Advertisement

ಮನಸೂರೆಗೊಂಡ ʼಮೊಘಲ್‌ ದಾರಾಶಿಕೋ’

02:52 PM Mar 12, 2022 | Team Udayavani |

ಬಳ್ಳಾರಿ: ಮಾನವನ ನಾಗರಿಕತೆಯು ಆರಂಭದ ಕಾಲ, ಇತಿಹಾಸ ಪೂರ್ವ ಕಾಲ, ಕಾಲದಿಂದ ಕಾಲಕ್ಕೆ ಬದಲಾಗುತ್ತಾ ನಿರಂತರ ಹೊಸ ಹೊಸ ಪ್ರಯತ್ನಗಳನ್ನು ಮಾಡುತ್ತಾ ಬದಲಾಯಿಸುತ್ತ ಹೊಸ ದಿಕ್ಕು ಮತ್ತು ದೃಷ್ಟಿಕೋನಗಳನ್ನು ಕಟ್ಟಿಕೊಂಡಿದೆ. ಕಲೆಗಳಲ್ಲಿ ಪ್ರದರ್ಶನ ಕಲೆಗಳು ಇದಕ್ಕೆ ಹೊರತಾಗಿಲ್ಲ ಎಂದು ಕಲಬುರಗಿ ರಂಗಾಯಣದ ನಿರ್ದೇಶಕ ಪ್ರಭಾಕರ್‌ ಜೋಶಿ ಹೇಳಿದರು.

Advertisement

ನಗರದ ಸಾಂಸ್ಕೃತಿಕ ಸಮುಚ್ಛಯದ ಡಾ| ಮನ್ಸೂರ್‌ ಸುಭದ್ರಮ್ಮ ಬಯಲು ರಂಗಮಂದಿರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ರಂಗಾಯಣ ಕಲಬುರಗಿ ವತಿಯಿಂದ ಗುರುವಾರ ರಾತ್ರಿ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ಕಾಲೇಜು ರಂಗೋತ್ಸವದಲ್ಲಿ ಅವರು ಮಾತನಾಡಿದರು.

ವಿದ್ಯಾರ್ಥಿಗಳು ಓದುವುದು ಬರೆಯುವುದು ಒಂದೇ ಅಲ್ಲ ನಾಟಕ, ಸಂಗೀತದಲ್ಲಿ ಸಹ ಉತ್ತಮವಾದಂತಹ ಯಶಸ್ಸು ಕಾಣುತ್ತಾರೆ. ನಾಟಕದಲ್ಲಿ ಭಾಗವಹಿಸುವುದರಿಂದ ಸಮಾಜದಲ್ಲಿನ ಎಲ್ಲ ವಿಷಯಗಳನ್ನು ತಿಳಿಯಲು ಸಹಾಯವಾಗುತ್ತದೆ. ಇದಕ್ಕೆ ಈ ಕಾಲೇಜು ರಂಗೋತ್ಸವವೇ ಸಾಕ್ಷಿ. ರಂಗಕಲಾ ಕ್ಷೇತ್ರದಲ್ಲಿ ವಿದ್ಯಾರ್ಥಿಗಳು ಹೆಚ್ಚು ಭಾಗವಹಿಸಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಬೆಂಗಳೂರಿನ ಸಂಸ್ಕಾರ ಭಾರತಿ ಸಂಚಾಲಕ ಪ.ರಾ.ಕೃಷ್ಣಮೂರ್ತಿ, ಯಾವುದೇ ಕಲೆಯ ಕುರಿತು ಶಾಸ್ತ್ರಗ್ರಂಥ ಒಮ್ಮೆಗೆ ಕಟ್ಟಿಕೊಂಡು ನಿಯಮ ಸೂತ್ರಗಳನ್ನು ನಿರ್ದೇಶಿಸಲು ಸಾಧ್ಯವಿಲ್ಲ. ಒಂದು ಕಲೆ ಪರಂಪರೆ ಸಾಕಷ್ಟು ಕಾಲ ರೂಢಿಯಲ್ಲಿದ್ದು, ಅವುಗಳ ವಿಶಿಷ್ಟ ಲಕ್ಷಣಗಳು ಪುರಸ್ಕಾರಗೊಳ್ಳಬೇಕಾದ ಕಾಲದಲ್ಲಿ ಶಾಸ್ತ್ರ ಗ್ರಂಥಗಳು ರಚಿತವಾಗುತ್ತವೆ. ಹೀಗಾಗಿ ಕ್ರಿಸ್ತ ಶಕ ಆರಂಭ ಕಾಲದಿಂದ ಕಲೆಯ ಬಗ್ಗೆ ಜನರಲ್ಲಿ ಜಾಗೃತಿಯಾಗಿ ಭಾರತದಲ್ಲಿ ರಂಗಭೂಮಿ ಕಲೆ ಭದ್ರವಾದ ಸ್ಥಾನವನ್ನು ಪಡೆದುಕೊಂಡಿದೆ ಎಂದು ಹೇಳಿದರು.

ಸಂಗೀತ, ಸಾಹಿತ್ಯ ಮತ್ತು ನಾಟಕಗಳನ್ನು ತಮ್ಮ ಜೀವಮಾನದುದ್ದಕ್ಕೂ ಆರಾಧಿಸಿ, ತಾವು ಕಂಡುಂಡ ಆತ್ಮಸುಖದ ಆನಂದವನ್ನು ಲೋಕಕ್ಕೂ ಸಮರ್ಪಿಸಿರುವ ಮತ್ತು ಸಮರ್ಪಿಸುತ್ತಿರುವ ಕಲಾನಿಧಿಗಳು ಕರ್ನಾಟಕದಲ್ಲಿ ಅನೇಕರಿದ್ದಾರೆ. ವಿದ್ಯಾರ್ಥಿಗಳು ನಾಟಕದ ಕಡೆ ಒಲವು ನೀಡುತ್ತಿರುವುದು ಸಂತೋಷದ ವಿಷಯ ಮತ್ತು ನಾಟಕದಿಂದ ಜೀವನದಲ್ಲಿ ಉತ್ತಮ ಯಶಸ್ಸು ಕಾಣಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.

Advertisement

ರಂಗ ಸಮಾಜದ ಸದಸ್ಯ ಶಿವೇಶ್ವರಗೌಡ ಕಲ್ಲುಕಂಬ, ಕೂಡ್ಲಿಗಿಯ ಎನ್‌ಎಸ್‌ಡಿ ರಂಗಕರ್ಮಿ ಸಾಂಬಶಿವ ಬದಳವಾಯಿ ಹಾಗೂ ಕೊಪ್ಪಳ ಜಿಲ್ಲಾ ಸಂಚಾಲಕ ಲಕ್ಷ್ಮಣ ಪೀರಗಾರ ಅವರು ಸೇರಿದಂತೆ ನಾಟಕ ರಂಗದ ಕಲಾವಿದರು ಕಾರ್ಯಕ್ರಮದಲ್ಲಿ ಇದ್ದರು. ಸುಗಮ ಸಂಜೆಯ ಗೀತ ಗಾಯನವನ್ನು ಎಸ್‌.ಎಂ.ಹುಲುಗಪ್ಪ ಮತ್ತು ವೀರೇಶ್‌ ದಳವಾಯಿ ಸಂಗಡಿಗರು ನೆರವೇರಿಸಿಕೊಟ್ಟರು. ನಂತರ ಸಿರುಗುಪ್ಪ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಪ್ರಸ್ತುತಪಡಿಸಿದ ಆರ್‌.ಪಿ.ಮಂಜುನಾಥ ಅವರ ನಿರ್ದೇಶನದ, ಡಾ| ರಾಜಪ್ಪ ದಳವಾಯಿ ರಚನೆಯ “ಮೊಘಲ್‌ದಾರಾಶಿಕೋ’ ಎಂಬ ನಾಟಕ ನೆರೆದಿದ್ದ ಜನರ ಮನಸೂರೆಗೊಂಡಿತು.

 

ಯುವ ಸಮೂಹಕ್ಕೆ ರಂಗ ಶಿಕ್ಷಣ ಅಗತ್ಯ

ಮರಿಯಮ್ಮನಹಳ್ಳಿ: ಯುವ ಜನರಿಗೆ ರಂಗ ಶಿಕ್ಷಣ ಅಗತ್ಯವಿದೆ. ಕಾಲೇಜುಗಳಲ್ಲಿ ರಂಗಚಟುವಟಿಕೆಗಳು ನಿರಂತರವಾಗಿ ಜರುಗಬೇಕು. ಅದಕ್ಕೆ ಸರಕಾರದ ಆರ್ಥಿಕ ಸಹಕಾರ ಅಗತ್ಯ ಎಂದು ಹೊಸಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಡಾ|ಬಿ.ಜಿ. ಕನಕೇಶ್‌ ಮೂರ್ತಿ ಅಭಿಪ್ರಾಯಪಟ್ಟರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ರಂಗಾಯಣ ಕಲ್ಬುಗಿ ಅವರ ಸಂಯುಕ್ತಾಶ್ರಯದಲ್ಲಿ ಪಟ್ಟಣದ ದುರ್ಗಾದಾಸ ಬಯಲು ರಂಗಮಂದಿರದಲ್ಲಿ ಆರಂಭವಾದ ಜಿಲ್ಲಾ ಕಾಲೇಜು ರಂಗೋತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ರಂಗಾಯಣ ಈ ಬಾರಿ ರಾಜ್ಯಾದ್ಯಂತ ಕಾಲೇಜು ವಿದ್ಯಾರ್ಥಿಗಳನ್ನು ರಂಗಭೂಮಿಗೆ ತೊಡಗಿಸಿಕೊಳ್ಳುತ್ತಿರುವುದು ವಿಶೇಷ ಬೆಳವಣಿಗೆ. ಇದು ನಿರಂತರ ಸಾಗಲಿ ಎಂದರು. ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಮ.ಬ. ಸೋಮಣ್ಣ ಮಾತನಾಡಿ, ನಾಟಕ ಮಾತ್ರ ಏಕಕಾಲಕ್ಕೆ ಎಲ್ಲರನ್ನೂ ತೃಪ್ತಿಪಡಿಸುವ ಮಾಧ್ಯಮ. ನಾಟಕಗಳಿಂದ ಮಾತ್ರ ಸಾಮಾಜಿಕ ವಿಕಾಸ ಕಾಣಲು ಸಾಧ್ಯ. ಶಿಕ್ಷಣ ಪರಿಣಾಮಕಾರಿ ಆಗಬೇಕಾದರೆ ರಂಗಕಲೆ ಅಗತ್ಯವಿದೆ. ಶಿಕ್ಷಣ ಗುಣಮಟ್ಟದಿಂದ ಮಕ್ಕಳ ಮೇಲೆ ಪರಿಣಾಮ ಬೀರುತ್ತದೆ. ಕಾಲೇಜುಗಳಲ್ಲಿಯೂ ಕಡ್ಡಾಯವಾಗಿ ರಂಗಶಿಕ್ಷಣ ನೀಡಬೇಕು. ರಂಗಶಿಕ್ಷಕರ ನೇಮಕಾತಿ ಮಾಡಬೇಕು ಎಂದು ಆಗ್ರಹಿಸಿದರು.

ಸಮಾಜ ಸೇವಕ ಕುರಿಶಿವಮೂರ್ತಿ ಅಧ್ಯಕ್ಷತೆ ವಹಿಸಿದ್ದರು. ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಾ|ಬಿ.ಅಂಬಣ್ಣ, ಲಲಿತಕಲಾರಂಗದ ಅಧ್ಯಕ್ಷ ಎಚ್‌.ಮಂಜುನಾಥ, ಪಪಂ ಸದಸ್ಯರಾದ ಕೆ.ಮಂಜುನಾಥ, ಸುರೇಶ್‌ ಮರಡಿ, ಮುಖಂಡ ಬಿ.ಆನಂದ ಮತ್ತಿತರರಿದ್ದರು.

ಏಕಲವ್ಯ ನಾಟಕ: ರಂಗಾಯಣ ಕಲಬುರ್ಗಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಆರಂಭವಾದ ರಂಗೋತ್ಸವದ ಮೊದಲ ದಿನ ಹೊಸಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳಿಂದ ರಾಮಣ್ಣ ಲೋಕೇಶ್‌ ವಿರಚಿತ ಸರದಾರ ಬಾರಿಗಿಡದ ನಿರ್ದೇಶನದ ಏಕಲವ್ಯ ನಾಟಕ ಪ್ರದರ್ಶನಗೊಂಡಿತು.

 

Advertisement

Udayavani is now on Telegram. Click here to join our channel and stay updated with the latest news.

Next