕ್ಕೂ ಬಿಜೆಪಿ ಸರಕಾರ ಮೀಸಲಾತಿಯನ್ನು ರದ್ದುಗೊಳಿಸುವುದಿಲ್ಲ. ಅಷ್ಟೇ ಏಕೆ, ಮೀಸಲು ರದ್ದು ಮಾಡಲು ಇತರರಿಗೂ ಕೂಡ ಬಿಡಲ್ಲ ಎಂದು ಅಮಿತ್ ಶಾ ಗುಡುಗಿದ್ದಾರೆ. ಶನಿವಾರ ರಾಜಸ್ಥಾನದ ಅಳ್ವಾರ್‌ನಲ್ಲಿ ಮಾತನಾಡಿ, ಅಧಿಕಾರದಲ್ಲಿದ್ದಾಗ ಹಿಂದುಳಿದವರ ಏಳ್ಗೆಗೆ ಕೆಲಸ ಮಾಡದ ಕಾಂಗ್ರೆಸಿಗರು “ಬಿಜೆಪಿ ಸರಕಾರ ಮೀಸಲು ರದ್ದುಪಡಿಸಲಿದೆ’ ಎಂದು ದಲಿತ ಹಾಗೂ ಹಿಂದುಳಿದ ವರ್ಗಗಳ ಸಹೋದರರ ದಾರಿತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದರು.