Advertisement

ದ.ಕ.: ವಿವಿಧೆಡೆ ಗಾಳಿ-ಮಳೆ

03:50 AM Mar 22, 2017 | Team Udayavani |

ಮಂಗಳೂರು/ಉಡುಪಿ: ದ.ಕ. ಜಿಲ್ಲೆಯ ವಿವಿಧೆಡೆ ಮಂಗಳವಾರ ಸಂಜೆ ವೇಳೆಗೆ ಗಾಳಿ-ಮಳೆಯಾಗಿದೆ. ಸುಬ್ರಹ್ಮಣ್ಯ, ಬೆಳ್ತಂಗಡಿ, ಧರ್ಮಸ್ಥಳದಲ್ಲಿ ಸಾಮಾನ್ಯ ಮಳೆಯಾಗಿದ್ದು, ವಾತಾವರಣ ತಂಪಾಗಿದೆ.

Advertisement

ಉಜಿರೆ, ಪುಂಜಾಲಕಟ್ಟೆ, ವಿಟ್ಲ, ಮಾಣಿ, ಕೇಪು, ಪುಣಚ ಮೊದಲಾದೆಡೆ ಉತ್ತಮ ವರ್ಷಧಾರೆಯಾಗಿದೆ. ಮಡಂತ್ಯಾರಿನಲ್ಲಿ ಸಂಜೆ ಗುಡುಗು ಸಹಿತ ಭಾರೀ ಗಾಳಿ ಮಳೆ ಬಂದಿದೆ. ಬಂಟ್ವಾಳದಲ್ಲಿ ಬಿರುಗಾಳಿ ಸಹಿತ ಸ್ವಲ್ಪ ಮಳೆ ಬಂದಿದೆ. ಪುತ್ತೂರು, ಉಪ್ಪಿನಂಗಡಿಯಲ್ಲಿ ಸಂಜೆ ವೇಳೆ ಗಾಳಿ ಸಹಿತ ಉತ್ತಮ ಮಳೆಯಾಗಿದೆ. ಸುಳ್ಯ, ಕಡಬದಲ್ಲಿ ಹನಿ ಮಳೆಯಾಗಿದ್ದು, ರಭಸವಾಗಿ ಗಾಳಿ ಬೀಸಿದೆ. 

ರಸ್ತೆಗೆ ಬಿದ್ದ ಮರ: ಧರ್ಮಸ್ಥಳ-ಕೊಕ್ಕಡ ರಸ್ತೆಗೆ ಬೃಹತ್‌ ಮರ ಬಿದ್ದು ಸಂಚಾರ ಅಸ್ತವ್ಯಸ್ತವಾಗಿದೆ. ಈ ಪರಿಸರದಲ್ಲಿ ಮಳೆ ಕೂಡ ಸುರಿದಿದೆ. ಗೋಳಿತೊಟ್ಟು ಸೇತುವೆಯಲ್ಲಿ ಟ್ಯಾಂಕರೊಂದು ಮಗುಚಿಬಿದ್ದು ಕೆಲ ಸಮಯ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತು. ಬೆಂಗಳೂರಿನಿಂದ ಖಾಲಿ ಟ್ಯಾಂಕರ್‌ ಮಂಗಳೂರಿಗೆ ಬರುತ್ತಿತ್ತು.

ಬಿರುಗಾಳಿ, ಮಳೆ: ಹಾನಿ
ಉಪ್ಪಿನಂಗಡಿ: ಮಂಗಳವಾರ ಸಂಜೆ ಹಿರೇಬಂಡಾಡಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಭಾರೀ ಗಾಳಿಯೊಂದಿಗೆ ಆಲಿಕಲ್ಲು ಮಳೆಯಾಗಿದ್ದು, ವ್ಯಾಪಕ ಹಾನಿ ಸಂಭವಿಸಿದೆ. ಶಾಖೆಪುರ ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘದ ಮೇಲ್ಛಾವಣಿಯ ಸಿಮೆಂಟ್‌ ಶೀಟ್‌ ಗಾಳಿಗೆ ಹಾರಿ ಹೋಗಿದೆ. ಕರೆಂಕಿ ಬಳಿ ವಿದ್ಯುತ್‌ ಕಂಬ ತುಂಡಾಗಿ ರಸ್ತೆಗೆ ಬಿದ್ದಿದೆ. ಕುಬಲದಲ್ಲಿ ವಿದ್ಯುತ್‌ ಟ್ರಾನ್ಸ್‌ಫಾರ್ಮರ್‌ಗೆ ಮರ ಬಿದ್ದು ಹಾನಿಯಾಗಿದೆ. ದಾಮೋದರ ಕೇಪು ಅವರ 15 ಅಡಿಕೆ ಗಿಡ ಹಾಗೂ ಮಲ್ಲಿಗೆ ಉಮೇಶ್‌ ಅವರ 20 ಅಡಿಕೆ ಗಿಡಗಳು ಮುರಿದು ಬಿದ್ದಿವೆ. 

ನಿಡ್ಡೆಂಕಿಯ ಚಿದಾನಂದ ಅವರ ಹೊಸದಾಗಿ ನಿರ್ಮಿಸಿದ ದನದ ಕೊಟ್ಟಿಗೆಯ ಮೇಲ್ಫಾವಣಿಯ 15 ಶೀಟ್‌ಗಳು ಗಾಳಿಗೆ ಹಾರಿಹೋಗಿ ಹಾನಿಯಾಗಿದೆ. ಇದರಿಂದ ಸಾವಿರಾರು ರೂಪಾಯಿ ನಷ್ಟ ಸಂಭವಿಸಿದೆ. ಹಿರೇಬಂಡಾಡಿ ಗ್ರಾ.ಪಂ. ಸದಸ್ಯೆ ಚಂದ್ರಾವತಿ ಅವರ ಜಾಗದಲ್ಲಿದ್ದ ಎರಡು ವಿದ್ಯುತ್‌ ಕಂಬಗಳು ಬಿದ್ದಿವೆ. ಕರೆಂಕಿ ವೆಂಕಟ್ರಮಣ ಗೌಡರ 40 ಅಡಿಕೆ ಗಿಡ ಮುರಿದು ಬಿದ್ದಿದ್ದು, ಕೊಟ್ಟಿಗೆಯ ಹೆಂಚುಗಳು ಗಾಳಿಗೆ ಹಾರಿ ಹೋಗಿವೆ. ನಾರ್ಣಪ್ಪ ಗೌಡರ 50 ಅಡಿಕೆ ಗಿಡಗಳು ಮುರಿದು ಬಿದ್ದಿವೆ. 

Advertisement

ಆಲಿಕಲ್ಲು ಮಳೆ: ಈ ಭಾಗದಲ್ಲಿ ಆಲಿಕಲ್ಲು ಮಳೆಯಾಗಿದ್ದು, ಜಲ್ಲಿಕಲ್ಲಿನಷ್ಟು ದೊಡ್ಡದಾದ ಆಲಿಕಲ್ಲುಗಳು ಭೂಮಿಗೆ ಬೀಳುತ್ತಿದ್ದವು. 
ಹಲವು ಕಡೆ ಮೇಲ್ಛಾವಣಿಗೆ ಅಳವಡಿಸಿದ ಶೀಟ್‌ಗಳು, ಹೆಂಚುಗಳು ಆಲಿಕಲ್ಲು ಬಿದ್ದು ಹಾನಿಗೊಂಡಿವೆ.

Advertisement

Udayavani is now on Telegram. Click here to join our channel and stay updated with the latest news.

Next