Advertisement

ಕೆರೆಗಳ ಪುನಶ್ಚೇತನದ ಹೊಣೆ ಹಂಚಿಕೆ: ಕೈಗಾರಿಕೆ ಪರಿಶೀಲನೆ

11:54 AM Apr 22, 2017 | Team Udayavani |

ಬೆಂಗಳೂರು: ಬೆಳ್ಳಂದೂರು ಕೆರೆ ವಿಚಾರದಲ್ಲಿ ಎನ್‌ಜಿಟಿ ನೀಡಿರುವ ಆದೇಶ ರಾಜ್ಯ ಸರ್ಕಾರಕ್ಕೆ ಬಿಸಿ ಮುಟ್ಟಿಸಿದೆ. ಹೀಗಾಗಿ, ಸರ್ಕಾರದ ಮುಖ್ಯ ಕಾರ್ಯದರ್ಶಿ ಹಿರಿಯ ಅಧಿಕಾರಿಗಳ ಸಭೆ ನಡೆಸಿ ನ್ಯಾಯಪೀಠದ ಆದೇಶ ಜಾರಿಗೆ ಸಿದ್ಧತೆ ನಡೆಸಿದ್ದಾರೆ. ಬೆಳ್ಳಂದೂರು ಕೆರೆಯಷ್ಟೇ ಅಲ್ಲದೆ ನಗರದ ಎಲ್ಲ ಕೆರೆಗಳ ಅಭಿವೃದ್ಧಿ ಮತ್ತು ಸ್ವತ್ಛಗೊಳಿಸುವ ಜವಾಬ್ದಾರಿ ಸ್ಥಳೀಯ ಸಂಸ್ಥೆಗಳಿಗೆ ವಹಿಸಿ ಕೆರೆಗಳ ಸಂರಕ್ಷಣೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ. 

Advertisement

ಎನ್‌ಜಿಟಿ ಸೂಚಿಸಿರುವ ತಜ್ಞರ ಸಮಿತಿ ರಚನೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳಿಗೆ ಸೂಚಿಸಿದರು. ಬೆಳ್ಳಂದೂರು ಕೆರೆ ಸಂರಕ್ಷಣೆ ಹಾಗೂ ಅಭಿವೃದ್ಧಿಗೆ ಸಂಬಂಧಿಸಿದಂತೆ ಯಾವ ಸ್ಥಳೀಯ ಸಂಸ್ಥೆ ಯಾವ ಕಾರ್ಯಗಳನ್ನು ಮಾಡಬೇಕು ಎಂಬುದನ್ನು ಸಭೆಯಲ್ಲಿ ನಿರ್ದೇಶನ ನೀಡಲಾಯಿತು. ಯಾವ ಕೆಲಸಗಳನ್ನು ತಕ್ಷಣಕ್ಕೆ ಮಾಡಬಹುದು ಮತ್ತು ಯಾವ ಕೆಲಸಗಳನ್ನು ಮಾಡಲು ಸಮಯಾವಕಾಶ ಬೇಕಾಗುತ್ತದೆ ಎಂಬ ವರದಿ ಸಿದ್ಧಪಡಿಸುವಂತೆಯೂ ಅಧಿಕಾರಿಗಳಿಗೆ ಸೂಚನೆ ನೀಡಲಾಯಿತು ಎಂದು ಮೂಲಗಳು ತಿಳಿಸಿವೆ.

ಐಟಿ ಬಿಟಿ ಕಂಪೆನಿಗಳ ಪರಿಶೀಲನೆ: ಬೆಳ್ಳಂದೂರು ಕೆರೆಯ ಸುತ್ತಮುತ್ತಲಿನ ಕೈಗಾರಿಕೆಗಳನ್ನು ಮುಚ್ಚುವಂತೆ ಎನ್‌ಜಿಟಿ ಆದೇಶ ನೀಡಿರುವ ಹಿನ್ನೆಲೆಯಲ್ಲಿ ಕೆರೆಯ ಸುತ್ತಮುತ್ತಲಿನ ಎಲ್ಲ ಕೈಗಾರಿಕೆಗಳನ್ನು ಪರಿಶೀಲನೆ ನಡೆಸುವಂತೆ ಮುಖ್ಯ ಕಾರ್ಯದರ್ಶಿಗಳು ಅಧಿಕಾರಿಗಳಿಗೆ ತಿಳಿಸಿದ್ದಾರೆ. ಜತೆಗೆ ಐಟಿ-ಬಿಟಿ ಕಂಪೆನಿಗಳಿಂದಲೂ ಕೆರೆಗೆ ತೊಂದರೆಯಾಗುತ್ತಿದೆಯೇ? ಎಂಬುದನ್ನು ಪರಿಶೀಲಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಸಭೆಯಲ್ಲಿ ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ, ಬಿಬಿಎಂಪಿ, ಬಿಡಿಎ, ಜಲಮಂಡಳಿ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಮತ್ತು ರಾಜ್ಯ ಸರೋವರ ಅಭಿವೃದ್ಧಿ ಮತ್ತು ಸಂರಕ್ಷಣೆ ಪ್ರಾಧಿಕಾರದ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು. ಬೆಳ್ಳಂದೂರು ಕೆರೆಯಲ್ಲಿ ಬೆಂಕಿ ಕಾಣಿಸಿಕೊಂಡ ಪ್ರಕರಣ ಸಂಬಂಧ ಬುಧವಾರ ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ (ಎನ್‌ಜಿಟಿ), ಒಂದು ತಿಂಗಳೊಳಗೆ ಬೆಳ್ಳಂದೂರು ಕೆರೆ ಸ್ವತ್ಛಗೊಳಿಸಬೇಕು ಮತ್ತು ಸುತ್ತಮುತ್ತಲಿನ ಕೈಗಾರಿಕೆಗಳನ್ನು ಮುಚ್ಚಿಸಬೇಕು ಎಂದು ಆದೇಶ ಹೊರಡಿಸಿ ಪ್ರಕರಣದ ವಿಚಾರಣೆಯನ್ನು ಮುಂದೂಡಿತ್ತು. 

ಕಾರ್ಯಾಚರಣೆಗಿಳಿದ ಮಾಲಿನ್ಯ ನಿಯಂತ್ರಣ ಮಂಡಳಿ: ಕೆರೆ ಹಾಗೂ ಕಾಲುವೆಗಳಿಗೆ ಸಂಸ್ಕರಿಸದ ತ್ಯಾಜ್ಯ ಹರಿಸುವ ನಗರದ ಕೈಗಾರಿಕೆಗಳ ವಿರುದ್ಧ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಕಾರ್ಯಾಚರಣೆಗಿಳಿದಿದೆ. ನಿಯಮಗಳನ್ನು ಗಾಳಿಗೆ ತೂರಿ ಕಾಲುವೆಗಳಿಗೆ ತ್ಯಾಜ್ಯ ನೀರು ಹರಿಸುತ್ತಿದ್ದ ಕೈಗಾರಿಕೆಗಳನ್ನು ಮುಚ್ಚುವಂತೆ ನೋಟಿಸ್‌ ಜಾರಿಗೊಳಿಸಿದೆ.  ಶನಿವಾರ ಮಂಡಳಿಯ ಅಧ್ಯಕ್ಷ ಲಕ್ಷ್ಮಣ್‌ ನೇತೃತ್ವದಲ್ಲಿ ಯಶವಂತಪುರ, ರಾಜಾಜಿನಗರ ಮತ್ತು ಪೀಣ್ಯ ಪ್ರದೇಶಗಳಲ್ಲಿನ ಕೈಗಾರಿಕೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

Advertisement

“ಏಳು ಕೈಗಾರಿಕೆಗಳಿಂದ ನಿತ್ಯ 50 ಸಾವಿರ ಲೀಟರ್‌ ತ್ಯಾಜ್ಯ ನೀರು ಉತ್ಪತ್ತಿಯಾಗುತ್ತಿದ್ದು, ತ್ಯಾಜ್ಯ ನೀರನ್ನು ಸಂಸ್ಕರಿಸದೆ ನೇರವಾಗಿ ರಾಜಕಾಲುವೆಗೆ ಹರಿಸಲಾಗುತ್ತಿದೆ. ದೊಡ್ಡ ಪ್ರಮಾಣದಲ್ಲಿ ಕೊಳಚೆ ನೀರು ಉತ್ಪತ್ತಿ ಮಾಡುತ್ತಿದ್ದರೂ ರಾಸಾಯನಿಕ ಶುದ್ಧೀಕರಣ ಘಟಕ (ಇಟಿಪಿ) ಸ್ಥಾಪಿಸಲು ಮುಂದಾಗದ ಹಿನ್ನೆಲೆಯಲ್ಲಿ ಕೈಗಾರಿಕೆಗಳನ್ನು ಮುಚ್ಚುವಂತೆ ನೋಟಿಸ್‌ ಜಾರಿಗೊಳಿಸಲಾಗಿದೆ,’ ಎಂದು ತಿಳಿಸಿದರು. 

ಕಾರ್ಲೆ ಕಾರ್ಖಾನೆ ಸೇರಿದಂತೆ ವೈಯಾಲಿಕಾವಲ್‌ ಮತ್ತು ಮಹಾಲಕ್ಷ್ಮೀ ಬಡಾವಣೆಯ ದೋಬಿಘಾಟ್‌, ಪೀಣ್ಯ ಕೈಗಾರಿಕೆ ಪ್ರದೇಶಗಳಲ್ಲಿ 2 ಕೈಗಾರಿಕೆ, ಶಾಯಿ ವಾಷಿಂಗ್‌ ಘಟಕ ಮತ್ತು ಮರ್ಜಕ ಕಾರ್ಖಾನೆಗಳಿಗೆ ತೆರಳಿ ತಪಾಸಣೆ ನಡೆಸಲಾಗಿದೆ. ಬಹುತೇಕ ಕೈಗಾರಿಕೆಗಳು ನಿಯಮ ಮೀರಿ ಕಾರ್ಯನಿರ್ವಹಿಸುತ್ತಿರುವುದರಿಂದ ನೋಟಿಸ್‌ ನೀಡಿ ಎಚ್ಚರಿಕೆ ನೀಡಲಾಗಿದೆ ಎಂದು ಹೇಳಿದರು.

ಇಂದು ಟೆಂಡರ್‌ ಅಂತಿಮ, ಕೂಡಲೇ ಕಾರ್ಯಾರಂಭ: ಬೆಳ್ಳಂದೂರು ಕೆರೆ ಅಭಿವೃದ್ಧಿಗೆ ಸಂಬಂಧಿಸಿದಂತೆ ಬಿಡಿಎ ವತಿಯಿಂದ ಎರಡು ಹಂತಗಳಲ್ಲಿ ಕಾಮಗಾರಿ ಕೈಗೊಳ್ಳಲು ಈಗಾಗಲೇ ಟೆಂಡರ್‌ ಕರೆಯಲಾಗಿದೆ. ಶನಿವಾರ ಟೆಂಡರ್‌ ಪ್ರಕ್ರಿಯೆ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದ್ದು, ಪ್ರಕ್ರಿಯೆ ಮುಗಿದ ಕೂಡಲೇ ಗುತ್ತಿಗೆದಾರರು ಕಾಮಗಾರಿ ಕೈಗೆತ್ತಿಕೊಳ್ಳಲಿದ್ದಾರೆ ಎಂದು ನಗರಾಭಿವೃದ್ಧಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮಹೇಂದ್ರ ಜೈನ್‌ ತಿಳಿಸಿದ್ದಾರೆ. 

5 ಲಕ್ಷ ದಂಡ ವಿಧಿಸಿದ ಮಹಾನಗರ ಪಾಲಿಕೆ
ಕೆರೆ ಮಲಿನಗೊಳಿಸುವ ಕೈಗಾರಿಕೆಗಳು ಮತ್ತು ಕಟ್ಟಡಗಳಿಗೆ 5 ಲಕ್ಷ ರೂ. ದಂಡ ವಿಧಿಸುವಂತೆ ಎನ್‌ಜಿಟಿ ನೀಡಿದ ಆದೇಶ ಪಾಲನೆಗೆ ಬಿಬಿಎಂಪಿ ಮುಂದಾಗಿದೆ. ಅದರಂತೆ ಕೆರೆಯಲ್ಲಿ ಜೈವಿಕ ತ್ಯಾಜ್ಯಗಳನ್ನು ಸುರಿದ ಪುಲಿಕೇಶಿನಗರದ ಮೆರಿಡಿಯನ್‌ ಮೆಡಿಕಲ್‌ ಸೆಂಟರ್‌ಗೆ ಪಾಲಿಕೆ 5 ಲಕ್ಷ ದಂಡ ವಿಧಿಸಿದೆ. ಸೆಂಟರ್‌ನ ವಾಣಿಜ್ಯ ಪರವಾನಗಿಯನ್ನು ತಾತ್ಕಾಲಿಕವಾಗಿ ರದ್ದುಗೊಳಿಸಿದೆ. ಸಂಸ್ಥೆ ಅವಲಹಳ್ಳಿಯಲ್ಲಿ ಜೈವಿಕ ತ್ಯಾಜ್ಯ ಸುರಿಯುತ್ತಿರುವ ಬಗ್ಗೆ ದೂರುಗಳು ಕೇಳಿಬಂದಿದ್ದವು. ಈ ಹಿನ್ನೆಲೆಯಲ್ಲಿ ಪಾಲಿಕೆ ಅಧಿಕಾರಿಗಳು ಅವಲಹಳ್ಳಿ ಕೆರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ತ್ಯಾಜ್ಯ ಸುರಿಯುತ್ತಿರುವುದು ಕಂಡು ಬಂದ ಹಿನ್ನೆಲೆಯಲ್ಲಿ ಸಂಸ್ಥೆಗೆ 5 ಲಕ್ಷ ದಂಡ ವಿಧಿಸಿ ನೋಟಿಸ್‌ ನೀಡಲಾಗಿದೆ. ಮೂರು ದಿನಗಳೊಳಗೆ ಉತ್ತರ ನೀಡುವಂತೆ ಸೂಚಿಸಿದ್ದಾರೆ. 

ಬೆಳ್ಳಂದೂರು ಕೆರೆಯನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಲು ತಜ್ಞರ ತಂಡ ರಚಿಸಲಾಗಿದೆ. ಕೆರೆ ಅಭಿವೃದ್ಧಿಗೆ ಸಂಬಂಧಿಸಿ ದಂತೆ ಶೀಘ್ರದಲ್ಲಿಯೇ ಕಾಮಗಾರಿಗಳು ಆರಂಭವಾಗಲಿವೆ. ಬೆಳ್ಳಂದೂರು ಕೆರೆ ಸೇರಿದಂತೆ ರಾಂಪುರ, ಕಲ್ಕೆರೆಗಳ ಅಭಿವೃದ್ಧಿಗೂ ಈಗಾಗಲೇ ಯೋಜನೆ ರೂಪಿಸಲಾಗಿದೆ. 
-ಕೆ.ಜೆ.ಜಾರ್ಜ್‌, ಬೆಂಗಳೂರು ನಗರಾಭಿವೃದ್ಧಿ ಸಚಿವ

ಬೆಳ್ಳಂದೂರು ಕೆರೆಯ ನೈರ್ಮಲ್ಯದ ಸಲುವಾಗಿ ಹಲವು ಬಾರಿ ಹೋರಾಟ ನಡೆಸಿದ್ದೇವೆ. ಕೆರೆಗೆ ಬೆಂಕಿ ಬಿದ್ದಾಗಲೂ ಪರಿಹಾರ ಕ್ರಮಕೈಗೊಳ್ಳುವಲ್ಲಿ ಸರ್ಕಾರ ವಿಳಂಬ ಮಾಡಿದೆ. ಇಂದು ಎನ್‌ಜಿಟಿ ಆದೇಶ ನೀಡುವ ಮೂಲಕ ಸರ್ಕಾರಕ್ಕೆ ಚಾಟಿ ಬೀಸಿದೆ. 
-ಅರವಿಂದ ಲಿಂಬಾವಳಿ, ಮಹದೇವಪುರ ಶಾಸಕ

ಬಿಬಿಎಂಪಿ, ಸರ್ಕಾರ, ಕೆರೆ ಅಭಿವೃದ್ಧಿ ಪ್ರಾಧಿಕಾರ ಈ ಮೂರು ಇಲಾಖೆಗಳು ಸೇರಿ ನಗರದ ಕೆರೆಗಳನ್ನು ಅಭಿವೃದ್ಧಿ ಮಾಡುತ್ತೇವೆ 
-ಜಿ.ಪದ್ಮಾವತಿ, ಮೇಯರ್‌ 

Advertisement

Udayavani is now on Telegram. Click here to join our channel and stay updated with the latest news.

Next