Advertisement

ಪೋಷಣ್‌ ಅಭಿಯಾನದಲ್ಲಿ ಜಿಲ್ಲೆಗೆ ಮೊದಲ ಸ್ಥಾನ

09:31 PM Sep 24, 2019 | Lakshmi GovindaRaju |

ಚಿಕ್ಕಬಳ್ಳಾಪುರ: ಅಪೌಷ್ಟಿಕತೆ ಹಾಗೂ ರಕ್ತಹೀನತೆ ತಡೆಯುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ಮಹತ್ವಕಾಂಕ್ಷಿ ಪೋಷಣ್‌ ಅಭಿಯಾನ ಕಾರ್ಯಕ್ರಮದ ಅನುಷ್ಠಾನದಲ್ಲಿ ಜಿಲ್ಲೆ ಇಡೀ ರಾಜ್ಯಕ್ಕೆ ಪ್ರಥಮ ಸ್ಥಾನದಲ್ಲಿದೆ ಎಂದು ಜಿಪಂ ಸಿಇಒ ಬಿ. ಫೌಜಿಯಾ ತರುನ್ನುಮ್‌ ತಿಳಿಸಿದರು. ಜಿಲ್ಲಾಡಳಿತ, ಜಿಪಂ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಮತ್ತು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ಹಮ್ಮಿಕೊಂಡಿದ್ದ ಪೋಷಣ್‌ ಅಭಿಯಾನ ಕುರಿತು ಬೈಕ್‌ ರ್ಯಾಲಿಗೆ ನಗರದ ಜೂನಿಯರ್‌ ಕಾಲೇಜು ಆವರಣದಲ್ಲಿ ಚಾಲನೆ ನೀಡಿ ಮಾತನಾಡಿದರು.

Advertisement

ಪೋಷಣ್‌ ಅಭಿಯಾನ ಯೋಜನೆ ಕೇಂದ್ರ ಸರ್ಕಾರದ ಪರಿಷ್ಕೃತ ಯೋಜನೆಯಾಗಿದೆ. ಅಪೌಷ್ಟಿಕತೆ ಮಟ್ಟವನ್ನು ತಡೆಗಟ್ಟುವ ಉದ್ದೇಶದಿಂದ ಸಾರ್ವಜನಿಕರಲ್ಲಿ ಮತ್ತು ಸಮುದಾಯದಲ್ಲಿ ಅರಿವು ಮೂಡಿಸುವುದೇ ಈ ಯೋಜನೆಯ ಉದ್ದೇಶವಾಗಿದೆ. ಜನಿಸಿದ ಮಗುನಿಂದ 6 ವರ್ಷಗಳ ಮಕ್ಕಳಲ್ಲಿ ಉಂಟಾಗುವ ಕುಂಠಿತ ಬೆಳವಣಿಗೆ ತಡೆಗಟ್ಟುವುದು ಹಾಗೂ ರಕ್ತಹೀನತೆ ಕಡಿಮೆಗೊಳಿಸುವುದು. 15 ರಿಂದ 49 ವರ್ಷದವರೆಗಿನ ಮಹಿಳೆಯರಲ್ಲಿ ಉಂಟಾಗುವ ರಕ್ತ ಹೀನತೆ ಕಡಿಮೆ ಮಾಡುವುದು. ಕಡಿಮೆ ತೂಕದ ಮಕ್ಕಳ ಜನನ ಪ್ರಮಾಣ ಕಡಿಮೆ ಮಾಡಿ ಸದೃಢತೆಯಿಂದ ಮಕ್ಕಳು ಜನನವಾಗಿ ಆರೋಗ್ಯಕರ ಸಮಾಜ ನಿರ್ಮಾಣ ಮಾಡಬೇಕೆಂಬುವುದು ಪೋಷಣ್‌ ಅಭಿಯಾನದ ಉದ್ದೇಶವಾಗಿದೆ ಎಂದರು.

ಬೈಕ್‌ ರ್ಯಾಲಿ: ನಗರದ ಜೂನಿಯರ್‌ ಕಾಲೇಜು ಆವರಣದಲ್ಲಿ ಮತದಾನದ ಅರಿವು ಹಾಗೂ ಪೋಷಣ್‌ ಅಭಿಯಾನದ ಬಗ್ಗೆ ಸಂದೇಶವುಳ್ಳ ಬಿತ್ತಿಪತ್ರಗಳನ್ನು ಪ್ರದರ್ಶಿಸುವ ಮೂಲಕ ಬೈಕ್‌ ರ್ಯಾಲಿಯನ್ನು ನಗರದ ಅಂಬೇಡ್ಕರ್‌ ಭವನದ ವರೆಗೆ ಮುಂದುವರಿಸಲಾಯಿತು. ಖುದ್ದು ಸಿಇಒ ಬಿ.ಪೌಜಿಯಾ ತರುನ್ನುಮ್‌ ದ್ವಿಚಕ್ರವಾಹನವನ್ನು ಚಾಲನೆ ಮಾಡಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಲಕ್ಷ್ಮೀದೇವಮ್ಮ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಸ್‌.ಜಿ.ನಾಗೇಶ್‌, ತಾಪಂ ಇಒ ಹರ್ಷಷರ್ಧನ್‌ ಸೇರಿದಂತೆ ತಾಲೂಕು ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

ಮತದಾರರಪಟ್ಟಿ ಪರಿಷ್ಕರಣೆಗೆ ಕೈಜೋಡಿಸಿ…: ಮತದಾರರ ಪಟ್ಟಿಯಿಂದ ಯಾವೊಬ್ಬ ಮತದಾರನು ಹೊರಗುಳಿಯಬಾರದು ಎಂಬ ಉದ್ದೇಶದಿಂದ ಸಮಗ್ರ ಮತದಾನ ಪಟ್ಟಿಯ ವಿಶೇಷ ಪರಿಶೀಲನೆ ಕಾರ್ಯಕ್ರಮ ಚುನಾವಣೆ ಆಯೋಗದ ನಿರ್ದೇಶನದಂತೆ ಹಮ್ಮಿಕೊಂಡಿದ್ದು, ಜಿಲ್ಲೆಯ ಯುವ ಮತದಾರರು ಪರಿಷ್ಕರಣೆಯಲ್ಲಿ ಭಾಗವಹಿಸಬೇಕು. ಮತದಾರರ ಪಟ್ಟಿಯಲ್ಲಿ ಹೆಸರು, ವಿಳಾಸ, ಭಾವಚಿತ್ರ, ವಯಸ್ಸು ಮುಂತಾದ ಹಲವಾರು ತಪ್ಪುಗಳನ್ನು ತಿದ್ದುಪಡಿ ಮಾಡಿ, ಶೇ.100ರಷ್ಟು ಮತದಾರರ ವಿವರಗಳನ್ನು ಸರಿಪಡಿಸುವುದಕ್ಕೆ ಸಮಗ್ರ ಮತದಾರರಪಟ್ಟಿ ವಿಶೇಷ ಪರಿಷ್ಕರಣೆ ನಡೆಸಲಾಗುತ್ತಿದೆ ಎಂದು ಜಿಪಂ ಸಿಇಒ ಬಿ.ಫೌಜಿಯಾ ತರುನ್ನುಮ್‌ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next