Advertisement

ಜಿಲ್ಲಾಸ್ಪತ್ರೆ ಸಮಸ್ಯೆ ವಾರದಲ್ಲಿ ಇತ್ಯರ್ಥ: ಆಚಾರ್‌

10:05 PM Oct 23, 2021 | Team Udayavani |

ಕೊಪ್ಪಳ: ಜಿಲ್ಲಾಸ್ಪತ್ರೆಯಲ್ಲಿ ಆಂಬ್ಯುಲೆನ್ಸ್‌ ದುರಸ್ತಿ ಸೇರಿ ಹಲವು ಸಮಸ್ಯೆಗಳ ಬಗ್ಗೆ ನಿರ್ಲಕ್ಷ ವಹಿಸಿರುವ ಆಸ್ಪತ್ರೆ ಶಸ್ತ್ರ ಚಿಕಿತ್ಸಕ ಹಾಗೂ ಕಿಮ್ಸ್‌ ನಿರ್ದೇಶಕರ ವಿರುದ್ಧ ಕಠಿಣ  ಕ್ರಮ ಕೈಗೊಳ್ಳಬೇಕಾಗುತ್ತದೆ. ಬಡವರಿಗೆ ಕೊಡಬೇಕಾದ ಸೇವೆಯಲ್ಲಿ ವ್ಯತ್ಯಯವಾದರೆ ಮುಲಾಜಿಲ್ಲದೇ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಹಾಲಪ್ಪ ಆಚಾರ್‌ ಎಚ್ಚರಿಕೆ ನೀಡಿದರು.

Advertisement

ಕೋವಿಡ್‌-19 ಲಸಿಕಾ ಅಭಿಯಾನ ಕುರಿತು ಹಮ್ಮಿಕೊಂಡ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಜಿಲ್ಲಾಸ್ಪತ್ರೆಯಲ್ಲಿ ಆಂಬ್ಯುಲೆನ್ಸ್‌ ಕೆಟ್ಟು ನಿಂತು 15 ದಿನಗಳಾಗಿರುವುದು ಗಮನಕ್ಕೆ ಬಂದಿದೆ. ಅವುಗಳನ್ನು ತ್ವರಿತ ಗತಿಯಲ್ಲಿ ದುರಸ್ತಿ ಮಾಡುವ ಹೊಣೆ ಆಸ್ಪತ್ರೆ ಮುಖ್ಯಸ್ಥರದ್ದು, ವಿನಾಕಾರಣ ನಿರ್ಲಕ್ಷ ವಹಿಸಿದರೆ ಹೇಗೆ? ಆಸ್ಪತ್ರೆಯಲ್ಲಿ ಯಾವ ವೈದ್ಯರು ಕಾರ್ಯ ನಿರ್ವಹಿಸುತ್ತಿದ್ದಾರೆ? ಆಂಬ್ಯುಲೆನ್ಸ್‌ ಸ್ಥಿತಿಗತಿ ಏನಿದೆ? ಯಾವೆಲ್ಲ ಹೊರಗೆ ತೆರಳಿವೆ? ಆಸ್ಪತ್ರೆಯಲ್ಲಿ ಯಾವು ಇವೆ? ಎನ್ನುವ ಡ್ಯಾಶ್‌ಬೋರ್ಡ್‌ ಅಳವಡಿಸಿ. ರೋಗಿಗಳಿಗೆ ಹೊರಗೆ ಔಷಧಿ  ಬರೆದುಕೊಟ್ಟವರ ಮೇಲೂ ಕಠಿಣ ಕ್ರಮ ಕೈಗೊಳ್ಳಲಾಗುವುದು. ಬಡವರಿಗೆ ವೈದ್ಯರು ಸೇವೆ ಕೊಡಬೇಕು. ನಿರ್ಲಕ್ಷ ವಹಿಸಿದರೆ ನಾನು ಸಹಿಸಲ್ಲ ಎಂದರು.

ವಾರದೊಳಗೆ ಆಂಬ್ಯುಲೆನ್ಸ್‌ ದುರಸ್ತಿ ಸೇರಿ ಆಸ್ಪತ್ರೆಯಲ್ಲಿನ ಹಲವು ಸಮಸ್ಯೆಗಳು ಬಗೆಹರಿಯಬೇಕು. ಇದು ಗಂಭೀರ ವಿಷಯ. ಎಲ್ಲವನ್ನೂ ಮಾಧ್ಯಮದ ಮುಂದೆ ಹೇಳಲು ಆಗುವುದಿಲ್ಲ. ಆದರೆ ಅಂತಹವರಿಗೆ ವಿರುದ್ಧ ಆಂತರಿಕವಾಗಿ ಏನು ಕ್ರಮ ಕೈಗೊಳ್ಳಬೇಕು ಎನ್ನುವುದು ನಮಗೆ ಗೊತ್ತಿದೆ ಎಂದರು. ಅ. 20ರವರೆಗೆ ದೇಶದಲ್ಲಿ ಬರೋಬ್ಬರಿ 100 ಕೋಟಿ ಡೋಸ್‌ ಕೋವಿಡ್‌ ಲಸಿಕೆ ನೀಡಿದ್ದು, ನಮ್ಮ ದೇಶದ ಐತಿಹಾಸಿಕ
ಸಾಧನೆಯಾಗಿದೆ. ದೇಶದ ಪ್ರಧಾನಿ ನರೇಂದ್ರ ಮೋದಿಯವರ ದೂರದೃಷ್ಟಿಯ ಫಲವಾಗಿ ಇಂದು ನೂರುಕೋಟಿ ಡೋಸ್‌ ಕೋವಿಡ್‌ ಲಸಿಕೆ ನೀಡಿದ್ದಾರೆ. ಕೋವಿಡ್‌-19 ಲಸಿಕಾ ಕಾರ್ಯಕ್ರಮದ ಮೊದಲ ಹಂತವು 2021ರ ಜ. 16ರಂದು ಹಾಗೂ 2ನೇ ಹಂತ ಏಪ್ರಿಲ್‌ನಲ್ಲಿ ಪ್ರಾರಂಭವಾಗಿದ್ದು, ದೇಶದಲ್ಲಿ ಇಲ್ಲಿಯವರೆಗೆ ಮೊದಲ ಹಂತದಲ್ಲಿ 71,08,72,214 ಮತ್ತು 2ನೇ ಹಂತದಲ್ಲಿ 29,51,97,664 ಒಟ್ಟು 100,60,69,878 ಫಲಾನುಭವಿಗಳಿಗೆ ಲಸಿಕೆ ನೀಡಲಾಗಿದೆ.

ರಾಜ್ಯವು 6,21,62,503 ಫಲಾನುಭವಿಗಳಿಗೆ ಲಸಿಕೆ ನೀಡುವ ಮೂಲಕ 7ನೇ ಸ್ಥಾನದಲ್ಲಿದೆ ಎಂದರು. ರಾಜ್ಯದಿಂದ ಜಿಲ್ಲೆಗೆ 18 ವರ್ಷ ಮೇಲ್ಪಟ್ಟ 9,84,000 ಫಲಾನುಭವಿಗಳ ಲಸಿಕಾ ಗುರಿ ಹೊಂದಲಾಗಿದೆ. ಇಲ್ಲಿವರೆಗೂ ಜಿಲ್ಲೆಯಲ್ಲಿ ಮೊದಲ ಹಂತದಲ್ಲಿ 7,88,205 ಲಸಿಕೆ ನೀಡುವ ಮೂಲಕ ಶೇ. 80 ಹಾಗೂ 2ನೇ ಹಂತದಲ್ಲಿ 3,58,494 ಲಸಿಕೆ ನೀಡುವ ಮೂಲಕ ಶೇ. 47ರಷ್ಟು ಗುರಿ ಸಾಧಿಸುವ ಮೂಲಕ ಒಟ್ಟು 11,46,699 ಫಲಾನುಭವಿ ಲಸಿಕೆ ಪಡೆದಿದ್ದಾರೆ ಎಂದರು.

ಶೇ. 75ಕ್ಕಿಂತ ಕಡಿಮೆ ಪ್ರಗತಿ ಸಾಧಿಸಿದ ಗ್ರಾಮಗಳಿಗೆ ಜಿಲ್ಲಾ ಹಾಗೂ ತಾಲೂಕು ಮಟ್ಟದ ಎಲ್ಲ ಇಲಾಖೆಗಳ ಅಧಿಕಾರಿಗಳನ್ನು ಹೋಬಳಿ ಮತ್ತು ಗ್ರಾಮವಾರು ನೋಡಲ್‌ ಅಧಿ ಕಾರಿಗಳನ್ನು ನೇಮಿಸಿ ಗ್ರಾಮಗಳನ್ನು ಹಂಚಿಕೆ ಮಾಡಿದೆ. ಹಾಗೆಯೇ ಜಿಲ್ಲಾದ್ಯಂತ  ಕೋವಿಡ್‌-19 ಲಸಿಕಾ ಮಹಾಮೇಳ ಹಮ್ಮಿಕೊಂಡಿದ್ದು, 370 ಲಸಿಕಾ ಕೇಂದ್ರಗಳು ಹಾಗೂ 30 ಮೊಬೈಲ್‌ ತಂಡಗಳ ಮೂಲಕ ರಾಜ್ಯ ಸರ್ಕಾರದಿಂದ ಫಲಾನುಭವಿಗಳ ಲಸಿಕಾಕರಣದ ಗುರಿ ನೀಡಲಾಗಿದೆ ಎಂದರು. ಜಿಲ್ಲೆಯಲ್ಲಿ ಆಕ್ಸಿಜನ್‌ ಪ್ಲಾಂಟ್‌, ವೆಂಟಿಲೇಟರ್‌, ಬೆಡ್‌ ವ್ಯವಸ್ಥೆ ಮಾಡಲಾಗಿದೆ. ನನ್ನ ಗಮನಕ್ಕೆ ಬಂದಿರುವ ಜಿಲ್ಲಾಸ್ಪತ್ರೆಯಲ್ಲಿನ ಚಿಕಿತ್ಸಾ ಸೌಲಭ್ಯ, ಆಂಬ್ಯುಲೆನ್ಸ್‌ ಮತ್ತಿತರ ಸಣ್ಣಪುಟ್ಟ ಕೊರತೆಗಳನ್ನು ಸರಿಪಡಿಸಿಕೊಳ್ಳುವಂತೆ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿ,  ಜಿಲ್ಲಾಸ್ಪತ್ರೆಯ ವೈದ್ಯಾಧಿಕಾರಿಗಳು ಮತ್ತು ಸಿಬ್ಬಂದಿಗಳ ಕೆಲಸದ ಸಮಯದ ವಿವರವುಳ್ಳ
ಪಟ್ಟಿಯನ್ನು ಆಸ್ಪತ್ರೆ ಸೂಚನಾ ಫಲಕದಲ್ಲಿ ಹಾಕಬೇಕೆಂದು ಸಂಬಂಧಿಸಿದ ಅಧಿಕಾರಿ ಗಳಿಗೆ ಸೂಚಿಸಿದ್ದೇನೆ. ಕಿಮ್ಸ್‌ನ ಸಿಬ್ಬಂದಿಗೆ ಉತ್ತಮವಾಗಿ ಕಾರ್ಯನಿರ್ವಹಿಸಲು ಸೂಚಿಸಲಾಗಿದೆ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next