Advertisement

Electrical failure: ವರದಿ ನೀಡುವಂತೆ ಮೆಸ್ಕಾಂ ಎಂ.ಡಿ.ಗೆ ಜಿಲ್ಲಾಧಿಕಾರಿ ಸೂಚನೆ

12:54 AM Jun 30, 2024 | Team Udayavani |

ಮಂಗಳೂರು: ಜಿಲ್ಲೆಯಲ್ಲಿ ವಿದ್ಯುತ್‌ ಅವಘಡದಿಂದ ಉಂಟಾಗಿರುವ ಮೂರು ಪ್ರಾಣ ಹಾನಿಗಳಿಗೆ ಸಂಬಂಧಿಸಿ ಪರಿಶೀಲಿಸಿ ವರದಿ ನೀಡುವಂತೆ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌ ಅವರು ಮೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರಿಗೆ ಸೂಚನೆ ನೀಡಿದ್ದಾರೆ.

Advertisement

ಮೆಸ್ಕಾಂ ಹಿರಿಯ ಅಧಿಕಾರಿಗಳು ಮತ್ತು ಸಿಬಂದಿ ಜತೆಗೆ ಜಿಲ್ಲಾಧಿಕಾರಿಯವರು ವಿಶೇಷ ಸಭೆ ನಡೆಸಿದ ಈ ಸೂಚನೆ ನೀಡಿದ್ದಾರೆ.

ಎರಡು ದಿನಗಳ ಒಳಗಾಗಿ ನಗರ ವ್ಯಾಪ್ತಿಯ ಎಲ್ಲ 1,600 ಮೀಟರ್‌ ಬಾಕ್ಸ್‌ಗಳಲ್ಲಿ ಟ್ರಿಪ್ಪರ್‌ ಬಾಕ್ಸ್‌ಗಳನ್ನು ಅಳವಡಿಸಬೇಕು. ಮರಗಳ ರೆಂಬೆ – ಕೊಂಬೆಗಳಿಗೆ ತಾಗಿಕೊಂಡಂತೆ ಹಾದು ಹೋಗಿರುವ ವಿದ್ಯುತ್‌ ತಂತಿಗಳು, ಕಂಬಗಳು ಇರುವ ಪ್ರದೇಶಗಳನ್ನು ಎರಡು ದಿನದಲ್ಲಿ ಗುರುತಿಸಿ, ಅರಣ್ಯ ಇಲಾಖೆಯ ಸಹಯೋಗದಲ್ಲಿ ತೆರವುಗೊಳಿಸಬೇಕು. ಈ ಬಗ್ಗೆ ಅನುಪಾಲನಾ ವರದಿ ಸಲ್ಲಿಸಬೇಕು ಎಂದು ಸೂಚಿಸಿದರು.

ಲೀಕೇಜ್‌ ಟೆಸ್ಟ್‌
ಮೆಸ್ಕಾಂ ಮತ್ತು ಮನಪಾ ಅಧಿಕಾರಿಗಳು ಜಂಟಿಯಾಗಿ ಬೀದಿದೀಪ ಕಂಬಗಳಲ್ಲಿ ವಿದ್ಯುತ್‌ ಲೀಕೇಜ್‌ ಟೆಸ್ಟ್‌ಗಳನ್ನು ನಡೆಸಬೇಕು. ಮುಂದಿನ ದಿನಗಳಲ್ಲಿ ವಿದ್ಯುತ್‌ ಅವಘಡಗಳು ಸಂಭವಿಸದಂತೆ ಎಚ್ಚರಿಕೆ ವಹಿಸಬೇಕು ಎಂದು ಜಿಲ್ಲಾಧಿಕಾರಿಯವರು ಸೂಚಿಸಿದರು.

ಎಲ್ಲ ಇನ್ಸಿಡೆಂಟ್‌ ಕಮಾಂಡರ್‌ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ತಮ್ಮ ದೂರವಾಣಿಯನ್ನು 24*7 ಚಾಲ್ತಿಯಲ್ಲಿ ಇಡಬೇಕು. ವಿಕೋಪಗಳು ಉಂಟಾದ ಸಂದರ್ಭದಲ್ಲಿ ಸಾರ್ವಜನಿಕರ ಕರೆಗಳನ್ನು ಸ್ವೀಕರಿಸಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.

Advertisement

ಹೆದ್ದಾರಿಯಲ್ಲಿ ಸುಗಮ ಸಂಚಾರಕ್ಕೆ ವ್ಯವಸ್ಥೆ
ರಾಷ್ಟ್ರೀಯ ಹೆದ್ದಾರಿಗಳಲ್ಲಿ ಮಳೆಗಾಲದ ಸಂದರ್ಭದಲ್ಲಿ ಪ್ರಯಾಣಿಕರ ಸಂಚಾರಕ್ಕೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಬೇಕು. ಹೆದ್ದಾರಿಯಿಂದ ಮಳೆ ನೀರು ಹೋಗಲು ಚರಂಡಿ ವ್ಯವಸ್ಥೆಯನ್ನು ತುರ್ತಾಗಿ ಕೈಗೊಳ್ಳಬೇಕು ಎಂದು ಹೆದ್ದಾರಿ ಇಲಾಖೆಯವರಿಗೆ ಸೂಚಿಸಿದರು. ದೂರವಾಣಿ ಸಂಪರ್ಕಕ್ಕೆ ಸಂಬಂಧಿಸಿ ಯಾವುದೇ ರೀತಿಯ ಅಡಚಣೆ ಉಂಟಾಗದಂತೆ ದೂರಸಂಪರ್ಕ ಇಲಾಖೆ ಹಾಗೂ ಕಂಪೆನಿಗಳಿಗೂ ಜಿಲ್ಲಾಧಿಕಾರಿಯವರು ಸೂಕ್ತ ನಿರ್ದೇಶನ ನೀಡಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next