ಬೆಂಗಳೂರು: ಹೈಕಮಾಂಡ್ ಮುಂದೆ ಉಪ ಮುಖ್ಯಮಂತ್ರಿ ಸ್ಥಾನದ ಬೇಡಿಕೆಯಿಟ್ಟು ಅವಕಾಶ ಸಿಗದೆ ಬೇಸರಗೊಂಡಿದ್ದ ಡಿ.ಕೆ. ಶಿವಕುಮಾರ್ ಅವರನ್ನು ಕಾಂಗ್ರೆಸ್ ವರಿಷ್ಠೆ ಸೋನಿಯಾ ಗಾಂಧಿ ಹಾಗೂ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಸಮಾಧಾನ ಮಾಡಿದ್ದಾರೆ.
ದೆಹಲಿಯಿಂದ ನೇರವಾಗಿ ಕಾಂಗ್ರೆಸ್ ಶಾಸಕರು ವಾಸ್ತವ್ಯ ಹೂಡಿದ್ದ ಖಾಸಗಿ ಹೊಟೆಲ್‌ಗೆ ತೆರಳಿದ ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ ಶಾಸಕರಿಗೆ ಒಗ್ಗಟ್ಟಿನ ಮಂತ್ರ ಹೇಳಿ ನಂತರ ಮುನಿಸಿಕೊಂಡಿರುವ ಡಿ.ಕೆ. ಶಿವಕುಮಾರ್ ಜೊತೆ ಪ್ರತ್ಯೇಕ ಮಾತುಕತೆ ನಡೆಸಿದರು.
ಪಕ್ಷದ ಸಂಘಟನೆಗೆ ನೀವು ನೀಡಿರುವ ಕೊಡುಗೆ ಶ್ಲಾಘನೀಯ. ಪಕ್ಷ ನಿಮಗೆ ಮುಂದೆ ಸೂಕ್ತ ಸ್ಥಾನ ಮಾ® ನೀಡಲಿದೆ ಎಂದು ಹೇಳಿದರು ಂದು ಹೇಳಲಾಗಿದೆ. ಮೂಲಗಳ ಪ್ರಕಾರ ಸಚಿವ ಸ್ಥಾನದ ಜೊತೆಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ನೀಡುವ ಭರವಸೆಯೂ ದೊರೆತಿದೆ ಎಂದು ಹೇಳಲಾಗಿದೆ.
ಈಮಧ್ಯೆ, ಡಿ.ಕೆ.ಶಿವಕುಮಾರ್ ಅವರಿಗೆ ಉಪ ಮುಖ್ಯಮಂತ್ರಿ ಸ್ಥಾನ ನೀಡದ ಹಿನ್ನೆಲೆಯಲ್ಲಿ ಅವರ ಸಹೋದರ ಸಂಸದ ಡಿ.ಕೆ. ಸುರೇಶ್ ಪಕ್ಷದ ಹೈ ಕಮಾಂಡ್ ಮೇಲೆ ಮುನಿಸಿಕೊಂಡು ಮಂಗಳವಾರ ರಾತ್ರಿಯೇ ಕಾಂಗ್ರೆಸ್ ಶಾಸಕರು ವಾಸವಿರುವ ಖಾಸಗಿ ಹೊಟೆಲ್‌ನಿಂದ ತೆರಳಿದ್ದರು.ಚುನಾವಣೆ ಫಲಿತಾಂಶ ಬಂದಾಗಿನಿಂದಲೂ ಶಾಸಕರನ್ನು ಒಂದೆಡೆ ಕೂಡಿಸಿಟ್ಟುಕೊಳ್ಳುವ ಜವಾಬ್ದಾರಿಯನ್ನು ಪಕ್ಷದ ಸೂಚನೆ ಮೇರೆಗೆ ನಿಭಾಯಿಸಿದ್ದೇವೆ. ಆದರೆ, ಉಪ ಮುಖ್ಯಮಂತ್ರಿ ಹುದ್ದೆ ಪರಮೇಶ್ವರ್‌ಗೆ ನೀಡಿ, ಡಿ.ಕೆ.ಶಿವಕುಮಾರನ್ನು ಪಕ್ಷ ಕಡೆಗಣಿಸಿದೆ ಎಂದು ಹೊಟೆಲ್‌ನಲ್ಲಿ ಶಾಸಕರ ಬಳಿಯೆ ಡಿ.ಕೆ. ಸುರೇಶ್ ಅಸಮಾಧಾನ ಹೊರ ಹಾಕಿದ್ದರು. ಕೆಲಸ ಮಾಡಲು ಮಾತ್ರ ನಾವು ಬೇಕು. ಅಧಿಕಾರಕ್ಕೆ ಮಾತ್ರ ಬೇರೆಯವರು ಬೇಕು. ತಮ್ಮದೊಂದು ಕ್ಷೇತ್ರ ಗೆದ್ದುಕೊಂಡು ಬಂದವರು ಉಪ ಮುಖ್ಯಮಂತ್ರಿಯಾಗುತ್ತಾರೆ. ರಾಜ್ಯಾದ್ಯಂತ ಪ್ರವಾಸ ಮಾಡಿ ಪಕ್ಷದ ಅನೇಕ ಶಾಸಕರ ಗೆಲುವಿಗೆ ಕಾರಣರಾದವರಿಗೆ ಯಾವುದೇ ಹುದ್ದೆಯಿಲ್ಲ ಎಂದಿದ್ದರು ಎನ್ನಲಾಗಿದೆ.
ಈ ಹಿನ್ನೆಲೆಯಲ್ಲಿ ಖುದ್ದು ಸೋನಿಯಾಗಾಂಧಿ-ರಾಹುಲ್‌ಗಾಂಧಿ ಹೋಟೆಲ್‌ಗೆ ಬಂದು ಶಾಸಕರಿಗೆ ಅಭಿನಂದನೆ ಸಲ್ಲಿಸಿದ ನಂತರ ಡಿ.ಕೆ.ಶಿವಕುಮಾರ್ ಅವರನ್ನು ಸಮಾಧಾನಪಡಿಸಿದರು ಎಂದು ಹೇಳಲಾಗಿದೆ.
ನಾನು ಉಪ ಮುಖ್ಯಮಂತ್ರಿ ನೀಡುವಂತೆ ಯಾರಿಗೂ ಅರ್ಜಿ ಹಾಕಿಲ್ಲ. ನನಗೆ ಅಗತ್ಯವೂ ಇಲ್ಲ. ಪಕ್ಷ ಯಾವ ಜವಾಬ್ದಾರಿ ನೀಡುತ್ತದೆಯೋ ಅದನ್ನು ನಾನು ನಿಭಾಯಿಸುತ್ತೇನೆ. ಪಕ್ಷದ ನಾಯಕರಲ್ಲಿ ಯಾವುದೇ ಗೊಂದಲ ಇಲ್ಲ. ಇಬ್ಬರು ನಾಯಕರ ಪ್ರಮಾಣ ವಚನಕ್ಕೆ ಅವಕಾಶ ನೀಡಿದ್ದಾರೆ. ಆ ಪ್ರಕಾರ ಪ್ರಮಾಣ ವಚನ ಕಾರ್ಯಕ್ರಮ ನಡೆದಿದೆ. ಇವತ್ತು ಇಡೀ ರಾಜ್ಯವೇ ಸಂಭ್ರಮಿಸುತ್ತಿದೆ. ಹುದ್ದೆಯ ಬಗ್ಗೆ ಯಾವುದೇ ಗೊಂದಲ ಸೃಷ್ಠಿಸುವ ಅಗತ್ಯವಿಲ್ಲ. ನಾನು ಕಳೆದ ಹದಿನೈದು ದಿನಗಳಿಂದ ಮನೆಗೆ ಹೋಗಿರಲಿಲ್ಲ. ಅದಕ್ಕೆ ಹೆಂಡತಿ ಮಕ್ಕಳನ್ನು ನೋಡಲು ಮನೆಗೆ ಹೋಗಿದ್ದೆ.
– ಡಿ.ಕೆ.ಶಿವಕುಮಾರ್