ಬಸವಕಲ್ಯಾಣ: ಮನರೇಗಾ ಹಾಗೂ ಜೆಜೆಎಂ ಯೋಜನೆಯಡಿ ತಾಲೂಕಿನ ವಿವಿಧೆಡೆ ಕೈಗೊಂಡ ಕಾಮಗಾರಿಗಳನ್ನು ಜಿಪಂ ಸಿಇಒ ಜಹೀರಾ ನಸಿಮ್ ಸೋಮವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಯರಬಾಗ ಗ್ರಾಮಕ್ಕೆ ಹೋಗುವ ರಸ್ತೆ ಪಕ್ಕದಲ್ಲಿ ನಿರ್ಮಾಣವಾಗುತ್ತಿರುವ ಘನತ್ಯಾಜ್ಯ ವಿಲೇವಾರಿ ಘಟಕಗಳನ್ನು ವೀಕ್ಷಿಸಿದರು ಹಾಗೂ ಯರಬಾಗ ಗ್ರಾಪಂ ವ್ಯಾಪ್ತಿಯ ಸದಲಾಪುರ ಗ್ರಾಮದ ಹೂಳು ತುಂಬಿದ ಕೆರೆಗೆ ಭೇಟಿ ನೀಡಿ ಮೂರು ದಿನದೊಳಗೆ ಕೆರೆ ಹೂಳೆತ್ತುವ ಕಾಮಗಾರಿ ಪ್ರಾರಂಭಿಸಿ, ಮಳೆಗಾಲದಲ್ಲಿ ನೀರು ತುಂಬುವಂತೆ ಮಾಡಬೇಕು. ಇದರಿಂದ ಅಂತರ್ಜಲ ಹೆಚ್ಚುವ ಜೊತೆಗೆ ಜನರಿಗೆ ಅನುಕೂಲವಾಗುತ್ತದೆ ಎಂದರು.
ತಡೋಳಾ ಗ್ರಾಮದಲ್ಲಿ ಜೆಜೆಎಂ ಯೋಜನೆಯಡಿ ಮನೆ-ಮನೆಗೆ ಕುಡಿವ ನೀರಿನ ಸಂಪರ್ಕ ಕಲ್ಪಿಸಿದ್ದ ನಲ್ಲಿ ಪರಿಶೀಲಿಸಿ, ಆದಷ್ಟು ಬೇಗ ಕಾಮಗಾರಿ ಮುಗಿಸಿ ಚಾಲನೆ ನೀಡಬೇಕು ಎಂದರು.
ನಂತರ ತಡೋಳಾ ಗ್ರಾಪಂ ವ್ಯಾಪ್ತಿಯ ಕೌಡಿಯಾಳ (ಎಸ್) ಗ್ರಾಮದಲ್ಲಿ ಮನರೇಗಾ ಯೋಜನೆ ಸದ್ಬಳಕೆ ಮಾಡಿಕೊಂಡು ಗುಲಾಬಿ ಹೂ ಬೆಳೆದ ತೋಟಕ್ಕೆ ಭೇಟಿ ನೀಡಿ ಫಲಾನುಭವಿಗಳ ಜೊತೆ ಸಂವಾದ ನಡೆಸಿದರು.
ಈ ವೇಳೆ ತಾಪಂ ಇಒ ಕಿರಣ್ ಪಾಟೀಲ್, ಸಹಾಯಕ ನಿದೇರ್ಶಕ (ಪಂ.ರಾ) ಅರುಣಕುಮಾರ ಪಾಟೀಲ್, ಸಹಾಯಕ ನಿರ್ದೇಶಕ (ಮನರೇಗಾ) ಸಂತೋಷ ಚವ್ಹಾಣ, ಟಿಸಿ ಸುಧಾಕಾರ್ ಪಾಟೀಲ್, ಟಿಐಇಸಿ ವೀರಾರೆಡ್ಡಿ, ಪಿಡಿಒಗಳಾದ ಪದ್ಮಪ್ಪ ಗಾಣಿಗೇರ, ಮಲ್ಲನಗೌಡ, ಬಸವರಾಜ ರೋಗಿ ಸೇರಿದಂತೆ ವಿವಿಧ ಇಲಾಖೆ ಅಧಿ ಕಾರಿಗಳು ಇದ್ದರು.