Advertisement

ದೀಪಾವಳಿಗೆ ಸಿಗುತ್ತೆ ಇ-ಪಟಾಕಿ

06:20 AM Jan 17, 2018 | Harsha Rao |

ನವದೆಹಲಿ: ಈ ವರ್ಷದ ದೀಪಾವಳಿಗೆ ಸಿಗುವ ಪಟಾಕಿಗಳು ಹೊಗೆ ಬಿಡುವುದಿಲ್ಲ, ಅಪಾಯಕಾರಿಯೂ ಅಲ್ಲ. ಅದು ಹೇಗೆ ಎಂದು ಯೋಚಿಸುತ್ತಿದ್ದೀರಾ? ಎಲ್ಲವೂ ಅಂದುಕೊಂಡಂತೆ ನಡೆದರೆ, ಈ ಬಾರಿ ಇ-ಪಟಾಕಿ ಸಿಗಲಿದೆ. ಇದೇನು ವಿಚಿತ್ರ ಎಂದು ಕೊಳ್ಳಬೇಡಿ. ವಿಜ್ಞಾನ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿ (ಸಿಎಸ್‌ಐಆರ್‌) ವಿಜ್ಞಾನಿಗಳು ಅಂಥ ಒಂದು ಪ್ರಯತ್ನಕ್ಕೆ ಕೈ ಹಾಕಿದ್ದಾರೆ. ಅದಕ್ಕೆ ಮುತುವರ್ಜಿ ವಹಿಸಿದ್ದು ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಖಾತೆ ಸಚಿವ ಡಾ.ಹರ್ಷವರ್ಧನ್‌. ಜ.5ರಂದು ನಡೆದಿದ್ದ ಸಭೆಯಲ್ಲಿ ಸಾಂಪ್ರದಾಯಿಕ ಪಟಾಕಿಗೆ ಪರ್ಯಾಯವಾಗಿ ಅದೇ ರೀತಿಯಲ್ಲಿ ಬೆಳಕು ಮತ್ತು ಧ್ವನಿಯನ್ನು ಹೊರಸೂಸುವ ವ್ಯವಸ್ಥೆ ಬೇಕೆಂದು ಸಲಹೆ ಮಾಡಿದ್ದರು. 

Advertisement

2016 ಮತ್ತು 2017ರಲ್ಲಿ ನವದೆಹಲಿ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ಪಟಾಕಿ ಸಿಡಿಸಿದ್ದರಿಂದ ಭಾರಿ ಪ್ರಮಾಣದಲ್ಲಿ ವಾಯುಮಾಲಿನ್ಯ ಉಂಟಾಗಿತ್ತು. ಹೀಗಾಗಿ ಸುಪ್ರೀಂಕೋರ್ಟ್‌ ನವದೆಹಲಿ ವ್ಯಾಪ್ತಿಯಲ್ಲಿ ಪಟಾಕಿ ಮಾರಾಟವನ್ನೇ ನಿಷೇಧಿಸಿ ಆದೇಶ ಹೊರಡಿಸಿತ್ತು. “6 ತಿಂಗಳಲ್ಲೇ ಇ-ಪಟಾಕಿಯ ಮಾದರಿ ಸಿದ್ಧವಾಗಲಿದೆ. ದೀಪಾವಳಿಗೆ ಮಾರುಕಟ್ಟೆಗಳಲ್ಲಿ ಸಿಗಲಿದೆ. ಇ-ಪಟಾಕಿ ಸಾಂಪ್ರದಾಯಿಕ ಪಟಾಕಿಯಂತೆಯೇ ಕೆಲಸ ಮಾಡಲಿದೆ. ಆದರೆ ರಾಸಾಯನಿಕ ಹೊರಸೂಸುವುದಿಲ್ಲ’ ಎಂದು ಸಿಎಸ್‌ಐಆರ್‌ನ ನಿರ್ದೇಶಕ ಶಂತನು ಚೌಧರಿ ಹೇಳಿದ್ದಾರೆ. 

ಅದು ಹೇಗಿರುತ್ತದೆ?: ಇ-ಪಟಾಕಿಗಳು ಸಣ್ಣ ಪಾಡ್‌ (ಕೋಶ ಅಥವಾ ಬೀಜ)ದಂತೆ ಇದ್ದು ವೈರ್‌ಗಳ ಮೂಲಕ ಪರಸ್ಪರ ಸಂಪರ್ಕಕ್ಕೆ ಬಂದು ಮಿನುಗುತ್ತವೆ. ಅದನ್ನು ಆನ್‌ ಮಾಡಿದಾಗ ಪಟಾಕಿಯಂತೆಯೇ ಧ್ವನಿ ಮತ್ತು ಬೆಳಕು ಬರುತ್ತವೆ. ಗಮನಾರ್ಹ ಅಂಶವೆಂದರೆ ಚೀನೀ ಇ-ಪಟಾಕಿಗಳು ಮಾರುಕಟ್ಟೆಯಲ್ಲಿ ಕಳೆದ ವರ್ಷವೇ ಲಭ್ಯವಿತ್ತು. ಇದೇ ಮೊದಲ ಬಾರಿಗೆ ಬಾರತದ ವಿಜ್ಞಾನಿಗಳು ಈ ಪ್ರಯತ್ನ ನಡೆಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next