Advertisement
ದೀಪಾವಳಿಯ ರಜೆ ಹಿನ್ನೆಲೆಯಲ್ಲಿ ವಾರಾಂತ್ಯದ ಎರಡೂ ದಿನವೂ ಜಿಲ್ಲೆಯ ವಿವಿಧ ದೇಗುಲಗಳಲ್ಲಿ ಭಕ್ತ ಸಂದಣಿ ಕಂಡು ಬಂತು. ಪ್ರವಾಸಿ ತಾಣಗಳಲ್ಲೂ ಪ್ರವಾಸಿಗರ ಸಂಖ್ಯೆ ಹೆಚ್ಚಿತ್ತು.
ವಿವಿಧ ದೇವಸ್ಥಾನ, ಮನೆಗಳಲ್ಲಿ ಶನಿವಾರ ಗೋಪೂಜೆ ನಡೆಯಿತು. ಸಂಘ ಸಂಸ್ಥೆಗಳ ವತಿಯಿಂದಲೂ ಪೂಜೆಗಳು ನಡೆದವು. ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ವತಿಯಿಂದ ಮಂಗಳೂರಿನ ಬಿಜೆಪಿ ಕಚೇರಿಯಲ್ಲಿ ಗೋಪೂಜೆ, ಲಕ್ಷ್ಮೀ ಪೂಜೆ ನೆರವೇರಿತು. ಮಹತೋಭಾರ ಶ್ರೀ ಮಂಗಳಾದೇವಿ ದೇವಸ್ಥಾನದಲ್ಲಿ ಬಲೀಂದ್ರ ಪೂಜೆ ಹಾಗೂ ತುಳಸಿ ಪೂಜೆ ನೆರವೇರಿತು.
Related Articles
ದೀಪಾವಳಿ ರಜೆ ಹಿನ್ನೆಲೆಯಲ್ಲಿ ಬೆಂಗಳೂರು ಸಹಿತ ವಿವಿಧೆಡೆಗಳಿಂದ ಊರಿಗೆ ಬಂದಿದ್ದವರು ಮರಳಿ ತೆರಳುವ ಹಿನ್ನೆಲೆಯಲ್ಲಿ ರವಿವಾರ ಸಂಜೆಯಿಂದಲೇ ನಗರದಲ್ಲಿ ವಾಹನ ದಟ್ಟಣೆ ಕಂಡು ಬಂತು. ಜತೆಗೆ ಪ್ರವಾಸಕ್ಕೆ ಬಂದಿದ್ದವರೂ ಊರಿಗೆ ತೆರಳುವ ಆತುರದಲ್ಲಿದ್ದರು. ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಸಂಜೆಯಿಂದಲೇ ಸಾಕಷ್ಟು ಪ್ರಯಾಣಿಕರು ಸಂಖ್ಯೆಯಲ್ಲಿ ಸೇರಿದ್ದರು. ಕೆಎಸ್‌ಆರ್‌ಟಿಯಿಂದ ಹೆಚ್ಚುವರಿ ಬಸ್‌ಗಳ ವ್ಯವಸ್ಥೆಯನ್ನೂ ಮಾಡಲಾಗಿತ್ತು. ಹಲವು ಬಸ್ಸುಗಳಲ್ಲಿ ಪ್ರಯಾಣಿಕರ ದಟ್ಟಣೆಯೂ ಕಂಡು ಬಂತು.
Advertisement
ಕುಕ್ಕೆ ಸುಬ್ರಹ್ಮಣ್ಯ: ಭಕ್ತ ಸಂದಣಿ ಸುಬ್ರಹ್ಮಣ್ಯ: ಸರಣಿ ರಜೆ ಹಿನ್ನೆಲೆಯಲ್ಲಿ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ರವಿವಾರ ಭಕ್ತರು ಹಾಗೂ ಪ್ರವಾಸಿಗರ ಸಂಖ್ಯೆ ಹೆಚ್ಚಿತ್ತು. ದೇಗುಲದ ಹೊರಾಂಗಣ, ರಥಬೀದಿ, ಪೇಟೆಯಲ್ಲಿ ಭಕ್ತರ ಓಡಾಟ ಕಂಡುಬಂತು. ಪೇಟೆಯಲ್ಲಿ ಹಾಗೂ ಪಾರ್ಕಿಂಗ್ ಪ್ರದೇಶದಲ್ಲಿ ವಾಹನಗಳು ಭರ್ತಿಯಾಗಿದ್ದವು.