ನೆಲಮಂಗಲ: ವಾಹನ ಸವಾರರಿಗೆ ಒಂದೇ ಸೂರಿನಡಿ ಡಿಎಲ್, ವಿಮೆ ಹಾಗೂ ಐಎಸ್‌ಐ ಗುಣಮಟ್ಟದ ಹೆಲ್ಮೆಟ್ ವಿತರಿಸಲು ತ್ಯಾಮಗೊಂಡ್ಲು ಪೊಲೀಸ್ ಠಾಣಾ ವತಿಯಿಂದ ತಿಪ್ಪಶೆಟ್ಟಹಳ್ಳಿ ಗ್ರಾಮದ ರುದ್ರಮ್ಮ ಹನುಮಯ್ಯ ಕಲ್ಯಾಣ ಮಂಟಪದಲ್ಲಿ ಡಿಎಲ್ ಕ್ಯಾಂಪ್ ಹಮ್ಮಿಕೊಳ್ಳಲಾಗಿತ್ತು.
ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮೋಟಾರ್ ಕಾಯ್ದೆಯಿಂದ ಎಚ್ಚೆತ್ತುಕೊಂಡಿರುವ ಸಾರಿಗೆ ನಿಯಮ ಪಾಲಿಸದೇ ಇದ್ದ ವಾಹನ ಸವಾರರು, ದುಬಾರಿ ದಂಡ ಶುಲ್ಕಕ್ಕೆ ಹೆದರಿ, ವಾಹನ ಚಾಲನೆ ಪರವಾನಿಗೆ, ವಿಮೆ ಮಾಡಿಸಿಕೊಳ್ಳಲು ದಲ್ಲಾಳಿಗಳಿಗೆ ಹೆಚ್ಚಿನ ಹಣ ನೀಡುತ್ತಿದ್ದರು. ಹೀಗಾಗಿ ದಲ್ಲಾಳಿಗಳ ಹಾವಳಿಗೆ ಬ್ರೇಕ್ ಹಾಕಲು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಎಸ್ಪಿ ರವಿ.ಡಿ ಚನ್ನಣ್ಣನವರ್ ಸೂಚನೆಯಂತೆ ಜಿಲ್ಲೆಯ ಕೆಲವೆಡೆ ಆಯೋಜಿಸಲಾಗಿದ್ದ ಡಿಎಲ್ ಕ್ಯಾಂಪ್‌ಗೆ ಸಾರ್ವಜನಿಕರಿಂದ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗಿತ್ತು.
ಇದರಿಂದ ಸ್ಫೂರ್ತಿಗೊಂಡು ತ್ಯಾಮಗೊಂಡ್ಲು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಡಿಎಲ್ ಕ್ಯಾಂಪ್ ನಡೆಸಲಾಗಿತ್ತು.ಶನಿವಾರ ಪೊಲೀಸ್ ಠಾಣೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ವಾಹನ ಸವಾರರಿಗೆ ಎಲ್‌ಎಲ್‌ಆರ್, ವಿಮೆಪ್ರತಿಗಳನ್ನು ವಿತರಿಸಲಾಯಿತು. ಈ ವೇಳೆ ಠಾಣೆಯ ಎಸ್‌ಐ ಶಂಕರಲಿಂಗಯ್ಯ ಮಾತನಾಡಿ, ಗ್ರಾಮಾಂತರ ಭಾಗದ ಜನರಿಗೆ ಹೊಸ ಮೋಟಾರು ನಿಯಮದ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಮತ್ತು ಯಾವುದೇ ಮಧ್ಯವರ್ತಿಗಳಿಲ್ಲದೇ ಎಲ್‌ಎಲ್‌ಆರ್ ಹಾಗೂ ವಿಮೆ ಮಾಡಿಸಿ ಕೊಡುಲು ಡಿಎಲ್ ಕ್ಯಾಂಪ್ ಆಯೋಜಿಸಲಾಗಿತ್ತು. ಕ್ಯಾಂಪ್‌ನಲ್ಲಿ 1800ಕ್ಕೂ ಹೆಚ್ಚು ಅರ್ಜಿಗಳು ಬಂದಿವೆ, ಅಲ್ಲದೇ ಇನ್ನೂ 500ಕ್ಕೂ ಹೆಚ್ಚು ಜನರು ಹೊಸದಾಗಿ ನೋಂದಾಯಿಸಿಕೊಂಡಿದ್ದಾರೆ ಎಂದು ತಿಳಿಸಿದರು.
ಮನವಿ: ವಾಹನ ಸವಾರರಿಗೆ ಅನುಕೂಲವಾಗು ಡಿಎಲ್ ಕ್ಯಾಂಪ್ ಒಂದೇ ದಿನ ನಡೆಸಿದ್ದರಿಂದ ಹೆಚ್ಚಿನ ಜನರು ಭಾಗಿಯಾಗಲು ಆಗಿಲ್ಲ. ಹೀಗಾಗಿ ಮತ್ತೂಂದು ದಿನ ಈ ಕ್ಯಾಂಪ್ ನಡೆಸಬೇಕೆಂದು ಸಾರ್ವಜನಿಕರು ಪೋಲಿಸ್ ಅಧಿಕಾರಿಗಳಿಗೆ ಮನವಿ ಮಾಡಿದರು. ಎಎಸ್ ಸಿದ್ದಪ್ಪ, ಅಜ್ಜಣ್ಣ, ಚಿಕ್ಕವೀರಪ್ಪ, ಚಂದ್ರಶೇಖರ್, ಮಂಜುನಾಥ್, ಆದಿಮನಿ, ರಾಜೇಶ್, ನಾಗರಾಜು ಸೇರಿದಂತೆ ಠಾಣೆಯ ಸಿಬ್ಬಂದಿ ಹಾಗೂ ಆರ್‌ಟಿಓ ಅಧಿಕಾರಿಗಳು ಹಾಜರಿದ್ದರು.