ಜೈಪುರ: ರಾಜಸ್ಥಾನ ವಿಧಾನಸಭೆ ಚುನಾವಣೆ ಸಮೀಪಿಸುತ್ತಿದೆ. ಬಿಜೆಪಿ ಇದುವೆರೆಗೂ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಿಸಿಲ್ಲ. ಪ್ರಧಾನಿ ನರೇಂದ್ರ ಮೋದಿ ವರ್ಚಸ್ಸು ಹಾಗೂ ಅಭಿವೃದ್ಧಿಯನ್ನೇ ಮಾನದಂಡವಾಗಿ ಇಟ್ಟುಕೊಂಡು ಸದ್ಯಕ್ಕೆ ಪ್ರಚಾರದ ಕಣಕ್ಕೆ ಇಳಿದಿದೆ.
ಈ ನಡುವೆ ರಾಜಸ್ಥಾನ ಮಾಜಿ ಸಿಎಂ ವಸುಂಧರ ರಾಜೆ ಅವರಲ್ಲದೇ ಮುಖ್ಯಮಂತ್ರಿ ಹುದ್ದೆಗೆ ಮತ್ತೂಂದು ಹೆಸರು ಕೇಳಿಬರುತ್ತಿದೆ. ಅದುವೇ ರಾಜಸ್ಥಾನದ ರಾಜಮನೆತನದ ದಿವ್ಯಾ ಕುಮಾರಿ. ಈಗಲೇ ಇವರನ್ನು ಮುಖ್ಯಮಂತ್ರಿ ಮಾಡದಿದ್ದರೂ, ರಾಜೆ ಅವರ ನಂತರ ಭವಿಷ್ಯದ ಯುವ ನಾಯಕಿಯನ್ನು ಬೆಳೆಸಲು ಭಾಜಪ ಮುಂದಾಗಿದೆ ಎಂಬುದು ಮೂಲಗಳಿಂದ ತಿಳಿದುಬಂದಿದೆ.
ದಿವ್ಯಾ ಕುಮಾರಿ ಮತ್ತು ರಾಜೆ ನಡುವೆ ಸಾಮ್ಯತೆಗಳಿವೆ. ಇಬ್ಬರೂ ರಾಜವಂಶಸ್ಥರು. ಮಹಿಳಾ ನಾಯಕಿಯರು. ರಾಜಪುತ ಸಮುದಾಯದವರು. ರಾಜಸ್ಥಾನದ 85 ವಿಧಾನಸಭೆ ಕ್ಷೇತ್ರಗಳಲ್ಲಿ ರಾಜಪುತರೇ ನಿರ್ಣಾಯಕರು. ಇವರು ಈ ಕ್ಷೇತ್ರಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಪಕ್ಷವೊಂದು ರಾಜ್ಯದಲ್ಲಿ ಚುಕ್ಕಾಣಿ ಹಿಡಿಯಲು ಈ ಕ್ಷೇತ್ರಗಳಲ್ಲಿ ಗೆಲುವು ಅಗತ್ಯ.
ಕಳೆದ ತಿಂಗಳು ಜೈಪುರದಲ್ಲಿ ನಡೆದ ಬಿಜೆಪಿಯ ಪರಿವರ್ತನ್ ಸಂಕಲ್ಪ ಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಭಾಗವಹಿಸಿದ್ದರು. ಈ ಸಮಾರಂಭದ ಸಮನ್ವಯದ ಕಾರ್ಯವನ್ನು ದಿವ್ಯಾ ಕುಮಾರಿ ಅವರಿಗೆ ವಹಿಸಲಾಗಿತ್ತು. ಸಾಮಾನ್ಯವಾಗಿ ಮೋದಿ ಅವರ ಪ್ರಚಾರ ರ್ಯಾಲಿಯ ಜವಾಬ್ದಾರಿಯನ್ನು ಪಕ್ಷದ ಹಿರಿಯ ಮತ್ತು ನಂಬಿಕಸ್ಥ ನಾಯಕರಿಗೆ ವಹಿಸಲಾಗುತ್ತದೆ. ಇನ್ನೊಂದೆಡೆ, ರಾಜೆ(70) ಈಗಲೂ ರಾಜ್ಯದಲ್ಲಿ ಪ್ರಭಾವಿ ನಾಯಕಿಯಾಗಿ ಮುಂದುವರಿದಿದ್ದಾರೆ.
ದಿವ್ಯಾ ಕುಮಾರಿ ಅವರು ಬ್ರಿಟಿಷರ ಆಳ್ವಿಕೆಯಲ್ಲಿ ಆಡಳಿತ ನಡೆಸಿದ ಕೊನೆಯ ಜೈಪುರ ಮಹಾರಾಜ ಎರಡನೇ ಮಾನ್ ಸಿಂಗ್ ಅವರ ಮೊಮ್ಮಗಳಾಗಿದ್ದಾರೆ. ಜೈಪುರದ ರಾಜಕುಮಾರಿಯಾದ ಇವರು, ಲಂಡನ್‌ನಲ್ಲಿ ಫೈನ್ ಆರ್ಟ್ಸ್ನಲ್ಲಿ ಡಿಪ್ಲೊಮಾ ಪಡೆದಿದ್ದಾರೆ. ಚುನಾವಣೆಯಲ್ಲಿ ಕೂಡ ಪ್ರಭಾವ ಬೀರುವ ಸಾಮರ್ಥ್ಯ ಹೊಂದಿದವರಾಗಿದ್ದಾರೆ. ಸದ್ಯ ರಾಜ್‌ಸಮಂದ್ ಲೋಕಸಭಾ ಕ್ಷೇತ್ರದ ಸಂಸದರೂ ಆಗಿದ್ದಾರೆ.