Advertisement

ಬಸವ ವಸತಿ ಯೋಜನೆಯ ಆದೇಶ ಪತ್ರ ವಿತರಣೆ 

03:19 PM Jan 04, 2018 | |

ಸಂಪ್ಯ : ಬಸವ ವಸತಿ ಯೋಜನೆಯ ಆದೇಶ ಪತ್ರ ವಿತರಣಾ ಸಮಾರಂಭ ಬುಧವಾರ ಆರ್ಯಾಪು ಗ್ರಾ.ಪಂ. ಸಭಾಂಗಣದಲ್ಲಿ ನಡೆಯಿತು. ಅಧ್ಯಕ್ಷತೆ ವಹಿಸಿದ್ದ ಗ್ರಾ.ಪಂ. ಅಧ್ಯಕ್ಷೆ ಗೀತಾ ಹಕ್ಕುಪತ್ರ ವಿತರಣೆ ಮಾಡಿದರು. ತಾ.ಪಂ. ಸದಸ್ಯ ಸಾಜ ರಾಧಾಕೃಷ್ಣ ಆಳ್ವ ಮಾತನಾಡಿ, ಗ್ರಾಮಸಭೆಯಲ್ಲಿ ಬಂದ ಅರ್ಜಿಗಳನ್ನು ಪರಿಶೀಲಿಸಿ ಆದೇಶ ಪತ್ರ ವಿತರಿಸಲಾಗುತ್ತಿದೆ. ಒಟ್ಟು 62 ಅರ್ಜಿ ಸಲ್ಲಿಕೆಯಾಗಿತ್ತು. ಇದರಲ್ಲಿ 28 ಅರ್ಹ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಲಾಗುವುದು. ಉಳಿದ ಫಲಾನುಭವಿಗಳ ಅರ್ಜಿಯನ್ನು ಪರಿಶೀಲಿಸಿ ಹಂತ ಹಂತವಾಗಿ ಕ್ರಮ ಕೈಗೊಳ್ಳಲಾಗುವುದು.

Advertisement

ತತ್‌ಕ್ಷಣ ಗ್ರಾ.ಪಂ.ಗೆ ಮಾಹಿತಿ ನೀಡಿ
ಮನೆ ಕಟ್ಟುವ ವಿಚಾರದಲ್ಲಿ ವಿಳಂಬ ಮಾಡಬೇಡಿ. ಆದಷ್ಟು ಶೀಘ್ರ ಅಂದರೆ ಆರು ತಿಂಗಳ ಒಳಗಾಗಿ ಮನೆ ನಿರ್ಮಾಣ ಆಗಬೇಕಿದೆ. ಪಂಚಾಂಗ ನಿರ್ಮಾಣವಾದ ತತ್‌ಕ್ಷಣ ಗ್ರಾ.ಪಂ.ಗೆ ಮಾಹಿತಿ ನೀಡಿ, ಜಿಪಿಎಸ್‌ ಫೂಟೋ ತೆಗೆಸಿಕೊಳ್ಳಿ ಎಂದರು.

ಆರ್ಯಾಪು ಗ್ರಾಮ ಪಂಚಾಯತ್‌ ವಸಂತ್‌ ಮಾತನಾಡಿ, ಆರು ತಿಂಗಳ ಒಳಗೆ ಮನೆ ಪೂರ್ಣ ಆಗಬೇಕು. ಮನೆ ನಿರ್ಮಿಸುವ ಮೊದಲು ಗ್ರಾಮ ಪಂಚಾಯತ್‌ ಪರವಾನಿಗೆ ಅಗತ್ಯ. ಪರವಾನಿಗೆ ಪಡೆದು ಬಳಿಕವಷ್ಟೇ ಮನೆ ನಿರ್ಮಾಣಕ್ಕೆ ಮುಂದಾಗಿ. ಪರವಾನಿಗೆ ಪಡೆಯದೇ ಶುಲ್ಕ ವಿಧಿಸಲು ಅವಕಾಶ ನೀಡಬೇಡಿ. ಒಂದು ವೇಳೆ ಪರವಾನಿಗೆ ಪಡೆಯದೇ ಇದ್ದರೆ, ವಿದ್ಯುತ್‌ ಪಡೆಯಲು ಸಾಧ್ಯವಿಲ್ಲ ಎಂದು ಕಿವಿಮಾತು ಹೇಳಿದರು.

ಗ್ರಾ.ಪಂ. ಕಾರ್ಯದರ್ಶಿ ಪದ್ಮಾ ಕುಮಾರಿ ಮಾತನಾಡಿ, ಈ ಬಾರಿ ಆರ್ಯಾಪು ಗ್ರಾ.ಪಂ. ವ್ಯಾಪ್ತಿಗೆ 62 ಮನೆಗಳು ಸಿಕ್ಕಿವೆ. ಇದರಲ್ಲಿ ಉತ್ತಮ ಪ್ರಗತಿ ತೋರಿಸಬೇಕು. ಪ್ರಗತಿಯಾದರೆ ಮಾತ್ರ ಮುಂದಿನ ಬಾರಿ ಹೆಚ್ಚು ಮನೆಗಳನ್ನು ಪಡೆದುಕೊಳ್ಳಲು ಸಾಧ್ಯ.

ಜನಸಾಮಾನ್ಯರಿಗೆ ಮನೆ ಆಗಲೇಬೇಕೆಂದು ಮೇಲಾ ಧಿಕಾರಿಗಳು ಶ್ರಮ ಪಡುತ್ತಿದ್ದಾರೆ. ನಮ್ಮ ಮೇಲೆ ಒತ್ತಡ ತರುತ್ತಿದ್ದಾರೆ. ಒಳ್ಳೆಯ ಉದ್ದೇಶ ಇಟ್ಟುಕೊಂಡು ಸರಕಾರ ಜಾರಿ ಮಾಡಿರುವ ವಸತಿ ಯೋಜನೆಯನ್ನು ಯಶಸ್ವಿ ಮಾಡಬೇಕು. ಮರಳು, ನೀರಿನ ಉದ್ದೇಶಕ್ಕೆ ಮನೆ ನಿರ್ಮಾಣ ಕಾರ್ಯ ಪೆಂಡಿಂಗ್‌ ಆಗದಂತೆ ನೋಡಿಕೊಳ್ಳಿ ಎಂದರು.

Advertisement

ಆರು ತಿಂಗಳು ಕಡಿಮೆ
ಒಂದು ಲೋಡ್‌ ಮರಳು ತೆಗೆಯಬೇಕಾದರೆ ಒಂದು ತಿಂಗಳು ಕಾಯಬೇಕು. ಮಾತ್ರವಲ್ಲ, ಕೇಳಿದಷ್ಟು ಹಣ
ನೀಡಬೇಕು. ಹೀಗಿರುವಾಗ ಆರು ತಿಂಗಳಲ್ಲಿ ಮನೆ ನಿರ್ಮಿಸಿ ಎಂದು ಒತ್ತಡ ತಂದರೆ ಹೇಗೆ? ಜನಸಾಮಾನ್ಯರು ಹಣ
ಹೊಂದಿಸಿಕೊಂಡು, ಆರು ತಿಂಗಳೊಳಗೆ ಮನೆ ನಿರ್ಮಾಣ ಮಾಡುವುದು ಕಷ್ಟ ಎಂದು ಗ್ರಾ.ಪಂ. ಸದಸ್ಯರು ತಿಳಿಸಿದರು. 15 ದಿನಗಳಲ್ಲಿ ಮರಳಿಗೆ ವ್ಯವಸ್ಥೆ ಮಾಡುವುದಾಗಿ ಜಿ.ಪಂ. ಸಿಇಒ ಹೇಳಿದ್ದಾರೆ. ಇದೀಗ 34 ದಿನ ಕಳೆಯಿತು. ಇನ್ನೂ ಭರವಸೆ ಜಾರಿಯಾಗಿಲ್ಲ ಎಂದು ಗ್ರಾಮಸ್ಥರು ದೂರಿದರು .

ಅನುದಾನ ಕಡಿಮೆ
ಗ್ರಾಮಸ್ಥ ರಾಂ ಪ್ರಸಾದ್‌ ಮಾತನಾಡಿ, ಸದ್ಯಕ್ಕೆ ನೀಡುವ ಹಣದಲ್ಲಿ ಟಾಯ್ಲೆಟ್‌ ಕಟ್ಟಲು ಸಾಧ್ಯವಿಲ್ಲ. ಮನೆ ನಿರ್ಮಾಣಕ್ಕೆಂದು ಕೇಂದ್ರ ಸರಕಾರವೂ ಹಣ ನೀಡುತ್ತಿದೆ ಎಂಬ ಮಾಹಿತಿ ಇದೆ. ಇದರ ಬಗ್ಗೆ ಖಾತ್ರಿ ಪಡಿಸಿಕೊಳ್ಳಿ. ಕೇಂದ್ರ ಸರಕಾರ ಬಿಡುಗಡೆ ಮಾಡುವ ಹಣವನ್ನು ರಾಜ್ಯ ಸರಕಾರ ತಡೆ ಹಿಡಿದಿದೆ ಎಂದು ಹೇಳಲಾಗುತ್ತಿದೆ. ಆದರೆ ಈ ಬಗ್ಗೆ ಖಚಿತ ಮಾಹಿತಿ ಇಲ್ಲ. ಕೇರಳ ರಾಜ್ಯದಲ್ಲಿ ಬಿಪಿಎಲ್‌ ಕಾರ್ಡ್‌ನವರಿಗೆ 3.5 ಲಕ್ಷ ರೂ., ಎಸ್ಸಿ, ಎಸ್ಟಿಗೆ 5.5 ಲಕ್ಷ ರೂ. ನೀಡಲಾಗುತ್ತಿದೆ. ಪಕ್ಕದ ರಾಜ್ಯದಲ್ಲಿ ಒಂದು ಕಾನೂನು ನಮ್ಮಲ್ಲಿ ಒಂದು ಕಾನೂನು ಜಾರಿಯಿದೆ ಎಂದು ಗಮನ ಸೆಳೆದರು.

Advertisement

Udayavani is now on Telegram. Click here to join our channel and stay updated with the latest news.

Next