Advertisement

ಅಗ್ರ ರ್‍ಯಾಂಕ್‌ ಪಡೆಯಲು ಜಿಪಂ ಕಸರತ್ತು

12:56 AM Sep 23, 2019 | Team Udayavani |

ಬೆಂಗಳೂರು: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ “ಸ್ವಚ್ಛ ಸರ್ವೇಕ್ಷಣ ಗ್ರಾಮೀಣ -2019ರ’ ರ್‍ಯಾಂಕಿಂಗ್‌ ಪಟ್ಟಿಯಲ್ಲಿ ಸ್ಥಾನ ಪಡೆಯುವ ನಿಟ್ಟಿನಲ್ಲಿ ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿ ಸಾರ್ವಜನಿಕರಲ್ಲಿ ಅರಿವು ಮೂಡಿಸುತ್ತಿದೆ. ಈಗಾಗಲೇ ಸರ್ಕಾರಿ ಶಾಲೆ, ಕಾಲೇಜು, ಅಂಗನವಾಡಿ ಕೇಂದ್ರ, ಸಾರ್ವಜನಿಕ ಸ್ಥಳಗಳಲ್ಲಿ ಸ್ವಚ್ಛತೆ, ಪರಿಶಿಷ್ಟ ಜಾತಿ, ಪಂಗಡದ ಜನವಸತಿ ಪ್ರದೇಶಗಳಲ್ಲಿನ ಸಮುದಾಯ ಶೌಚಾಲಯಗಳ ಬಳಕೆ ಮತ್ತು ನಿರ್ವಹಣೆ, ಮಾರುಕಟ್ಟೆ ಮತ್ತು ಧಾರ್ಮಿಕ ಸ್ಥಳಗಳಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳುವ ಬಗ್ಗೆ ಜಿಲ್ಲಾಡಳಿತ ಸಾರ್ವಜನಿಕರಿಗೆ ತಿಳಿವಳಿಕೆ ನೀಡಿದೆ.

Advertisement

ಜನರು ನೀಡುವ ಅಂಕಗಳ ಆಧಾರದಲ್ಲಿ ಕೇಂದ್ರ ಸರ್ಕಾರ ಸ್ವಚ್ಛ ಸರ್ವೇಕ್ಷಣ ಗ್ರಾಮೀಣ ಶ್ರೇಣಿ ಪಟ್ಟಿ ಸಿದ್ಧಪಡಿಸುತ್ತದೆ. ಹೆಚ್ಚು ಓಟ್‌ ಪಡೆದು, ಪಟ್ಟಿಯಲ್ಲಿ ಅಗ್ರ ಸ್ಥಾನ ಪಡೆದ ಜಿಲ್ಲಾ ಪಂಚಾಯಿತಿಗೆ ಅ.2ರಂದು ನಡೆಯುವ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಪ್ರಶಸ್ತಿ ನೀಡುತ್ತಾರೆ. ಆ ಹಿನ್ನೆಲೆಯಲ್ಲಿ ಜಿ.ಪಂ ಸ್ವಚ್ಛ ಭಾರತ ಮಿಷನ್‌ ಅಧಿಕಾರಿಗಳು ನಗರ ಜಿಲ್ಲಾ ವ್ಯಾಪ್ತಿಯ 96 ಗ್ರಾ.ಪಂ.ಗಳಿಗೆ ಭೇಟಿ ನೀಡಿ, ಓಟ್‌ ಮಾಡುವಂತೆ ಸಾರ್ವಜನಿಕರಲ್ಲಿ ಮನವಿ ಮಾಡುತ್ತಿದ್ದಾರೆ.

ಕೇಂದ್ರದ ಸಮೀಕ್ಷಾ ತಂಡ, ತಾಲೂಕು ಅಥವಾ ಗ್ರಾಮಗಳಿಗೆ ಭೇಟಿ ನೀಡಿದಾಗ ಸಮೀಕ್ಷಕರು ನಡೆಸುವ ಗುಂಪು ಸಭೆಯಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಹಾಗೂ ಸಮೀಕ್ಷಕರು ಕೇಳುವ ಪ್ರಶ್ನೆಗಳಿಗೆ ಜನತೆ ಸಮರ್ಪಕ ಮಾಹಿತಿ ನೀಡಲು ಅಗತ್ಯ ಕ್ರಮ ಕೈಗೊಳ್ಳುವಂತೆ ಆಯಾ ತಾಲೂಕು ಮತ್ತು ಗ್ರಾಮ ಮಟ್ಟದ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ನಗರ ಜಿ.ಪಂ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಆ್ಯಪ್‌ನಲ್ಲಿ ಉತ್ತರಿಸಬೇಕು: “ಸ್ವಚ್ಛ ಸರ್ವೇಕ್ಷಣ್‌ ಸ್ಪರ್ಧೆಯಡಿ ಸಾರ್ವಜನಿಕರು ತಮ್ಮ ಅಭಿಪ್ರಾಯ ದಾಖಲಿಸಲು ಅವಕಾಶವಿದೆ. ಗೂಗಲ್‌ ಪ್ಲೇ ಸ್ಟೋರ್‌ನಿಂದ “ಎಸ್‌ಎಸ್‌ಜಿ 2019′ ಆ್ಯಪ್‌ ಡೌನ್‌ಲೋಡ್‌ ಮಾಡಿಕೊಂಡು, ಅಲ್ಲಿ ಕೇಳಲಾಗುವ ನೈರ್ಮಲ್ಯ, ಶುಚಿತ್ವ ಮತ್ತಿತರ ವಿಷಯಗಳಿಗೆ ಸಂಬಂಧಿಸಿದ ಪ್ರಶ್ನೆಗಳಿಗೆ ಸಾರ್ವಜನಿಕರು ಉತ್ತರ ನೀಡಬೇಕಾಗುತ್ತದೆ. ಅಲ್ಲದೆ ಟೋಲ್‌ ಫ್ರೀ ಸಂಖ್ಯೆ 18005720112ಗೆ ಕರೆ ಮಾಡಿ ಗ್ರಾಮದ ಕುರಿತು ಕೇಳುವ ಪ್ರಶ್ನೆಗಳಿಗೆ ಉತ್ತರಿಸಬಹುದಾಗಿದೆ.

ಈಗಾಗಲೇ 2,380 ಮಂದಿ ಸ್ವಚ್ಛತೆಗೆ ಸಂಬಂಧಿಸಿದ ಪ್ರಶ್ನೆಗಳಿಗೆ ಉತ್ತರಿಸಿ ಓಟ್‌ ಮಾಡಿದ್ದಾರೆ. ಈ ತಿಂಗಳ ಅಂತ್ಯದವರೆಗೂ ಮತ ಹಾಕಲು ಅವಕಾಶವಿದೆ ಎಂದು ಉತ್ತರ ತಾಲೂಕು ಗಂಟಿಗಾನಹಳ್ಳಿಯ ಪಿಡಿಒ ಜಿತೇಂದ್ರ ತಿಳಿಸಿದ್ದಾರೆ. ಇದರೊಂದಿಗೆ ಪೋಷಕರ ಮೊಬೈಲ್‌ನಲ್ಲಿ ಆ್ಯಪ್‌ ಡೌನ್‌ಲೋಡ್‌ ಮಾಡಿಕೊಂಡು ಓಟ್‌ ಮಾಡುವಂತೆ ಶಾಲೆ, ಕಾಲೇಜು ವಿದ್ಯಾರ್ಥಿಗಳಲ್ಲಿ ಮನವಿ ಮಾಡಲಾಗಿದೆ.

Advertisement

* ದೇವೇಶ ಸೂರಗುಪ್ಪ

Advertisement

Udayavani is now on Telegram. Click here to join our channel and stay updated with the latest news.

Next