Advertisement

ಜಿಲ್ಲಾವಾರು ವಸ್ತುಸ್ಥಿತಿ ವರದಿ ನೀಡಲು ಸೂಚನೆ

03:45 AM May 09, 2017 | |

ಬೆಂಗಳೂರು: ರಾಜ್ಯದ ಜಿಲ್ಲೆಗಳಲ್ಲಿ ಕಾಂಗ್ರೆಸ್‌ ಹಾಗೂ ಇತರ ಪಕ್ಷಗಳ ಸ್ಥಿತಿಗತಿ ಹೇಗಿದೆ ಎನ್ನುವ ವರದಿ ನೀಡುವಂತೆ ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ಕೆ.ಸಿ.ವೇಣುಗೋಪಾಲ ಜಿಲ್ಲಾಧ್ಯಕ್ಷರು ಹಾಗೂ ಪದಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.

Advertisement

ಸೋಮವಾರ  ಇಡೀ ದಿನ ನಡೆದ ಮ್ಯಾರಾಥಾನ್‌ ಸಭೆಯಲ್ಲಿ ಎಲ್ಲ ಜಿಲ್ಲೆಗಳ ಅಧ್ಯಕ್ಷರನ್ನು ಪ್ರತ್ಯೇಕವಾಗಿ ಕರೆದು ಮಾತುಕತೆ ನಡೆಸಿರುವ ಅವರು, ಮುಂದಿನ ಚುನಾವಣೆಗೆ ಪಕ್ಷ ಈಗಿನಿಂದಲೇ ಸಿದ್ದತೆ ಮಾಡಿಕೊಳ್ಳಬೇಕಿರುವುದರಿಂದ ಪ್ರತಿ ಜಿಲ್ಲೆಯಲ್ಲಿಯೂ ಪಕ್ಷದ ಸಂಘಟನೆ, ಜಿಲ್ಲಾ ಉಸ್ತುವಾರಿ ಸಚಿವರ ಕಾರ್ಯವೈಖರಿ, ಹಾಲಿ ಶಾಸಕರ ಕಾರ್ಯ ಚಟುವಟಿಕೆ ಹಾಗೂ 2013 ರಲ್ಲಿ ಚುನಾವಣೆಗೆ ಸ್ಪರ್ಧಿಸಿ ಸೋತ ಕಾಂಗ್ರೆಸ್‌ ಅಭ್ಯರ್ಥಿಗಳ ಕಾರ್ಯ ವೈಖರಿಯ ಬಗ್ಗೆಯೂ ಸಂಪೂಣ ಮಾಹಿತಿ ನೀಡುವಂತೆ ಜಿಲ್ಲಾಧ್ಯಕ್ಷರುಗಳಿಗೆ ತಾಕೀತು ಮಾಡಿದ್ದಾರೆ ಎನ್ನಲಾಗಿದೆ.

ಎಲ್ಲ ಜಿಲ್ಲೆಗಳಲ್ಲಿಯೂ ಕಾಂಗ್ರೆಸ್‌, ಜೆಡಿಎಸ್‌ ಹಾಗೂ ಬಿಜೆಪಿಯ ಸಧ್ಯದ ಸ್ಥಿತಿ, ಆ ಪಕ್ಷಗಳಲ್ಲಿನ ಹಾಲಿ ಶಾಸಕರು ಹಾಗೂ ಸೋತ ಅಭ್ಯರ್ಥಿಗಳ ಕಾರ್ಯ ವೈಖರಿ, ಪ್ರತಿ ವಿಧಾನಸಭಾ ಕ್ಷೇತ್ರಗಳಲ್ಲಿಯೂ ಕಾಂಗ್ರೆಸ್‌ನ ದೌರ್ಬಲ್ಯ ಹಾಗೂ ಶಕ್ತಿ ಏನಿದೆ ಎನ್ನುವುದನ್ನು ಕೂಲಂಕುಷ ವರದಿ ನೀಡಬೇಕು. ಅಲ್ಲದೇ, ಬಿಜೆಪಿ ಹಾಗೂ ಜೆಡಿಎಸ್‌ ಶಕ್ತಿ ಮತ್ತು ದೌರ್ಬಲ್ಯದ ಬಗ್ಗೆಯೂ ಮಾಹಿತಿ ನೀಡಬೇಕು. ಜಿಲ್ಲಾ ಉಸ್ತುವಾರಿ ಸಚಿವರುಗಳು ಪಕ್ಷ ಸಂಘಟನೆ ಹಾಗೂ ಕಾರ್ಯಕರ್ತರೊಂದಿಗೆ ನಡೆದುಕೊಳ್ಳುವ ರೀತಿಯ ಬಗ್ಗೆ ನೇರವಾಗಿಯೇ ತಮಗೆ ದೂರು ನೀಡುವಂತೆ ವೇಣುಗೋಪಾಲ ಜಿಲ್ಲಾಧ್ಯಕ್ಷರಿಗೆ ಹೇಳಿದ್ದಾರೆ ಎಂದು ಕಾಂಗ್ರೆಸ್‌ನ ಉನ್ನತ ಮೂಲಗಳು ತಿಳಿಸಿವೆ.

ಪಕ್ಷ ಬಿಡುವವರ,ಬರುವವರ ಪಟ್ಟಿ ಕೊಡಿ: 2018 ರ ಚುನಾವಣೆಗೆ ಈಗಾಗಲೇ ಸಿದ್ದತೆಗಳು ಆರಂಭವಾಗುತ್ತಿರುವುದರಿಂದ ಕೆಲವು ನಾಯಕರು, ಹಾಲಿ ಶಾಸಕರು ಪಕ್ಷ ಬಿಡುವ ಬಗ್ಗೆ ಸೂಚನೆಗಳಿದ್ದರೆ, ತಮ್ಮ ಗಮನಕ್ಕೆ ತರುವಂತೆ ವೇಣುಗೋಪಾಲ ಸೂಚಿಸಿದ್ದಾರಂತೆ, ಅಲ್ಲದೇ ಇತರ ಪಕ್ಷಗಳಿಂದ ಕಾಂಗ್ರೆಸ್‌ ಸೇರ್ಪಡೆಯಾಗಲು ಆಸಕ್ತಿ ಇರುವವರ ಬಗ್ಗೆಯೂ ಮಾಹಿತಿ ನೀಡುವಂತೆ  ಹೇಳಿದ್ದಾರಂತೆ. ಸ್ಥಳೀಯ ಮಟ್ಟದ ನಾಯಕರು ಪಕ್ಷ ತೊರೆಯುವವರು ಹಾಗೂ ಪಕ್ಷಕ್ಕೆ ಬರುವವರಿದ್ದರೂ ತಮ್ಮ ಗಮನಕ್ಕೆ ತರುವಂತೆ ಆದೇಶಿಸಿದ್ದಾರಂತೆ.

ಬೆಂಗಳೂರು, ಮೈಸೂರು, ಬೆಳಗಾವಿ ಹಾಗೂ ಕಲಬುರಗಿ ವಿಭಾಗದಲ್ಲಿ ಕಾರ್ಯದರ್ಶಿಗಳನ್ನು ನೇಮಕ ಮಾಡಲಾಗಿದೆ. ಅವರು ವಿಭಾಗೀಯ ಕೇಂದ್ರದಲ್ಲಿ ಮನೆ ಮಾಡಿಕೊಂಡು ಇರಲು ಸೂಚನೆ ನೀಡಲಾಗಿದೆ. ಜಿಲ್ಲಾಧ್ಯಕ್ಷರುಗಳು ಅವರೊಂದಿಗೆ ನೇರ ಸಂಪರ್ಕದಲ್ಲಿಬೇಕು. ಅಲ್ಲದೇ ತಾವು ಪ್ರತಿ ತಿಂಗಳು 20 ದಿನ ರಾಜ್ಯದಲ್ಲಿಯೇ ವಾಸ್ತವ್ಯ ಹೂಡುವುದರಿಂದ ಏನಾದರೂ ಸಮಸ್ಯೆಗಳಿದ್ದರೆ ನೇರವಾಗಿ ಭೇಟಿ ಮಾಡಿ ಮಾಹಿತಿ ನೀಡುವಂತೆ ವೇಣುಗೋಪಾಲ ತಿಳಿಸಿದ್ದಾರೆ.

Advertisement

2019 ಲೋಕಸಭೆ ಚುನಾವಣೆ ಕಾಂಗ್ರೆಸ್‌ಗೆ ಅತ್ಯಂತ ಮಹತ್ವದ್ದಾಗಿದೆ. ಹೀಗಾಗಿ ರಾಹುಲ್‌ ಗಾಂಧಿ ಕರ್ನಾಟಕ ಮತ್ತು ಗುಜರಾತ್‌ ಚುನಾವಣೆ ಗೆಲುವಿಗೆ ಹೆಚ್ಚಿನ ಶ್ರಮ ಹಾಕುತ್ತಿದ್ದಾರೆ. ಹೀಗಾಗಿ 2018 ರ ಚುನಾವಣೆ ಗೆಲುವು ಅನಿವಾರ್ಯವಾಗಿದೆ. ಜಿಲ್ಲಾ ಘಟಕಗಳಲ್ಲಿನ ಸಣ್ಣ ಪುಟ್ಟ ಸಮಸ್ಯೆಗಳು ಹಾಗೂ ವೈಯಕ್ತಿಕ ಪ್ರತಿಷ್ಠೆಗಳನ್ನು ಬದಿಗಿಟ್ಟು ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ಶ್ರಮಿಸುವಂತೆ ತಾಕೀತು ಮಾಡಿದ್ದಾರೆ ಎಂದು ತಿಳಿದು ಬಂದಿದೆ.

ಲಾಬಿ, ಬಹಿರಂಗ ಹೇಳಿಕೆಗೆ ಬ್ರೇಕ್‌
ಕೆಪಿಸಿಸಿ ಜಿಲ್ಲಾಧ್ಯಕ್ಷರು ಹಾಗೂ ಪಕ್ಷದ ರಾಜ್ಯ ಮಟ್ಟದ ಪದಾಧಿಕಾರಿಗಳು ಕೆಪಿಸಿಸಿ ಅಧ್ಯಕ್ಷರು ಯಾರಾಗಬೇಕೆಂದು ಲಾಬಿ ಮಾಡದಂತೆ ವೇಣುಗೋಪಾಲ ಖಡಕ್‌ ಎಚ್ಚರಿಕೆ ನೀಡಿದ್ದಾರಂತೆ, ಪಕ್ಷದ ರಾಜ್ಯಾಧ್ಯಕ್ಷರು ಯಾರಾಗಬೇಕೆಂದು ಹೈ ಕಮಾಂಡ್‌ ತೀರ್ಮಾನ ಮಾಡುತ್ತದೆ. ಆ ವಿಷಯದಲ್ಲಿ ಪದಾಧಿಕಾರಿಗಳು ಯಾರ ಪರವಾಗಿಯೂ ಲಾಬಿ ಮಾಡುವಂತಿಲ್ಲ. ಅಲ್ಲದೇ ಪಕ್ಷದ ಆಂತರಿಕ ವಿಷಯಗಳನ್ನು ಬಹಿರಂಗವಾಗಿ ಮಾಧ್ಯಮಗಳ ಮುಂದೆ ಹೇಳಿಕೆ ನೀಡದಂತೆ ಎಲ್ಲರಿಗೂ ಎಚ್ಚರಿಕೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.

ಇಂದು ಸಚಿವರು, ಶಾಸಕರು, ಸಂಸದರ ಸಭೆ
ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ವೇಣುಗೋಪಾಲ ಅವರು ಇಂದು ಸಚಿವರು, ಶಾಸಕರು ಹಾಗೂ ಸಂಸದರು ಮತ್ತು 2013 ರಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗಳಾಗಿ ಸೋತವರೊಂದಿಗೆ ಸಭೆ ನಡೆಸಲಿದ್ದಾರೆ.ಮಂಗಳವಾರ ಕೂಡ ನಿರಂತರ ಸಭೆ ನಡೆಯಲಿದ್ದು, ರಾಜ್ಯದಲ್ಲಿ ಪಕ್ಷದ ಪರಿಸ್ಥಿತಿ ಹಾಗೂ ಮುಂದಿನ ಚುನಾವಣೆಯ ಸಿದ್ದತೆ ಕುರಿತು ಎಲ್ಲರ ಅಭಿಪ್ರಾಯವನ್ನು ಸಂಗ್ರಹಿಸಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next