ಬಳ್ಳಾರಿ: ಹೆತ್ತ ತಂದೆ-ತಾಯಿಗಳ ಪ್ರೀತಿ ಮತ್ತು ಕಾಳಜಿ ಯಾರಿಂದಲೂ ನೀಡಲು ಸಾಧ್ಯವಿಲ್ಲವಾದರೂ ತಾಯಿ ಭಾರತಾಂಬೆ ನಿಮ್ಮೊಂದಿಗಿದ್ದಾಳೆ. ಪಿ.ಎಂ. ಕೇರ್ ಯೋಜನೆ ಮೂಲಕ ನಿಮ್ಮ ಕಲ್ಯಾಣಕ್ಕೆ ಸರ್ಕಾರ ಬದ್ಧವಾಗಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಮಾತನಾಡಿದರು.
ಪಿಎಂ ಕೇರ್ ಫಾರ್ ಚಿಲ್ಡ್ರನ್ಸ್ ಯೋಜನೆಯಡಿಯ ಕೋವಿಡ್‌ನಿಂದ ತಂದೆ-ತಾಯಿಗಳನ್ನು ಕಳೆದುಕೊಂಡ 18 ವರ್ಷದೊಳಗಿನ ಮಕ್ಕಳೊಂದಿಗೆ ದೆಹಲಿಯಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ಸೋಮವಾರದಂದು ಸಂವಾದ ನಡೆಸಿದರು. ಈ ಕುರಿತು ಜಿಲ್ಲಾ ಪಂಚಾಯತ್‌ನ ವಿಡಿಯೋ ಕಾನ್ಫರೆನ್ಸ್ ಹಾಲ್ ನಲ್ಲಿ ವರ್ಚುವಲ್ ಮೂಲಕ ವೀಕ್ಷಿಸಲು ವ್ಯವಸ್ಥೆ ಮಾಡಲಾಗಿತ್ತು.
ಸಂಕಷ್ಟದ ದಿನಗಳನ್ನು ಎದುರಿಸಿ ಬಂದಿರುವ ನಿಮ್ಮ ಧೈರ್ಯಕ್ಕೆ ನಾನು ಧನ್ಯಾವಾದಗಳನ್ನು ತಿಳಿಸುತ್ತೇನೆ ಎಂದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು, ನಿಮ್ಮ ಕನಸನ್ನು ಸಾಕಾರಗೊಳಿಸುವುದಕ್ಕೆ ಪಿ.ಎಂ. ಕೇರ್ ಫಾರ್ ಚಿಲ್ಡ್ರನ್ ಎಂಬ ಯೋಜನೆಯು ಸಣ್ಣ ಪ್ರಯತ್ನವಾಗಿದೆ. ಇಡಿ ದೇಶ, ದೇಶದ ಸಂವೇದನೆ ನಿಮ್ಮೊಂದಿಗೆ ಇದೆ ಎಂದು ಮಕ್ಕಳಿಗೆ ಅಭಯ ನೀಡಿದರು. ಈ ಸಂದರ್ಭದಲ್ಲಿ ಮಕ್ಕಳ ಉನ್ನತ ವಿದ್ಯಾಭ್ಯಾಸಕ್ಕಾಗಿ ಮನೆ ಹತ್ತಿರವಿರುವ ಯಾವುದೇ ಸರ್ಕಾರಿ ಅಥವಾ ಖಾಸಗಿ ಶಾಲೆಗೆ ಪ್ರವೇಶ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಶಿಕ್ಷಣಕ್ಕೆ ಬೇಕಾದ ಪುಸ್ತಕ, ಬಟ್ಟೆ ಇನ್ನಿತರ ಖರ್ಚು ಸಹ ಸರ್ಕಾರ ನೋಡಿಕೊಳ್ಳಲಿದೆ. ಉನ್ನತ ಶಿಕ್ಷಣದ ಜೊತೆಗೆ ಶೈಕ್ಷಣಿಕ ಸಾಲಕ್ಕೂ ಪಿ.ಎಂ.ಕೇರ್ ನೆರವಾಗಲಿದೆ. 5 ಲಕ್ಷ ರೂ. ವರೆಗಿನ ಉಚಿತ ಚಿಕಿತ್ಸೆಯ ಆಯುಷ್ಮಾನ್ ಭಾರತ್ ಆರೋಗ್ಯ ಕಾರ್ಡ್ ನೀಡಲಾಗುತ್ತಿದೆ. ಮಕ್ಕಳ ಹೆಸರ ಮೇಲೆ ಅಂಚೆ ಬ್ಯಾಂಕ್‌ನಲ್ಲಿ ಇಡಲಾಗುವ ಇಡಗಂಟಿನ ಮೇಲೆ ಲಭ್ಯವಾಗುವ ಬಡ್ಡಿಯನ್ನು 18 ರಿಂದ 23 ವಯಸ್ಸಿನ ಅವಧಿಯಲ್ಲಿ ಪ್ರತಿ ತಿಂಗಳ ಸ್ಟೈಫಂಡ್ ರೂಪದಲ್ಲಿ ಖರ್ಚಿಗೆ ಹಣ ನೀಡಲಾಗುವುದು ಎಂದು ಹೇಳಿದರು.
23 ವರ್ಷದ ನಂತರ ಮುಂದಿನ ಭವಿಷ್ಯಕ್ಕೆ 10 ಲಕ್ಷ ರೂ. ಆರ್ಥಿಕ ನೆರವು ನೀಡಲಾಗುವುದು. ಇದಲ್ಲದೆ ಸ್ಪಾನ್ಸರ್‌ಶಿಪ್ ಯೋಜನೆಯಡಿ ಮಾಹೆಯಾನ ರೂ. 2 ಸಾವಿರ ಆರ್ಥಿಕ ಸೌಲಭ್ಯ 2021-22ನೇ ಸಾಲಿನಿಂದ ಜಾರಿಗೊಳಿಸಿದ್ದು, 18 ವರ್ಷದೊಳಗಿನ ಮಕ್ಕಳಿಗೆ ಗರಿಷ್ಠ 3 ವರ್ಷ ಅಥವಾ 18 ವರ್ಷದ ವರೆಗೆ (ಇದರಲ್ಲಿ ಯಾವುದು ಮೊದಲು ಅಲ್ಲಿಯ ವರೆಗೆ) ಇದು ಸಿಗಲಿದೆ ಎಂದು ಪಿ.ಎಂ. ಕೇರ್ ಯೋಜನೆಗಳ ಕುರಿತು ವಿವರಿಸಿದರು.
ಇದಕ್ಕೂ ಮುನ್ನ ಕೇಂದ್ರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಸ್ಮೃತಿ ಇರಾನಿ ಅವರು ಮಾತನಾಡಿ, ದೇಶದಲ್ಲಿ ಕೋವಿಡ್‌ನಿಂದ ಹೆತ್ತವರನ್ನು ಕಳೆದಕೊಂಡ 4345 ಮಕ್ಕಳ ರಕ್ಷಣೆಯ ಜವಬ್ದಾರಿ ಸರ್ಕಾರ ವಹಿಸಿಕೊಂಡಿದೆ ಎಂದರು. ಕೋವಿಡ್-19 ಸಾಂಕ್ರಾಮಿಕ ರೋಗದಿಂದ 2022ರ ಮಾರ್ಚ್ 11ರ ನಂತರ ಇಬ್ಬರು ಪೋಷಕರನ್ನು ಅಥವಾ ಉಳಿದ ಪೋಷಕರನ್ನು ಕಾನೂನು ಬದ್ಧ ಮತ್ತು ದತ್ತು ಪೋಷಕರನ್ನು ಕಳೆದುಕೊಂಡಿರುವ 18 ವರ್ಷದೊಳಗಿನ ಮಕ್ಕಳಿಗೆ ಪಾಲನೆ ಮತ್ತು ರಕ್ಷಣೆ ಒಳಗೊಂಡಂತೆ ಅವರ ಆರೋಗ್ಯ ವಿಮೆ, ಶಿಕ್ಷಣ ಮತ್ತು ಸಮಾಜದಲ್ಲಿ ಸ್ವಾವಲಂಬಿಗಳಾಗಿ ಜೀವನ ನಿರ್ವಹಿಸಲು ಅನುವಾಗುವಂತೆ ತಕ್ಷಣ ನೆರವು ಜೊತೆಗೆ ಪ್ರತಿ ಮಗುವಿಗೆ 23 ವರ್ಷ ತುಂಬಿದ ನಂತರ ತಲಾ ರೂ. 10 ಲಕ್ಷಗಳನ್ನು ನೀಡಲು ಪ್ರಧಾನ ಮಂತ್ರಿಗಳು “ಪಿ.ಎಂ. ಕೇರ್ ಫಾರ್ ಚಿಲ್ಡ್ರನ್” ಎಂಬ ಹೊಸ ಯೋಜನೆ ಘೋಷಿಸಿರುತ್ತಾರೆ.
ಅದರಂತೆಯೇ ಕೋವಿಡ್-19 ಸಾಂಕ್ರಾಮಿಕದಿಂದ ಪೋಷಕರಿಬ್ಬರನ್ನು ಕಳೆದುಕೊಂಡಂಥ ಮಕ್ಕಳಿಗೆ ಕೇಂದ್ರ ಸರ್ಕಾರದ “ಪಿ.ಎಂ. ಕೇರ್ಸ್ ಫಾರ್ ಚಿಲ್ಡ್ರನ್” ಯೋಜನೆಯನ್ನು ರಾಜ್ಯದಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ. ಬಳ್ಳಾರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಿಪಂ ಸಿಇಒ ಜೆ. ಲಿಂಗಮೂರ್ತಿ 5 ಮಕ್ಕಳಿಗೆ ಕಿಟ್ ವಿತರಿಸಿದರು.
ಈ ಕಿಟ್‌ನಲ್ಲಿ ಪಿ.ಎಂ. ಕೇರ್ಸ ಪೋಸ್ಟ್ ಆಫೀಸ್ ಪಾಸ್ ಬುಕ್, ಹೆಲ್ತ್‌ಕಾರ್ಡ್ (ರೂ.5 ಲಕ್ಷ ಸೌಲಭ್ಯವುಳ್ಳ), ಸ್ನೇಹ ಪತ್ರ ಮತ್ತು ಪ್ರಶಂಸೆ ಪತ್ರಗಳನ್ನು ಒಳಗೊಂಡಿದೆ. ಈ ಸಂದರ್ಭದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕರಾದ ನಾಗರಾಜ, ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರಾದ ಎಚ್.ಸಿ. ರಾಘವೇಂದ್ರ, ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷರಾದ ವಿಜಯಲಕ್ಷ್ಮೀ ಮೈದೂರು, ಬಾಲ ನ್ಯಾಯ ಮಂಡಳಿಯ ಸದಸ್ಯರುಗಳಾದ ಪುಷ್ಪಲತಾ, ಮುನಿರಾಜು, ಪ್ರಧಾನ ಅಂಚೆ ಪಾಲಕರಾದ ಬಿ.ನಾಗರಾಜ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ರಕ್ಷಣಾಧಿಕಾರಿ ರಾಜಾನಾಯ್ಕ, ಮಕ್ಕಳ ರಕ್ಷಣಾಧಿಕಾರಿ ಚನ್ನಬಸಪ್ಪ ಪಾಟೀಲ, ಎಲ್‌ಪಿಒ ಈಶ್ವರರಾವ್, ಘಟಕದ ಸಿಬ್ಬಂದಿಗಳಾದ ಹೊನ್ನರಪ್ಪ, ರವಿಕುಮಾರ್ ಇದ್ದರು.