ಬೆಂಗಳೂರು: ನಗರ ಸ್ಥಳೀಯ ಸಂಸ್ಥೆ ಚುನಾವಣೆಗೆ ಮುನ್ನವೇ ಜೆಡಿಎಸ್ ಜಿಲ್ಲಾ ಘಟಕಗಳನ್ನು ಪುನಾರಚಿಸಲು ತೀರ್ಮಾನಿಸಲಾಗಿದೆ. ಅದರಂತೆ ನಾನೂ ಸೇರಿ ಪಕ್ಷದ ರಾಜ್ಯಾಧ್ಯಕ್ಷರು ಹಾಗೂ ಪ್ರಮುಖರು ಆ.11ರಿಂದ 14ರವರೆಗೆ ನಾಲ್ಕು ದಿನಗಳ ಕಾಲ ಸ್ಥಳೀಯ ಘಟಕಗಳು ಸ್ಥಗಿತಗೊಂಡಿರುವ ಅಥವಾ ಕ್ರಿಯಾಶೀಲವಾಗದೇ ಇರುವ ಜಿಲ್ಲೆಗಳಿಗೆ ಭೇಟಿ ನೀಡಿ ಅವುಗಳನ್ನು ಪುನಾರಚನೆ ಮಾಡಲಿದ್ದೇವೆ. ಆ. 15ರೊಳಗೆ ಈ ಪ್ರಕ್ರಿಯೆ ಪೂರ್ಣಗೊಳಿಸಲಿದ್ದೇವೆಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ತಿಳಿಸಿದ್ದಾರೆ.
ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಬೇರೆ ಜವಾಬ್ದಾರಿ ಇರುವುದರಿಂದ ನಗರ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ರಾಜ್ಯಾದ್ಯಂತ ಪ್ರವಾಸ ಮಾಡಲು ಕಷ್ಟವಾಗುತ್ತದೆ. ಹೀಗಾಗಿ ಈ ಜವಾಬ್ದಾರಿಯನ್ನು ನಾನು ಮತ್ತು ನೂತನ ರಾಜ್ಯಾಧ್ಯಕ್ಷರು ತೆಗೆದುಕೊಳ್ಳುತ್ತೇವೆ’ ಎಂದರು.
ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಜತೆಗಿನ ಮೈತ್ರಿ ಕುರಿತಂತೆ ಪ್ರತಿಕ್ರಿಯಿಸಿದ ದೇವೇಗೌಡರು, ಎರಡೂ ಪಕ್ಷಗಳು ತಮ್ಮ ಶಕ್ತಿಯನ್ನು ಅರ್ಥ ಮಾಡಿಕೊಂಡು ಮತ್ತು ಆ ಭಾಗದಲ್ಲಿ ಹಿಂದೆ ಏನಾಗಿದೆ ಎಂಬುದನ್ನು ತಿಳಿದುಕೊಂಡು ರಾಷ್ಟ್ರಮಟ್ಟದಲ್ಲಿ ತೀರ್ಮಾನ ಕೈಗೊಳ್ಳಲಾಗುವುದು. ಈ ವೇಳೆ ರಾಜ್ಯ ಮುಖಂಡರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಲಾಗುವುದು ಎಂದರು.
ಜೆಡಿಎಸ್ ಮತ್ತು ಸಮ್ಮಿಶ್ರ ಸರ್ಕಾರ ಉತ್ತರ ಕರ್ನಾಟಕ ವಿರೋಧಿ ಎಂಬ ಆರೋಪದ ಹಿನ್ನೆಲೆಯಲ್ಲಿ ಸಮ್ಮಿಶ್ರ ಸರ್ಕಾರ, ಅದರಲ್ಲೂ ಮುಖ್ಯವಾಗಿ ಜೆಡಿಎಸ್ ಆ ಭಾಗಕ್ಕೆ ಏನೆಲ್ಲ ಕೆಲಸ ಮಾಡಿದೆ ಎಂಬುದನ್ನು ಜನರಿಗೆ ತಿಳಿಸುವ ಉದ್ದೇಶದಿಂದ ಕಿರು ಹೊತ್ತಿಗೆ ಹೊರ ತರಲಾಗುವುದು. ನಗರ ಸ್ಥಳೀಯ ಸಂಸ್ಥೆ ಚುನಾವಣೆ ವೇಳೆ ಇದನ್ನು ಉತ್ತರ ಕರ್ನಾಟಕ ಭಾಗದಲ್ಲಿ ಮನೆ, ಮನೆಗೆ ತಲುಪಿಸಲು ತೀರ್ಮಾನಿಸಲಾಗಿದೆ. ಹಿಂದಿನ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಮಂಡಿಸಿದ ಬಜೆಟ್ ಮತ್ತು ಕುಮಾರಸ್ವಾಮಿ ಮಂಡಿಸಿದ ಬಜೆಟ್ ಸೇರಿದಂತೆ ಸರ್ಕಾರ, ಉತ್ತರ ಕರ್ನಾಟಕ ಭಾಗಕ್ಕೆ ಏನು ಕೊಟ್ಟಿದೆ ಮತ್ತು ಜೆಡಿಎಸ್ ಇದುವರೆಗೆ ಆ ಭಾಗಕ್ಕೆ ಏನು ಮಾಡಿದೆ ಎಂಬುದನ್ನು ಆ ಭಾಗದ ಜನರಿಗೆ ಮನವರಿಕೆ ಮಾಡುವ ಉದ್ದೇಶದಿಂದ ಕಿರುಹೊತ್ತಿಗೆ ಪ್ರಕಟಿಸಲಾಗುವುದು ಎಂದು ಹೇಳಿದರು.
ಇದಕ್ಕಾಗಿ ಸಮಿತಿಯೊಂದನ್ನು ರಚಿಸಿದ್ದು, ಆ.10ರೊಳಗೆ ಕಿರು ಹೊತ್ತಿಗೆಗೆ ಬೇಕಾದ ಸರಕುಗಳನ್ನು ಸಿದ್ಧಪಡಿಸುವಂತೆ ಸೂಚಿಸಲಾಗಿದೆ. ನಂತರ, ಅದನ್ನು ಪ್ರಕಟಿಸಿ ನಗರ ಸ್ಥಳೀಯ ಸಂಸ್ಥೆ ಚುನಾವಣೆ ಪ್ರಚಾರದ ವೇಳೆ ಕಾರ್ಯಕರ್ತರು ಅದನ್ನು ಮನೆ ಮನೆಗೆ ಹಂಚಲಿದ್ದಾರೆ. ಸಾಲ ಮನ್ನಾ ವಿಚಾರದ ಬಗ್ಗೆ ರಾಷ್ಟ್ರೀಯ ಪಕ್ಷವೊಂದು ಅಪಪ್ರಚಾರ ಮಾಡುತ್ತಿದೆ. ಉತ್ತರ ಕರ್ನಾಟಕಕ್ಕೆ ಸಮ್ಮಿಶ್ರ ಸರ್ಕಾರ ಅನ್ಯಾಯ ಮಾಡುತ್ತಿದೆ ಎಂದೆಲ್ಲ ಆರೋಪಿಸುತ್ತಿದೆ. ಇದೆಲ್ಲಕ್ಕೂ ಕಿರುಹೊತ್ತಿಗೆ ಮೂಲಕ ಉತ್ತರ ನೀಡುತ್ತಿದ್ದೇವೆ ಎಂದು ಹೇಳಿದರು.
ಬೆಂಗಳೂರಿನಲ್ಲಿ ಜೆಡಿಎಸ್
ರಾಷ್ಟ್ರೀಯ ಕಾರ್ಯಕಾರಿಣಿ
ಜೆಡಿಎಸ್ ರಾಷ್ಟ್ರೀಯ ಕಾರ್ಯಕಾರಿಣಿಯನ್ನು ಈ ವರ್ಷ ಬೆಂಗಳೂರಿನಲ್ಲಿ ನಡೆಸಲು ತೀರ್ಮಾನಿಸಿದ್ದು, ಸೆಪ್ಟೆಂಬರ್ ಕೊನೆಯ ವಾರ ಅಥವಾ ಅಕ್ಟೋಬರ್ ಮೊದಲ ವಾರದಲ್ಲಿ ನಡೆಯಲಿದೆ ಎಂದು ದೇವೇಗೌಡ ಹೇಳಿದರು. ಜೆಡಿಎಸ್ ರಾಜ್ಯಾಧ್ಯಕ್ಷರ ಬದಲಾವಣೆ, ರಾಜ್ಯ ಘಟಕ ಪುನಾರಚನೆ ಸೇರಿ ಪಕ್ಷದ ಅನೇಕ ತೀರ್ಮಾನಗಳಿಗೆ ರಾಷ್ಟ್ರೀಯ ಕಾರ್ಯಕಾರಿಣಿ ಅನುಮೋದನೆ ಪಡೆದುಕೊಳ್ಳಬೇಕಾಗಿದೆ. ಹೀಗಾಗಿ, ಈ ಬಾರಿ ಬೆಂಗಳೂರಿನಲ್ಲೇ ರಾಷ್ಟ್ರೀಯ ಕಾರ್ಯಕಾರಿಣಿ ನಡೆಸಲು ನಿರ್ಧರಿಸಲಾಗಿದೆ. ಕಾರ್ಯಕಾರಿಣಿಯಲ್ಲಿ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಪಕ್ಷ ಅಸ್ತಿತ್ವದಲ್ಲಿರುವ ವಿವಿಧ ರಾಜ್ಯಗಳಲ್ಲಿ ಇತರ ಪಕ್ಷಗಳೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವ ಬಗ್ಗೆಯೂ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು. ಜತೆಗೆ, ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯೇತರ ಮೈತ್ರಿಕೂಟ ರಚನೆ ಕುರಿತಂತೆಯೂ ಸಮಾಲೋಚನೆ ನಡೆಸಲಾಗುವುದು ಎಂದು ತಿಳಿಸಿದರು.