ಕನಕಪುರ: ಕಳೆದ ಎರಡು ವರ್ಷಗಳ ಹಿಂದೆ ಸಚಿವ ಡಿಕೆಶಿ ಕುಟುಂಬ ಮತ್ತು ಆಪ್ತರ ಮನೆಗಳ ಮೇಲೆ ದಾಳಿ ರಾಜ್ಯದಲ್ಲಿ ಸದ್ದು ಮಾಡಿತ್ತು. ಈ ಸಂಬಂಧ ಮುಂದುವರಿದ ತನಿಖೆಯಾಗಿ ತಾಲೂಕು ಕಚೇರಿಗೆ ಭೇಟಿ ನೀಡಿದ ಆದಾಯ ತೆರಿಗೆ ಅಧಿಕಾರಿಗಳ ತಂಡ ಡಿಕೆಶಿ ಕುಟುಂಬದ ಆಸ್ತಿಗಳ ದಾಖಲೆಗಳು ಮತ್ತು ಆದಾಯಕ್ಕೆ ಸಂಬಂಧಿಸಿದ ದಾಖಲೆಗಳನ್ನು ಪರಿಶೀಲನೆ ಮಾಡಿದೆ.
ನಗರದ ಸಂಗಮ ರಸ್ತೆಯಲ್ಲಿನ ತಾಲೂಕು ಕಚೇರಿಗೆ ಬೆಳಗ್ಗೆ 11 ಗಂಟೆ ಆಗಮಿಸಿದ ಆದಾಯ ತೆರಿಗೆ ಅಧಿಕಾರಿಗಳ ನಾಲ್ಕು ಜನರ ತಂಡ, ತಹಶೀಲ್ದಾರ್ ಕುನಾಲ್ ಅವರನ್ನು ಭೇಟಿ ಮಾಡಿ ಪ್ರಕರಣವೊಂದರ ಸಂಬಂಧ ಲಿಖೀತ ಮನವಿ ನೀಡಿ, ಪ್ರಕರಣಕ್ಕೆ ಅಗತ್ಯವಾದ ಜಮೀನಿನ ದಾಖಲೆಗಳನ್ನು ಕಲೆ ಹಾಕಿದರು ಎಂದು ತಿಳಿದು ಬಂದಿದೆ.
ತಾಲೂಕು ದಂಡಾಧಿಕಾರಿಗಳ ಕಚೇರಿಗೆ ತೆರಿಗೆ ಅಧಿಕಾರಿಗಳು ಲಿಖೀತವಾಗಿ ತಾಲೂಕಿನ ಕೋಡಿಹಳ್ಳಿ, ಉಯ್ಯಂಬಹಳ್ಳಿ, ಸಾತನೂರು ಹೋಬಳಿಗಳ ವ್ಯಾಪ್ತಿಯಲ್ಲಿನ ಸರ್ವೆ ನಂಬರ್‌ಗಳ ಸಚಿವ ಡಿಕೆಶಿ ಕುಟುಂಬದ ಆಸ್ತಿಗೆ ಸಂಬಂಧಿಸಿದ ಜಮೀನಿನ ದಾಖಲೆಗಳನ್ನು ಪಡೆಯಲು ಮನವಿ ನೀಡಿ, ನಂತರ ತಹಶೀಲ್ದಾರ್ ಅವರಿಂದ ಹಲವು ವಿಷಯಗಳನ್ನು ಕಲೆ ಹಾಕಿದ್ದಾರೆ ಎಂದು ತಿಳಿದು ಬಂದಿದೆ. ತನಿಖೆಯ ವೇಳೆ ಯಾರಿಗೂ ಅವಕಾಶ ನೀಡದ್ದರಿಂದ ಮತ್ತಷ್ಟು ಕುತೂಹಲ ಹೆಚ್ಚಿಸಿದೆ.
ಡಿಕೆಶಿ ರಾಜಕೀಯ ಓಟಕ್ಕೆ ಕಡಿವಾಣ: ಲೋಕಸಭಾ ಚುನಾವಣೆಗೆ ಹತ್ತಿರದಲ್ಲಿ ಡಿಕೆಶಿಯನ್ನು ಬಂಧಿಸಲು ಪ್ರಕರಣ ತನಿಕೆ ಮೂಲಕ ಕಾನೂನಿನ ಕುಣಿಕೆಯನ್ನು ಗಟ್ಟಿಗೊಳಿಸುತ್ತಿದ್ದಾರೆ ಎನ್ನುವ ಮಾತುಗಳು ಅಲ್ಲಲ್ಲಿ ಹರಿದಾಡುತ್ತಿತ್ತು. ಕೆಲವು ಸಭೆಗಳಲ್ಲಿ ಆಪ್ತರ ಬಳಿ ತಮ್ಮ ನೋವನ್ನು ಸಚಿವ ಡಿ.ಕೆ. ಶಿವಕುಮಾರ್ ಹೊರಹಾಕಿದ್ದರು. ಈ ಹಿಂದೆ ಘರ್ಜಿಸುತ್ತಿದ್ದ ಡಿಕೆಶಿ ಆದಾಯ ತೆರಿಗೆ ಅಧಿಕಾರಿಗಳ ದಾಳಿ ನಂತರ ಶಾಂತವಾಗಿದ್ದರು ಎನ್ನಲಾಗುತ್ತಿದ್ದು, ದಿನ ಕಳೆದಂತೆ ಕಾನೂನಿನ ಕುಣಿಕೆ ಗಟ್ಟಿಯಾಗುತ್ತಿದ್ದು, ಗುರುವಾರದ ತನಿಖೆ ಇದಕ್ಕೆ ಮತ್ತಷ್ಟು ಪುಷ್ಟಿ ನೀಡಿದೆ. ಡಿಕೆಶಿ ರಾಜಕೀಯದ ಓಟಕ್ಕೆ ಕಡಿವಾಣ ಹಾಕಲಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿದೆ.
ದಾಖಲೆಗಳಲ್ಲಿ ಸಿಕ್ಕಿಬಿದ್ದರಾ?: ಐಟಿ ದಾಳಿ ನಂತರ ದೇಶದ ಪ್ರತಿಷ್ಠಿತ ಕಾನೂನು ಪಂಡಿತರು, ಅಕೌಂಟೆಂಟ್‌ಗಳು ಹಾಗೂ ವಕೀಲರು ಸೇರಿದಂತೆ ಹತ್ತಾರು ನ್ಯಾಯಾಲಯಗಳನ್ನು ಅಲೆಯುವಂತೆ ಮಾಡಿದ್ದಾರೆ ಎಂದು ಕಾರ್ಯಕ್ರಮವೊಂದರಲ್ಲಿ ಒಪ್ಪಿಕೊಂಡಿದ್ದರು ಡಿಕೆಶಿ. ಅಂದು ತಾತ್ಕಾಲಿಕವಾಗಿ ಕೃಷಿ ಆದಾಯ ಎಂದು ಘೋಷಿಸಿಕೊಂಡು ಚುನಾವಣೆಗೆ ಸ್ಪರ್ಧಿಸಿದಾಗ ತಾವೇ ದೃಢೀಕರಿಸಿದ್ದರು. ತಾಲೂಕು ದಂಡಾಧಿಕಾರಿಗಳಿಂದ ಕೃಷಿ ಆದಾಯದ ದಾಖಲೆಗಳನ್ನು ನೀಡಿ, ಆದಾಯ ತೆರಿಗೆ ಅಧಿಕಾರಿಗಳ ತನಿಖೆಯಲ್ಲಿ ಸಿಕ್ಕಿಬಿದ್ದರಾ ಎನ್ನುವ ಅನುಮಾನಗಳು ಕಾಡುತ್ತಿದೆ. ನಗದು ರೂಪದಲ್ಲಿ ಸಿಕ್ಕಿದ್ದ ಹಣದ ಮೂಲವನ್ನು ಹುಡುಕಾಟದಲ್ಲಿರುವ ಅಧಿಕಾರಿಗಳಿಗೆ ದಾಖಲೆಗಳು ಸಿಕ್ಕಿವೆ ಎಂದು ಮೂಲಗಳು ತಿಳಿಸಿವೆ.
ಮಾಹಿತಿ ಆಧಾರದಲ್ಲಿ ಆದಾಯ ಪ್ರಮಾಣ ಪತ್ರ: ಈ ಹಿಂದೆ ಪ್ರತಿ ವರ್ಷ ಡಿಕೆಶಿ ಸಹೋದರರ ಕೃಷಿ ಆದಾಯದ ಮೂಲವನ್ನು ಇವರ ಸರ್ವೆ ನಂಬರ್‌ಗಳಲ್ಲಿ ಯಾವ ಜಮೀನಿನಲ್ಲಿ ಯಾವ ಬೆಳೆ ಹಾಕಲಾಗಿದೆ ಎಂದು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಂದ ಮಾಹಿತಿ ಪಡೆದು ಕಾನೂನಿನ ಪ್ರಕಾರವೇ ಕೃಷಿ ಆದಾಯದ ದಾಖಲೆಗಳನ್ನು ನೀಡಲಾಗಿದೆ. ಕೃಷಿ , ತೋಟಗಾರಿಕೆ ಸೇರಿದಂತೆ ಯಾವ ಬೆಳೆ ಎಂದು ಅರ್ಜಿಯಲ್ಲಿ ಕೇಳಿರುತ್ತಾರೆಯೋ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ನೀಡಿದ ಮಾಹಿತಿಯ ಆಧಾರದಲ್ಲಿ ಆದಾಯಪ್ರಮಾಣ ಪತ್ರ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.