Advertisement

ಜನೋಪಯೋಗಿ ಸಸಿ ವಿತರಣೆ: ಅರಣ್ಯ, ತೋಟಗಾರಿಕೆ ಇಲಾಖೆ ಸಿದ್ಧತೆ

11:46 AM Jun 03, 2022 | Team Udayavani |

ಉಡುಪಿ: ಮಳೆ ಶುರುವಾಗಿ ರುವುದರಿಂದ ಕೃಷಿ ಚಟುವಟಿಕೆಗಳು ಚುರುಕು ಗೊಂಡಿರುವ ಬೆನ್ನಲ್ಲೇ ತೋಟಗಾರಿಕೆ ಹಾಗೂ ಅರಣ್ಯ ಇಲಾಖೆ ವಿವಿಧ ತಳಿಯ ಜನೋಪಯೋಗಿ ಸಸ್ಯಗಳ ವಿತರಣೆಗೂ ಸಜ್ಜುಮಾಡಿಕೊಳ್ಳುತ್ತಿವೆ.

Advertisement

ಈ 2 ಇಲಾಖೆಗಳು ಪ್ರತೀ ವರ್ಷ ನಿರ್ದಿಷ್ಟ ಗುರಿಯೊಂದಿಗೆ ಸಾರ್ವಜನಿಕರಿಗೆ, ಕೃಷಿಕರಿಗೆ, ಬೆಳೆಗಾರರಿಗೆ ವಿವಿಧ ತಳಿಯ ಸಸಿಗಳನ್ನು ವಿತರಣೆ ಮಾಡಲಿವೆ. ಪ್ರಸಕ್ತ ಸಾಲಿನಲ್ಲಿ ಸಾರ್ವಜನಿಕರ ಬೇಡಿಕೆಗೆ ಅನುಗುಣವಾಗಿ ಹೆಚ್ಚೆಚ್ಚು ಹಣ್ಣಿನ ಮತ್ತು ಜನೋಪಯೋಗಿ (ಬೃಹದಾಕಾರವಾಗಿ ಬೆಳೆಯುವ ಗಿಡಗಳು) ಸಸ್ಯಗಳನ್ನು ವಿತರಣೆಗೆ ಮುಂದಾಗಿವೆ.

ಕಳೆದ ವರ್ಷ ಅರಣ್ಯ ಇಲಾಖೆಯಿಂದ 700 ಹೆಕ್ಟೇರ್‌ (ಅರಣ್ಯ ಪ್ರದೇಶ)ನಲ್ಲಿ 3 ಲಕ್ಷ ಗಿಡಗಳನ್ನು ನೆಡಲಾಗಿದೆ. ಈ ವರ್ಷವೂ ಅರಣ್ಯದಲ್ಲಿ ಗಿಡ ನೆಡಲಾಗುವುದು, ಜತೆಗೆ ಸುಮಾರು 2.30 ಲಕ್ಷ ಸಸಿಗಳನ್ನು ಸಾರ್ವಜನಿಕರಿಗೆ ವಿತರಿಸುವ ಗುರಿ ಹೊಂದಿದೆ.

ಅಡಿಕೆ ಗಿಡಕ್ಕೆ 20 ರೂ., ಕಾಳು ಮೆಣಸು ಒಂದು ಕಡ್ಡಿಗೆ 5.30 ರೂ., ತೆಂಗು ಒಂದಕ್ಕೆ 75 ರೂ., ತೋಟಗಾರಿಕೆ ಇಲಾಖೆಯಲ್ಲಿ ದರ ನಿಗದಿ ಮಾಡಲಾಗಿದೆ. ಅರಣ್ಯ ಇಲಾಖೆಯ ಬಹುತೇಕ ಎಲ್ಲ ಸಸಿಗಳು 1, 3 ಹಾಗೂ 5 ರೂ.ಗಳಲ್ಲಿ ಲಭ್ಯವಿದೆ. ಇದು ಸಬ್ಸಿಡಿ ದರ. ಸಾರ್ವಜನಿಕರು ತಮ್ಮ ಜಮೀನನಲ್ಲೂ ಈ ಗಿಡಗಳನ್ನು ಬೆಳೆಸಲು ಅವಕಾಶವಿದೆ. ಈ ಎರಡು ಇಲಾಖೆಯಿಂದ ನಿರ್ದಿಷ್ಟ ದರದಲ್ಲಿ ಸಸಿಗಳನ್ನು ವಿತರಣೆ ಮಾಡಲಾಗುತ್ತದೆ. ತಮ್ಮ ಜಮೀನಿನ ಪಹಣಿ ಪತ್ರದ ಪ್ರತಿಯನ್ನು ದಾಖಲೆಯಾಗಿ ನೀಡಿ ಸಸಿಯನ್ನು ಪಡೆಯಬಹುದಾಗಿದೆ. ಜೂನ್‌ ಮೊದಲ ವಾರದಲ್ಲಿ ಸಸಿಗಳ ವಿತರಣೆ ಪ್ರಕ್ರಿಯೆ ಶುರುವಾಲಿದೆ ಎಂದು ಮೂಲಗಳು ತಿಳಿಸಿವೆ.

ಕೃ‌ಷಿ ಅರಣ್ಯ ಪ್ರೋತ್ಸಾಹ ಯೋಜನೆ: ಒಂದು ಸಸಿ ಬದುಕಿಸಿದರೆ 125 ರೂ.

Advertisement

ಏಳೆಂಟು ವರ್ಷಗಳ ಹಿಂದೆ ಆರಂಭವಾದ ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆ ಈಗ ರೈತರಿಗೆ ಇನ್ನಷ್ಟು ಆಕರ್ಷಕವಾಗಲಿದೆ. ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆಯಡಿ ಸಸಿ ನೆಟ್ಟ ರೈತರಿಗೆ ಪ್ರೋತ್ಸಾಹ ಧನ ಪಾವತಿಸಲಾಗುತ್ತದೆ. ಹಿಂದಿನ ವರ್ಷಗಳಲ್ಲಿ ನೆಟ್ಟ ಗಿಡವನ್ನು ಮೂರು ವರ್ಷ ಬದುಕಿಸಿದರೆ ಪ್ರತೀ ಗಿಡಕ್ಕೆ 45 ರೂ. ಪ್ರೋತ್ಸಾಹಧನ ನೀಡಲಾಗುತ್ತಿತ್ತು. ಬಳಿಕ 100 ರೂ.ಗೆ ಏರಿಸಲಾಯಿತು. ಈ ವರ್ಷ 125 ರೂ.ಗೆ ಏರಿಸಲಾಗಿದೆ.

3 ಕಂತುಗಳಲ್ಲಿ ಈ ಮೊತ್ತವನ್ನು ನೀಡಲಾಗುತ್ತದೆ. ಮೊದಲ ವರ್ಷ 35 ರೂ., ಎರಡನೇ ವರ್ಷ 40 ರೂ., ಮೂರನೇ ವರ್ಷ 50 ರೂ. ನೀಡಲಾಗುವುದು. ಒಂದು ಹೆಕ್ಟೇರ್‌ ಪ್ರದೇಶದಲ್ಲಿ (ಎರಡೂವರೆ ಎಕ್ರೆ) ಗರಿಷ್ಠ 400 ಸಸಿಗಳನ್ನು ನೆಟ್ಟು ಈ ಯೋಜನೆಯ ಲಾಭವನ್ನು ಸಾರ್ವಜನಿಕರು ಪಡೆಯಬಹುದು. ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಹಣ ಮಂಜೂರಾತಿಗೆ ಶಿಫಾರಸು ಮಾಡುತ್ತಾರೆ.

ಗಿಡಗಳು ಎಲ್ಲಿ ಸಿಗಲಿವೆ?

ತೋಟಗಾರಿಕೆ ಇಲಾಖೆಯಿಂದ ನೀಡುವ ವಿವಿಧ ಸಸಿಗಳು ಉಡುಪಿ ಶಿವಳ್ಳಿ ತೋಟಗಾರಿಕ ಕ್ಷೇತ್ರ, ಕುಂದಾಪುರದ ಕುಂಭಾಶಿ ಮತ್ತು ಕೆದೂರು ತೋಟಗಾರಿಕ ಕ್ಷೇತ್ರ, ಕಾರ್ಕಳದ ಕುಕ್ಕುಂದೂರು ಮತ್ತು ರಾಮಸಮುದ್ರ, ಬ್ರಹ್ಮಾವರದ ವಾರಂಬಳ್ಳಿ ತೋಟಗಾರಿಕ ಕ್ಷೇತ್ರದಲ್ಲಿ ಸಸಿಗಳನ್ನು ನಿರ್ದಿಷ್ಟ ಬೆಲೆಯಲ್ಲಿ ವಿತರಣೆ ಮಾಡಲಾಗುತ್ತದೆ. ಅರಣ್ಯ ಇಲಾಖೆಯ ಬೈಂದೂರಿನ ಶಿರೂರು ಟೋಲ್‌ ಗೇಟ್‌ ಸಮೀಪದ ನರ್ಸರಿ, ನೇರಳಕಟ್ಟೆಯಲ್ಲಿರುವ ನರ್ಸರಿ, ಬ್ರಹ್ಮಾವರದಲ್ಲಿರುವ ನರ್ಸರಿ, ಮಡಾಮಕ್ಕಿ ನರ್ಸರಿ, ಶಿರ್ಲಾಲು ನರ್ಸರಿಯ ಜತೆಗೆ ಹಾಲಾಡಿಯ ಪೆರ್ಡೂರು ಮತ್ತು ಮಾಳದಲ್ಲಿರುವ ಸಾಮಾಜಿಕ ಅರಣ್ಯ (ಸೋಸಿಯಲ್‌ ಫಾರೆಸ್ಟ್‌) ನಲ್ಲಿ ಗಿಡಗಳು ಲಭ್ಯವಿದೆ.

ಯಾವೆಲ್ಲ ಗಿಡಗಳು ಲಭ್ಯ?

ತೋಟಗಾರಿಕೆ ಇಲಾಖೆಯಲ್ಲಿ ಅಡಿಕೆ, ತೆಂಗು, ಮೆಣಸಿನ ಬಳ್ಳಿ, ಗೇರು ಇತ್ಯಾದಿ ತೋಟಗಾರಿಕ ಬೆಳೆಯ ಸಸ್ಯಗಳು ಲಭ್ಯವಿರುತ್ತವೆ. ಪಪ್ಪಾಯಿ, ನುಗ್ಗೆ ಮೊದಲಾದ ಇತರ ವರ್ಗದ ಸಸಿಗಳು ಬೇಕಿದ್ದಲ್ಲಿ ಮುಂಚಿತವಾಗಿ ಆರ್ಡರ್‌ ನೀಡಿ, ಬಲ್ಕ್ ರೂಪದಲ್ಲಿ ಪಡೆಯಲೂ ಅವಕಾಶವಿದೆ. ಅರಣ್ಯ ಇಲಾಖೆಯಲ್ಲಿ ಮಾವು, ಹಲಸು, ಹೆಬ್ಬೆಲಸು, ರಾಮಪತ್ರೆ, ಮಹಾಗನಿ, ದಾಲ್ಚಿನ್ನಿ, ಪುನರ್ಪುಳಿಯ ಜತೆಗೆ ಕೆಲವು ಕಡೆ ಶ್ರೀಗಂಧದ ಗಿಡಗಳು ಲಭ್ಯವಿವೆ.

ಕಡಿಮೆ ಬೆಲೆ

ಈ ವರ್ಷ 2.30 ಲಕ್ಷ ಸಸಿ ವಿತರಣೆಯ ಗುರಿ ಹಾಕಿಕೊಂಡಿದ್ದೇವೆ. ಅದಕ್ಕೆ ಸಂಬಂಧಿಸಿದ ಪ್ರಕ್ರಿಯೆಗಳನ್ನು ಶುರು ಮಾಡಿದ್ದೇವೆ. ಹಣ್ಣಿನ ಗಿಡಗಳಿಗೆ ಬೇಡಿಕೆ ಹೆಚ್ಚಿದೆ. ಆಗ್ರೋ ಫಾರೆಸ್ಟ್‌ ಪರಿಕಲ್ಪನೆಯಡಿ ಅತ್ಯಂತ ಕಡಿಮೆ ಬೆಲೆಯಲ್ಲಿ ಸಸಿಗಳ ವಿತರಣೆ ಮಾಡಲಾಗುವುದು. ಆಶೀಶ್‌ ರೆಡ್ಡಿ, ಡಿಎಫ್ಒ, ಕುಂದಾಪುರ ವಿಭಾಗ

ಅಡಿಕೆಗೆ ಹೆಚ್ಚು ಬೇಡಿಕೆ

2022-23ರಲ್ಲಿ 1.80 ಲಕ್ಷ ಗಿಡಗಳನ್ನು ವಿತರಿಸುವ ಗುರಿ ಹೊಂದಿದ್ದೇವೆ. ಈಗಾಗಲೇ ನಮ್ಮಲ್ಲಿ 80 ಸಾವಿರಕ್ಕೂ ಅಧಿಕ ಗಿಡಗಳು ಲಭ್ಯವಿದೆ. ಅಡಿಕೆಗೆ ಹೆಚ್ಚು ಬೇಡಿಕೆಯಿದೆ. ಭುವನೇಶ್ವರಿ, ಉಪನಿರ್ದೇಶಕಿ, ವಿಶೇಷ ತೋಟಗಾರಿಕೆ ಇಲಾಖೆ

Advertisement

Udayavani is now on Telegram. Click here to join our channel and stay updated with the latest news.

Next