ಬೆಂಗಳೂರು: ‘ಈ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೆ ಸಿ.ಟಿ ರವಿ. ಅವರಿಂದಲೇ ಸ್ವಾತಂತ್ರ್ಯ ಬಂದಿದೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ವ್ಯಂಗ್ಯವಾಡಿದ್ದಾರೆ.
‘ಈ ದೇಶಕ್ಕೆ ಸ್ವಾತಂತ್ರ್ಯ ತಂದುಕೊಡುವಲ್ಲಿ ಬಿಜೆಪಿ ನಾಯಕರ ಕೊಡುಗೆ ಹೆಚ್ಚಾಗಿದೆ’ ಎಂಬ ಸಿ.ಟಿ ರವಿ ಅವರ ಹೇಳಿಕೆಗೆ ಸಂಬಂಧಿಸಿದಂತೆ ಮಾಧ್ಯಮದವರು ಭಾನುವಾರ ಕೇಳಿದ ಪ್ರಶ್ನೆಗೆ ಶಿವಕುಮಾರ್ ಅವರು ಈ ರೀತಿ ಪ್ರತಿಕ್ರಿಯಿಸಿದರು.
‘ಹೌದು, ಸಿ.ಟಿ. ರವಿ ಅವರಿಂದಲೇ ಈ ದೇಶಕ್ಕೆ ಸ್ವಾತಂತ್ರ್ಯ ಬಂದಿದೆ’ ಎಂದರು.
ಇನ್ನು ಕಾಂಗ್ರೆಸ್ ನಾಯಕರು ಮಾನಸಿಕ ಅಸ್ವಸ್ಥರಾಗಿದ್ದಾರೆ ಎಂಬ ಹೇಳಿಕೆಗೆ ಪ್ರತಿಕ್ರಿಯೆ ನೀಡುತ್ತಾ, ‘ನಾವು ಈಗಲೇ ನಿಮ್ಹಾನ್ಸ್ ಗೆ ಹೋಗಿ ಪರೀಕ್ಷೆ ಮಾಡಿಸಿಕೊಳ್ಳುತ್ತೇವೆ’ ಎಂದು ಟಾಂಗ್ ಕೊಟ್ಟರು.
ಇನ್ನು ವಿನಯ್ ಕುಲಕರ್ಣಿ ಅವರ ವಿಚಾರವಾಗಿ ಕೇಳಿದ ಪ್ರಶ್ನೆಗಳಿಗೆ, ‘ವಿನಯ್ ಕುಲಕರ್ಣಿ ಪಕ್ಷದ ಹಿರಿಯ ನಾಯಕ, ಮಾಜಿ ಸಚಿವರಾಗಿದ್ದು, ಅವರು ಕಾಂಗ್ರೆಸ್ ನ ಭಾಗ. ವಿನಯ್ ಕುಲಕರ್ಣಿ ಅವರ ಮೇಲೆ ಕೋವಿಡ್ ನಿಯಮ ಉಲ್ಲಂಘನೆ ಪ್ರಕರಣ ದಾಖಲಿಸಿರುವುದು ಸಂತೋಷ. ಆದರೆ, ಇದೇ ರೀತಿ ಜನಾಶೀರ್ವಾದ ಯಾತ್ರೆ ಮೂಲಕ ಕೋವಿಡ್ ನಿಯಮ ಉಲ್ಲಂಘನೆ ಮಾಡಿರುವ ಕೇಂದ್ರ ಸಚಿವರ ವಿರುದ್ಧ ಯಾಕೆ ಪ್ರಕರಣ ದಾಖಲಿಸಿಲ್ಲ. ಬಿಜೆಪಿ ಕಾರ್ಯಕರ್ತರ ಸಭೆ ಮಾಡಿದಾಗ ಯಾಕೆ ಪ್ರಕರಣ ದಾಖಲಿಸಿಲ್ಲ. ಸರ್ಕಾರ ತಮಗೆ ಬೇಕಾದ ರೀತಿಯಲ್ಲಿ ಕಾನೂನು ಬಳಕೆ ಮಾಡಿಕೊಳ್ಳುತ್ತಿದೆ’ ಎಂದು ಕಿಡಿಕಾರಿದರು.
ಇದನ್ನೂ ಓದಿ :ವಿರಾಟ್ ಕೊಹ್ಲಿಯ ಅಗ್ರೆಶನ್ ಮಿತಿಯಲ್ಲಿರಬೇಕು: ಫಾರುಖ್ ಇಂಜಿನಿಯರ್
ಶಾಸಕ ಜಮೀರ್ ಅವರ ಬಗ್ಗೆ ಕೇಳಿದ ಪ್ರಶ್ನೆಗೆ, ‘ಇಡಿ ದಾಳಿ ವಿಚಾರವಾಗಿ ಶಾಸಕ ಜಮೀರ್ ಅಹ್ಮದ್ ಅವರು ಸ್ಪಷ್ಟನೆ ನೀಡಿದ್ದಾರೆ. ನಿರಪರಾಧಿಗಳಿಗೆ, ರಾಜಕೀಯ ದ್ವೇಷದ ದಾಳಿಗೆ ಒಳಗಾದವರಿಗೆ ನಾವು ಸ್ಪಂದಿಸಬೇಕು. ಅದನ್ನು ಮಾಡುತ್ತಿದ್ದೇವೆ’ ಎಂದರು.