Advertisement

ಕೊಳೆತ ಮೊಟ್ಟೆ ವಿತರಣೆ: ಆಕ್ರೋಶ

02:58 PM Jul 05, 2020 | Suhan S |

ಕುಷ್ಟಗಿ: ಪಟ್ಟಣದ 21ನೇ ವಾರ್ಡ್‌ ನ ಅಂಗನವಾಡಿ ಕೇಂದ್ರದಲ್ಲಿ ಗರ್ಭಿಣಿಯರಿಗೆ, ಅಪೌಷ್ಟಿಕಾಂಶದಿಂದ ಬಳಲುವ ಮಕ್ಕಳಿಗೆ ಕೊಳೆತ ಮೊಟ್ಟೆ ವಿತರಿಸುತ್ತಿರುವುದಕ್ಕೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು.

Advertisement

ಶನಿವಾರ ಬೆಳಗ್ಗೆ ಫಲಾನುಭವಿಗೆ ವಿತರಿಸಿದ ಮೊಟ್ಟೆ ಒಡೆದಾಗ ಕೊಳೆತಿರುವುದು ಗೊತ್ತಾಗಿ ಸ್ಥಳೀಯರು, ಅಂಗನವಾಡಿ ಕೇಂದ್ರಕ್ಕೆ ಆಗಮಿಸಿ ಕಾರ್ಯಕರ್ತೆಯನ್ನು ವಿಚಾರಿಸಿದ್ದಾರೆ. ಕೇಂದ್ರದಲ್ಲಿದ್ದ ಇನ್ನೂಳಿದ ಮೊಟ್ಟೆ ಪರಿಶೀಲಿಸಿದಾಗ ಅವು ಕೂಡ ಕೊಳೆತಿರುವುದು ಗಮನಕ್ಕೆ ಬಂದಿದೆ. ಇಂತಹ ಮೊಟ್ಟೆಗಳನ್ನು ತಿಂದು ಆರೋಗ್ಯದಲ್ಲಿ ವ್ಯತ್ಯಾಸವಾದರೆ ಯಾರು ಹೊಣೆ? ಎಂದು ಪುರಸಭೆ ಸದಸ್ಯರಾದ ಮಹಿಬೂಬಸಾಬ್‌ ಕಮ್ಮಾರ, ಮಹಾಂತೇಶ ಕಲ್ಲಭಾವಿ ತರಾಟೆಗೆ ತೆಗೆದುಕೊಂಡರು.

ವಿಷಯ ತಿಳಿಯುತ್ತಿದ್ದಂತೆ ಶಾಸಕ ಅಮರೇಗೌಡ ಪಾಟೀಲ ಬಯ್ನಾಪೂರ ಅಂಗನವಾಡಿ ಕೇಂದ್ರಕ್ಕೆ ಆಗಮಿಸಿ, ಸಿಡಿಪಿಒ ಜಯಶ್ರೀ ಅವರನ್ನು ಕೂಡಲೇ ಭೇಟಿ ನೀಡಿ ವರದಿ ನೀಡುವಂತೆ ಸೂಚಿಸಿದರು. ನಂತರ ಆಗಮಿಸಿದ ಸಿಡಿಪಿಒ ಜಯಶ್ರೀ ಅವರು, ಮೊಟ್ಟೆಯ ಗುಣಮಟ್ಟ ಪರಿಶೀಲಿಸದೇ ವಿತರಿಸಿರುವುದಕ್ಕೆ ಅಂಗನವಾಡಿ ಕಾರ್ಯಕರ್ತೆ ಜುಬೇದಾ ಬೇಗಂ ಅವರಿಗೆ ನೋಟಿಸ್‌ ನೀಡಲಾಗುವುದು.ಬಾಲ ವಿಕಾಸ ಅಂಗನವಾಡಿ ಮೇಲ್ವಿಚಾರಣಾ ಸಮಿತಿಯಿಂದ ಗುಣಮಟ್ಟದ ಮೊಟ್ಟೆ ಖರೀದಿ ಸಿ ವಿತರಿಸಬೇಕು. ಇದಕ್ಕೆ ಪ್ರತ್ಯೇಕ ಏಜೆನ್ಸಿ ಇಲ್ಲ ಎಂದು ಸ್ಪಷ್ಟಪಡಿಸಿದರು.

ತಾಪಂ ಸದಸ್ಯರ ಕೈವಾಡ: ಹೂಲಗೇರಾ ತಾಪಂ ಸದಸ್ಯ ಸುರೇಶ ಕುಂಟನಗೌಡ್ರು ಅನಧಿಕೃತ ಏಜೆನ್ಸಿ ಮೂಲಕ ಕೋಳಿ ಫಾರ್ಮ್ ಅವರೊಂದಿಗೆ ಒಪ್ಪಂದ ಮಾಡಿಕೊಂಡು ತಾಲೂಕಿನ ಎಲ್ಲ ಅಂಗನವಾಡಿ ಕೇಂದ್ರಗಳಿಗೆ ಮೊಟ್ಟೆ ಪೂರೈಸುತ್ತಿದ್ದು ಬಾಲ ವಿಕಾಸ ಮೇಲುಸ್ತುವಾರಿ ಸಮಿತಿ ಹೆಸರಿಗೆ ಮಾತ್ರವಾಗಿದೆ. ಕೊಳೆತ ಮೊಟ್ಟೆಯ ಬಗ್ಗೆ ದೂರು ಕೇಳಿ ಬರುತ್ತಿದ್ದಂತೆ ಅಂಗನವಾಡಿಗೆ ಧಾವಿಸಿದ್ದ ತಾಪಂ ಸದಸ್ಯ ಮಾಧ್ಯಮದವರು ಬರುವುದು ಗೊತ್ತಾಗಿ ಅಲ್ಲಿಂದ ಕಾಲ್ಕಿತ್ತರು ಎಂದು ಸ್ಥಳೀಯರಾದ ಹಸನಸಾಬ್‌, ಕಳಕೇಶ ನಾಯಕ, ರಸೂಲ್‌ ಸಾಬ್‌ ರೌಡಕುಂದ್‌ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next