ಬೆಂಗಳೂರು: ಸತ್ಯಾಂಶ ಮರೆಮಾಚುವ ಪ್ರಯತ್ನ ಆಗಿರುವುದಿಲ್ಲ. ಪೊಲೀಸರು ತೆಗೆದುಕೊಂಡ ಮುನ್ನೆಚ್ಚರಿಕೆ ಕ್ರಮ ಆಗಿರಬಹುದು ಅಷ್ಟೇ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಅನ್ನಪೂರ್ಣೇಶ್ವರಿ ಪೊಲೀಸ್ ಠಾಣೆಯನ್ನು ಶಾಮಿಯಾನ ಮೂಲಕ ಮುಚ್ಚಲಾಗಿರುವ ಬಗ್ಗೆ ಸಮಜಾಯಿಷಿ ನೀಡಿದರು.
ವಿಧಾಸಸೌಧದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ನನ್ನ ಪ್ರಕರಣದ ಅನುಭವದಲ್ಲೇ ಹೇಳುವುದಾದರೆ, ಅಧಿಕಾರಿಗಳು ನನ್ನನ್ನು ನ್ಯಾಯಾಲಯಕ್ಕೆ ಕರೆದುಕೊಂಡು ಹೋಗುವಾಗ ಜನರಿಗೆ ಮರೆಮಾಚಿ ಕರೆದುಕೊಂಡು ಹೋಗುತ್ತಿದ್ದರು. ಕೆಲವು ಬಾರಿ ಅಭಿಮಾನಿಗಳು ಅಡ್ಡಬರುವುದು, ಜೈಕಾರ ಕೂಗುವುದು ಅಥವಾ ಯಾರಾದರೂ ಕಲ್ಲು ಎಸೆಯಬಹುದು ಎಂಬ ಕಾರಣಕ್ಕೆ ಪೊಲೀಸ್ ಅಧಿಕಾರಿಗಳು ಆ ರೀತಿ ಮಾಡುತ್ತಾರೆ. ಈ ಪ್ರಕರಣದಲ್ಲಿ ಪೊಲೀಸರು ಇದೇ ರೀತಿ ಮುನ್ನಚ್ಚರಿಕೆ ಕ್ರಮ ತೆಗೆದುಕೊಂಡಿರಬಹುದು. ಈ ಬಗ್ಗೆ ನನಗೆ ಮಾಹಿತಿ ಇಲ್ಲ ಎಂದು ವಿವರಿಸಿದರು.
ನನ್ನ ಬಳಿ ಯಾರೂ ಮಾತಾಡಿಲ್ಲ:
ದರ್ಶನ ಪ್ರಕರಣ ಮುಚ್ಚಿಹಾಕಲು ನಿಮ್ಮ ಸಚಿವರು ಯಾರಾದರೂ ಒತ್ತಡ ಹಾಕಿ¨ªಾರಾ ಎಂಬ ಪ್ರಶ್ನೆಗೆ, “ಈ ವಿಚಾರವಾಗಿ ನನ್ನ ಬಳಿ ಯಾರೂ ಮಾತನಾಡಿಲ್ಲ. ನನಗೆ ಅಷ್ಟಾಗಿ ಸಂಪರ್ಕವಿಲ್ಲ. ಸಚಿವರ ಪ್ರಯತ್ನದ ಬಗ್ಗೆ ನಿಮ್ಮಿಂದ ಮಾಹಿತಿ ಬಂದಿದೆ. ಈ ಬಗ್ಗೆ ವಿಚಾರಿಸುತ್ತೇನೆ’ ಎಂದರು.
ಈ ಪ್ರಕರಣವನ್ನು ರಾಜ್ಯ ಸರ್ಕಾರ ಮುಚ್ಚಿಹಾಕಲು ಪ್ರಯತ್ನಿಸಿದರೆ ನಾನು ಮಧ್ಯಪ್ರವೇಶಿಸಬೇಕಾಗುತ್ತದೆ ಎಂದ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಎಚ್ಚರಿಕೆ ಬಗ್ಗೆ ಕೇಳಿದಾಗ, “ಈಗಲೂ ಅವರು ಮಧ್ಯಪ್ರವೇಶಿಸಲಿ. ಯಾರು ಬೇಕಾದರೂ ಮಧ್ಯಪ್ರವೇಶ ಮಾಡಲಿ’ ಎಂದರು.