Advertisement

ಚಂದ್ರಯಾನ-2 ರಲ್ಲಿ ಜಿಲ್ಲೆಯ ವಿಜ್ಞಾನಿ ಗುರ್ರಪ್ಪ ಛಾಪು

09:55 PM Sep 08, 2019 | Lakshmi GovindaRaju |

ಚಿಕ್ಕಬಳ್ಳಾಪುರ: ಇಸ್ರೋ ಅಂದರೆ ಸಾಕು ಇಡೀ ಜಗತ್ತೆ ನಿಬ್ಬೆರಗಾಗಿ ನೋಡುತ್ತದೆ. ದೇಶದ ತಂತ್ರಜ್ಞಾನ ಕ್ಷೇತ್ರದಲ್ಲಿ ತನ್ನದೇ ಆದ ಕಾರ್ಯ ಚಟುವಟಕೆಗಳಿಂದ ಅದರಲ್ಲೂ ಚಂದ್ರಯಾನ-2 ಸಾಧನೆ ಬಳಿಕ ವಿಶ್ವದ ಗಮನ ಸೆಳೆಯುತ್ತಿರುವ ಇಸ್ರೋ ಟೀಮ್‌ನಲ್ಲಿ ಬರಗಾಲದ ಜಿಲ್ಲೆಯೆಂಬ ಹಣೆಪಟ್ಟಿ ಹೊಂದಿರುವ ಚಿಕ್ಕಬಳ್ಳಾಪುರದ ವಿಜ್ಞಾನಿಯೊಬ್ಬರು ಕಾರ್ಯ ನಿರ್ವಹಿಸುವ ಮೂಲಕ ಗಮನ ಸೆಳೆದಿದ್ದಾರೆ.

Advertisement

ಹೌದು, ಜಿಲ್ಲೆಯಲ್ಲಿ ಹಿಂದುಳಿದ ತಾಲೂಕುಗಳ ಪಟ್ಟಿಯಲ್ಲಿ ಮೊದಲಿರುವ ಅತಿ ಚಿಕ್ಕ ತಾಲೂಕಾದ ಗುಡಿಬಂಡೆಗೆ ಸೇರಿದ ಕುಗ್ರಾಮವೊಂದಕ್ಕೆ ಸೇರಿದ ಗುರ್ರಪ್ಪ, ಹಲವು ವರ್ಷಗಳಿಂದ ಇಸ್ರೋದಲ್ಲಿ ವಿಜ್ಞಾನಿಯಾಗಿ ಕಾರ್ಯ ನಿರ್ವಹಿಸುತ್ತಿರುವುದು ಜಿಲ್ಲೆಯು ಹೆಮ್ಮೆ ಪಡುವಂತಾಗಿದೆ.

ಕಳೆದ ಶನಿವಾರ ಬೆಂಗಳೂರಿನ ಇಸ್ರೋ ನಿಯಂತ್ರಣ ಕಚೇರಿಯಲ್ಲಿ ನಡೆದ ಚಂದ್ರಯಾನ-2 ರ ವಿಕ್ರಮ ಲ್ಯಾಂಡರ್‌ ತನ್ನ ಪಥ ಬದಲಿಸಿ ಸಂಪರ್ಕಕ್ಕೆ ಸಿಗದಿದ್ದರೂ ಧೃತಿಗೆಡದ ಇಸ್ರೋ ವಿಜ್ಞಾನಿಗಳು ಉತ್ಸಾಹದಿಂದಲೇ ತಮ್ಮ ಕಾರ್ಯವನ್ನು ಮುಂದುವರಿಸಿದ್ದರು. ಖುದ್ದು ಪ್ರಧಾನಿ ಪ್ರಧಾನಿ ಮೋದಿಯೇ ಇಸ್ರೋ ನಿಯಂತ್ರಣ ಘಟಕಕ್ಕೆ ತೆರಳಿ ಇಸ್ರೋ ಅಧ್ಯಕ್ಷ ಕೆ.ಶಿವನ್‌ಗೆ ಸಾಂತ್ವನ ಹೇಳಿದ್ದರು. ಈ ಸಂದರ್ಭದಲ್ಲಿ ಪ್ರಧಾನಿ ಮೋದಿ ಅಕ್ಕಪಕ್ಕ ಇಸ್ರೋ ವಿಜ್ಞಾನಿಯಾಗಿರುವ ಜಿಲ್ಲೆಯ ಗುರ್ರಪ್ಪ, ಕಾಣಿಸಿಕೊಳ್ಳುವ ಮೂಲಕ ಗಮನ ಸೆಳೆದಿದ್ದಾರೆ.

ಜಂಗಾಲಹಳ್ಳಿಯವರು: ಇಸ್ರೋ ಸಂಸ್ಥೆಯಲ್ಲಿ ಟೀಮ್‌ ಆಪರೇಟರ್‌ ಆಗಿ ಕಾರ್ಯನಿರ್ವಹಿಸುತ್ತಿರುವ ಗುರ್ರಪ್ಪ, ಜಿಲ್ಲೆಯ ಗುಡಿಬಂಡೆ ತಾಲೂಕಿನ ವರ‌್ಲಕೊಂಡ ಗ್ರಾಪಂ ವ್ಯಾಪ್ತಿಗೆ ಬರುವ ಜಂಗಾಲಹಳ್ಳಿ ಗ್ರಾಮದವರು. ಬಡತನದಲ್ಲಿಯೇ ಹುಟ್ಟಿ ಬೆಳೆದ ಗುರ್ರಪ್ಪ, ವಿಶ್ವದ ಪ್ರತಿಷ್ಠಿತ ಭಾರತೀಯ ಬಾಹ್ಯಾಕಾಶ ಸಂಸ್ಥೆಯಾದ ಇಸ್ರೋದಲ್ಲಿ ಕಾರ್ಯ ನಿರ್ವಹಿಸುತ್ತಿರುವುದು ಜಿಲ್ಲೆಗೆ ಹೆಮ್ಮೆಯ ವಿಷಯ.

ಚಿಕ್ಕಬಳ್ಳಾಪುರ ಮಳೆ, ಬೆಳೆ ಇಲ್ಲದೇ ಬರದ ಜಿಲ್ಲೆಯಾದರೂ ಜಿಲ್ಲೆಯಲ್ಲಿ ವಿಜ್ಞಾನಿಗಳಿಗೆ ಬರ ಇಲ್ಲ ಎನ್ನುವುದನ್ನು ಸಾಬೀತು ಮಾಡಿದೆ. ಬೆಂಗಳೂರಿನ ಇಸ್ರೋ ನಿಯಂತ್ರಣ ಘಟಕದಲ್ಲಿ ಪ್ರಧಾನಿ ನರೇಂದ್ರ ಮೋದಿ ಭೇಟಿ ವೇಳೆ ಗುರ್ರಪ್ಪ, ಕೂಡ ಅವರೊಂದಿಗೆ ಕಾಣಿಸಿಕೊಂಡಿದ್ದನ್ನು ಅವರ ಹುಟ್ಟೂರಿನ ಜನ ದೃಶ್ಯ ಮಾಧ್ಯಮಗಳಲ್ಲಿ ನೋಡಿ ಸಂತಸ ಪಟ್ಟಿದ್ದಾರೆ.

Advertisement

28 ವರ್ಷಗಳಿಂದ ಕರ್ತವ್ಯ: ಗುರ್ರಪ್ಪ, ತಮ್ಮ ಪ್ರಾಥಮಿಕ ಶಿಕ್ಷಣವನ್ನು ಗುಡಿಬಂಡೆ ತಾಲೂಕಿನ ಸ್ವಗ್ರಾಮ ಜಂಗಾಲಹಳ್ಳಿ ಹಾಗೂ ಪೋಲಂಪಲ್ಲಿ ಗ್ರಾಮದಲ್ಲಿ ಮುಗಿಸಿ ಪ್ರೌಢ ಶಿಕ್ಷಣವನ್ನು ಗುಡಿಬಂಡೆಯಲ್ಲಿ ಮುಗಿಸಿದ್ದಾರೆ. ತದ ನಂತರ ಬೆಂಗಳೂರಿನಲ್ಲಿ ಡಿಪ್ಲೋಮಾ ಕೋರ್ಸ್‌ ಓದಿದ ಬಳಿಕ ಬೆಂಗಳೂರಿನ ಬಿಇಎಂಎಸ್‌ ಕಾಲೇಜಿನಲ್ಲಿ ಇಂಜಿನಿಯರಿಂಗ್‌ ನಂತರ ಕಳೆದ 28 ವರ್ಷಗಳಿಂದ ಇಸ್ರೋ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಾರೆ.

ಇವರೊಂದಿಗೆ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಡಿ.ಪಾಳ್ಯದ ಆರ್‌.ಶ್ರೀನಾಥ್‌ ಎಂಬುವರು ಕೆಲಸ ಮಾಡುತ್ತಿದ್ದಾರೆ ಎಂದು ಗುರ್ರಪ್ಪ ತನ್ನ ಸಹೋದ್ಯೋಗಿಯನ್ನು ನೆನೆಸಿಕೊಂಡರು. ಚಂದ್ರಯಾನದಲ್ಲಿ ಆರ್ಬಿಟರ್‌ ಕಳುಹಿಸುವ ಚಿತ್ರಗಳನ್ನು ಫೋಕಸ್‌ ಮಾಡಿ ಆ ಚಿತ್ರಗಳನ್ನು ವಿಜ್ಞಾನಿಗಳಿಗೆ ನೀಡುವ ಕೆಲಸವನ್ನು ಶ್ರೀನಾಥ್‌ ಮಾಡುತ್ತಿದ್ದಾರೆ.

ಕಂಟ್ರೋಲ್‌ ಯೂನಿಟ್‌ ಮ್ಯಾನೇಜರ್‌: ಇಸ್ರೋ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಗುರ್ರಪ್ಪ, ಇಸ್ರೋ ನಿಯಂತ್ರಣ ಘಟಕದಲ್ಲಿರುವ ಕಂಟ್ರೋಲ್‌ ಯೂನಿಟ್‌ ಮ್ಯಾನೇಜರ್‌ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಸದ್ಯ ಚಂದ್ರಯಾನ-2ರ ಕಂಟ್ರೋಲ್‌ ಯೂನಿಟ್‌ನ್ನು ಕೂಡ ಇವರೇ ಅಭಿವೃದ್ಧಿಪಡಿಸಿದ್ದಾರೆ. ಒಟ್ಟಿನಲ್ಲಿ ಬರದಿಂದ ತತ್ತರಿಸುತ್ತಿರುವ ಜಿಲ್ಲೆಯಲ್ಲಿ ವಿಜ್ಞಾನಿಗಳಿಗೆ ಬರ ಇಲ್ಲ ಎಂಬುದನ್ನು ಇಸ್ರೋ ಸಂಸ್ಥೆಯಲ್ಲಿ ಸತತ 28 ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿರುವುದು ಗುರ್ರಪ್ಪ ಸೇವೆಯನ್ನು ನೋಡಿದರೆ ಚಿಕ್ಕಬಳ್ಳಾಪುರ ಜಿಲ್ಲೆ ಹೆಮ್ಮೆ ಪಡುವಂತಾಗಿದೆ.

ಇಸ್ರೋ ಸಂಸ್ಥೆಯಲ್ಲಿ ಕೆಲಸ ಮಾಡುವುದು ನನಗೆ ಹೆಮ್ಮೆಯ ವಿಚಾರ. ಚಂದ್ರಯಾನ-2 ಯಶಸ್ವಿಯಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಇಸ್ರೋದಲ್ಲಿ ಕೆಲಸ ಮಾಡುವ ಪ್ರತಿಯೊಬ್ಬರು ಕೂಡ ಸಾಕಷ್ಟು ಶ್ರಮಪಟ್ಟಿದ್ದಾರೆ. ರಾತ್ರಿ, ಹಗಲು ಕೆಲಸ ಮಾಡಿದ್ದಾರೆ.
-ಗುರ್ರಪ್ಪ, ಇಸ್ರೋ ವಿಜ್ಞಾನಿ

* ಕಾಗತಿ ನಾಗರಾಜಪ್ಪ

Advertisement

Udayavani is now on Telegram. Click here to join our channel and stay updated with the latest news.

Next