Advertisement
ಬೆಳಗಾವಿ: ಗ್ರಾಮಗಳಿಗೆ ಎಲ್ಲ ರೀತಿಯ ಮೂಲಭೂತ ಸೌಲಭ್ಯಗಳು ಸಿಗಬೇಕು. ಮನೆ ಬಾಗಿಲಲ್ಲೇ ಸಾಧ್ಯವಾದಷ್ಟು ಪರಿಹಾರ ದೊರೆಯಬೇಕು. ಗ್ರಾಮಗಳ ಸರ್ವತೋಮುಖ ಅಭಿವೃದ್ಧಿಗೆ ನೆರವಾಗಬೇಕು ಎಂಬ ಉದ್ದೇಶದೊಂದಿಗೆ ಐದು ತಿಂಗಳ ಹಿಂದೆ ಸರಕಾರ ಆರಂಭಿಸಿದ್ದ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಜನರಲ್ಲಿ ಹೊಸ ವಿಶ್ವಾಸ ಮೂಡಿಸುವ ಮೊದಲೇ ಬಾಗಿಲು ಹಾಕಿಕೊಂಡಿದೆ.
Related Articles
Advertisement
ಮೊದಲು ಉಪಚುನಾವಣೆಯ ಕಾರಣದಿಂದ ಹಳ್ಳಿಯ ಕಡೆ ಕಾರ್ಯಕ್ರಮವನ್ನು ಕೈಬಿಟ್ಟಿದ್ದ ಜಿಲ್ಲಾಧಿಕಾರಿಗಳು ಆನಂತರ ಅನಿವಾರ್ಯವಾಗಿ ಕೊರೊನಾ ಹೊಡೆತಕ್ಕೆ ಶರಣಾಗಬೇಕಾಯಿತು. ಗ್ರಾಮೀಣ ಪ್ರದೇಶಗಳಲ್ಲಿ ಕೊರೊನಾ ಸೋಂಕು ಪ್ರಮಾಣ ಏರಿಕೆಯಾಗಿದ್ದರಿಂದ ಸರಕಾರ ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲಾಧಿಕಾರಿಗಳ ಗ್ರಾಮ ವಾಸ್ತವ್ಯ ಕಾರ್ಯಕ್ರಮಕ್ಕೆ ವಿರಾಮ ಹಾಕಬೇಕಾಯಿತು. ಹಾಗೆ ನೋಡಿದರೆ ಜನರ ಅಹವಾಲುಗಳನ್ನು ಆಲಿಸುವುದರ ಜೊತೆಗೆ ಸರ್ಕಾರದ ಸಹಾಯ-ಸೌಲಭ್ಯಗಳನ್ನು ಮನೆ ಬಾಗಿಲಿಗೆ ತಲುಪಿಸುವ ಆಶಯದೊಂದಿಗೆ ಆರಂಭಗೊಂಡ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಎಂಬ ಮೊದಲ ವಿನೂತನ ಕಾರ್ಯಕ್ರಮ ನಿರೀಕ್ಷೆಗೂ ಮೀರಿ ಯಶಕಂಡಿತ್ತು. ಬೈಲಹೊಂಗಲ ತಾಲೂಕಿನ ಬೆ„ಲವಾಡ ಗ್ರಾಮದಲ್ಲಿ ಫೆ.20 ರಂದು ನಡೆದ ಮೊದಲ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಎಂ ಜಿ ಹಿರೇಮಠ ಈ ಹೊಸ ಆಶಯಕ್ಕೆ ಜಿಲ್ಲೆಯಲ್ಲಿ ಮುನ್ನುಡಿ ಬರೆದಿದ್ದರು. ಆಗ ಗ್ರಾಮದ ಜನರ ನೋವು-ನಲಿವು ಅನಾವರಣಗೊಂಡಿತ್ತು. ಕಷ್ಟಗಳ ಸರಮಾಲೆ ಅಧಿಕಾರಿಗಳ ಮುಂದೆ ಬಂದು ನಿಂತಿದ್ದವು.
ಜನರ ಸಮಸ್ಯೆಗಳಿಗೆ ಧ್ವನಿಯಾಗುವ ನಿಟ್ಟಿನಲ್ಲಿ ಹಳ್ಳಿಯ ಕಡೆ ಹೆಜ್ಜೆ ಹಾಕಿದ್ದ ಜಿಲ್ಲಾಧಿಕಾರಿಗಳು ಆಗ ಸುಮಾರು ಎರಡು ತಾಸುಗಳ ಕಾಲ ಬೆ„ಲವಾಡ ಗ್ರಾಮದ ಪ್ರತಿ ಓಣಿಗೂ ಭೇಟಿ ನೀಡಿದ್ದಲ್ಲದೆ ಜನರ ಮನೆಬಾಗಿಲಿಗೆ ಹೋಗಿ ಸಮಸ್ಯೆಗಳನ್ನು ಆಲಿಸಿದ್ದರು. ಗ್ರಾಮದ ಜನರು ಮಾಸಾಶನ, ರೇಷನ್, ಕುಡಿಯುವ ನೀರು, ವಸತಿ, ಸ್ವತ್ಛತೆ, ಗಟಾರು, ಶೌಚಾಲಯ ಸೇರಿದಂತೆ ಹತ್ತಾರು ಸಮಸ್ಯೆಗಳ 210ಕ್ಕೂ ಹೆಚ್ಚು ಅಹವಾಲುಗಳನ್ನು ಸಲ್ಲಿಸಿದ್ದರು. ಸ್ಥಳದಲ್ಲೇ ಹಲವಾರು ಅಹವಾಲುಗಳಿಗೆ ಪರಿಹಾರ ಸಹ ನೀಡಲಾಗಿತ್ತು. ಜಿಲ್ಲಾಧಿಕಾರಿಗಳ ಗ್ರಾಮ ವಾಸ್ತವ್ಯದ ನಂತರ ಬೈಲವಾಡ ಗ್ರಾಮದಲ್ಲಿ ಹಲವಾರು ಬದಲಾವಣೆ ಕಂಡವು. ರಸ್ತೆಗಳ ನಿರ್ಮಾಣ ಆಯಿತು.
ಹೆಸ್ಕಾಂದಿಂದ ವಿದ್ಯುತ್ ಕಂಬಗಳ ಅಳವಡಿಕೆ ಕಾರ್ಯ ಆರಂಭವಾಯಿತು. ಬಡ ಜನರಿಗೆ ವೃದ್ಧಾಪ್ಯ ವೇತನ, ಪಡಿತರ ಕಾರ್ಡ್ ಮೊದಲಾದ ಸೌಲಭ್ಯ ದೊರೆತವು. ಶಾಸಕರಿಂದ ಗ್ರಾ ಪಂ ಗೆ ಅನುದಾನ ಬಿಡುಗಡೆ ಮಾಡಿಸುವ ಭರವಸೆ ಜಿಲ್ಲಾಧಿಕಾರಿಗಳಿಂದ ಸಿಕ್ಕಿತು. ಮೊದಲ ಪ್ರಯತ್ನದಲ್ಲೇ ಅಧಿಕಾರಿಗಳ ಗ್ರಾಮ ವಾಸ್ತವ್ಯದಿಂದ ಜನರಲ್ಲಿ ಹೊಸ ವಿಶ್ವಾಸ ಮೂಡಿತ್ತು. ಬೈಲವಾಡ ಗ್ರಾಮದ ನಂತರ ಜಿಲ್ಲೆಯ ಅನೇಕ ಹಳ್ಳಿಗಳು ತಮ್ಮ ಸರದಿಗಾಗಿ ಕಾದಿದ್ದವು. ಆದರೆ ಕೊರೊನಾದ ಎರಡನೇ ಅಲೆ ಎಲ್ಲದಕ್ಕೂ ಕಡಿವಾಣ ಹಾಕಿತು.