ಮಂಗಳೂರು: ಗ್ರಾಮ ಪಂಚಾಯತ್ ಸದಸ್ಯರು ತಮ್ಮ ಕ್ಷೇತ್ರದ ಅಭಿವೃದ್ಧಿ ಚಟುವಟಿಕೆ ಜತೆಗೆ ಸಮಾಜದ ಇತರ ಜ್ವಲಂತ ಸಮಸ್ಯೆಗಳ ನಿವಾರಣೆಯ ಕಡೆಗೂ ಗಮನ ಹರಿಸಬೇಕೆಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ| ರಾಜೇಂದ್ರ ಕೆ.ವಿ. ಸಲಹೆ ನೀಡಿದ್ದಾರೆ.
“ಜಾಗೃತ ನಾರಿ- ಪ್ರಗತಿಗೆ ದಾರಿ’ ಎಂಬ ಧ್ಯೇಯ ವಾಕ್ಯದಡಿ ಜನ ಶಿಕ್ಷಣ ಟ್ರಸ್ಟ್, ದಕ್ಷಿಣ ಕನ್ನಡ ಜಿ.ಪಂ., ಹಂಗರ್ ಪ್ರಾಜೆಕ್ಟ್ ಮತ್ತು ಎಪಿಪಿಐ ಸಹಯೋಗದಲ್ಲಿ ಸೋಮವಾರ ಉರ್ವಸ್ಟೋರ್‌ನಲ್ಲಿರುವ ದ.ಕ. ಜಿ.ಪಂ.ನ ನೇತ್ರಾವತಿ ಸಭಾಂಗಣದಲ್ಲಿ ನಡೆದ ಬಂಟ್ವಾಳ, ಉಳ್ಳಾಲ, ಪುತ್ತೂರು, ಕಡಬ ತಾಲೂಕುಗಳ ಗ್ರಾ.ಪಂ. ಚುನಾಯಿತ ಮಹಿಳಾ ಸದಸ್ಯರ ಜಿಲ್ಲಾ ಮಟ್ಟದ “ಸುಗ್ರಾಮ ಸಮಾವೇಶ’ವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಶಾಲೆಯಿಂದ ಹೊರಗುಳಿದ ಮಕ್ಕಳು, ವಿಶೇಷವಾಗಿ ಪ.ಜಾತಿ, ಪ. ಪಂಗಡದವರು ಇದ್ದಾರೆ. ಉತ್ತರ ಕರ್ನಾಟಕ ಮತ್ತು ಉತ್ತರ ಭಾರತದಿಂದ ಆಗಮಿಸಿದ ವಲಸೆ ಕಾರ್ಮಿಕರ ಗಣನೀಯ ಸಂಖ್ಯೆಯ ಮಕ್ಕಳು ಶಾಲೆಯಿಂದ ಹೊರಗೆ ಉಳಿದಿದ್ದಾರೆ. ಬಾಲ್ಯ ವಿವಾಹ ಪ್ರಕರಣಗಳು ಕೆಲವು ಕಡೆ ವರದಿಯಾಗುತ್ತವೆ. ಮುಟ್ಟಿಗೆ ಸಂಬಂಧಿಸಿದ ಸಮಸ್ಯೆಯಿಂದ ಶೇ. 50 ಅಧಿಕ ಮಹಿಳೆಯರು ಬಳಲುತ್ತಿದ್ದಾರೆ. ಅಧಿಕ ರಕ್ತಸ್ರಾವದಿಂದ ಅನೇಕ ಹೆಣ್ಮಕ್ಕಳು ತೊಂದರೆಗೆ ಸಿಲುಕಿರುವುದನ್ನು ವೈದ್ಯನಾಗಿ ನಾನು ಅರ್ಥ ಮಾಡಿಕೊಳ್ಳಬಲ್ಲೆ. ಮುಟ್ಟಿನಂತಹ ಸಮಸ್ಯೆಗಳ ಬಗ್ಗೆ ಕೂಡ ಮಹಿಳೆಯರು ಮುಜುಗರವಿಲ್ಲದೆ ಮಾತನಾಡುವ ಪರಿಸ್ಥಿತಿ ನಿರ್ಮಾಣ ವಾಗಬೇಕು ಎಂದು ಡಿ.ಸಿ. ಹೇಳಿದರು.
ಪಂ.ರಾಜ್ ಕಾಯ್ದೆಯಡಿ ಮಹಿಳೆ ಯರಿಗೆ ಹೆಚ್ಚಿನ ಜವಾಬ್ದಾರಿಗಳಿವೆ. ಕುಟುಂಬ ನಡೆಸುವುದರ ಜತೆಗೆ ಸಮಾಜ ಸ್ವಾಸ್ಥ್ಯ ಮತ್ತು ಅಭಿವೃದ್ಧಿಯಲ್ಲಿ ಏಕಕಾಲ ದಲ್ಲಿ ಶ್ರಮಿಸುವ ಮಹಿಳೆಯರಿಗೆ ದೇವರ ಸ್ಥಾನವಿದೆ. ಜನಶಿಕ್ಷಣ ಟ್ರಸ್ಟ್ ಸಮಾಜದ ಜ್ವಲಂತ ಸಮಸ್ಯೆಗಳ ಬಗ್ಗೆ ಜನ ಜಾಗೃತಿ ಮೂಡಿಸುವಲ್ಲಿ ನಿರಂತರವಾಗಿ ತೊಡಗಿಸಿ ಕೊಂಡಿರುವುದು ಶ್ಲಾಘನೀಯ ಎಂದರು.
ಗ್ರಾ.ಪಂ. ಸದಸ್ಯರ ಗೌರವಧನ ದುಪ್ಪಟ್ಟು ಮಾಡುವ ಬಗ್ಗೆ ಮತ್ತು ಅಧ್ಯಕ್ಷ, ಉಪಾಧ್ಯಕ್ಷರ ಗೌರವಧನ ಹೆಚ್ಚಳದ ಕುರಿತು ವಿಧಾನಸಭೆಯಲ್ಲಿ ಪ್ರಸ್ತಾವಿಸುವುದಾಗಿ ಮುಖ್ಯ ಅತಿಥಿ ಯು.ಟಿ. ಖಾದರ್ ಹೇಳಿದರು.
ಗ್ರಾ.ಪಂ. ಮಟ್ಟದಲ್ಲಿ ಶೇ. 50 ಮಹಿಳಾ ಮೀಸಲಾತಿ ಕಲ್ಪಿಸಿದ್ದರಿಂದ ಇಡೀ ವ್ಯವಸ್ಥೆಯಲ್ಲಿ ಆಮೂಲಾಗ್ರ ಬದಲಾವಣೆಯಾಗಿದೆ ಎಂದು ಜಿ.ಪಂ. ಸಿಇಒ ಡಾ| ಕುಮಾರ್ ಅಭಿನಂದಿಸಿದರು.
ಶೀನ ಶೆಟ್ಟಿ ಮತ್ತು ಕೃಷ್ಣ ಮೂಲ್ಯ ಸಂವಾದ ನಡೆಸಿಕೊಟ್ಟರು. ಚೇತನ್ ಕಾರ್ಯಕ್ರಮ ನಿರ್ವಹಿಸಿದರು. ಪುತ್ತೂರು ಮತ್ತು ಕಡಬ ತಾಲೂಕು ಸುಗ್ರಾಮ ಸಂಘದ ಅಧ್ಯಕ್ಷೆ ಮಾಲತಿ ಎನ್.ಕೆ. ಹಾಗೂ ಬಂಟ್ವಾಳ ಮತ್ತು ಉಳ್ಳಾಲ ತಾಲೂಕು ಸುಗ್ರಾಮ ಸಂಘದ ಅಧ್ಯಕ್ಷೆ ಶಕೀಲಾ, ಸೋಮಶೇಖರ್ ವೇದಿಕೆಯಲ್ಲಿದ್ದರು.
ಲಿಂಗ ಸಮಾನತೆ, ಸಾಮಾಜಿಕ ನ್ಯಾಯ, ಗ್ರಾಮ ಸಭೆಗಳ ಬಲವರ್ಧನೆ, ಸ್ವಚ್ಛ, ಕಸಮುಕ್ತ ಗ್ರಾಮ, ಸುಸ್ಥಿರ ಅಭಿವೃದ್ಧಿ ಬಗ್ಗೆ ಮಹಿಳಾ ಸದಸ್ಯರು ಸಂಕಲ್ಪ ಕೈಗೊಂಡರು.