ಅರಸೀಕೆರೆ: ದೇಶದೆಲ್ಲೆಡೆ ವ್ಯಾಪಕವಾಗಿ ಹರಡುತ್ತಿರುವ ಕೋವಿಡ್ ಸೋಂಕು ನಿಯಂತ್ರಿಸಲು ಸರ್ಕಾರ ಸತತ ಪ್ರಯತ್ನ ನಡೆಸುತ್ತಿದೆ. ಸಾರ್ವಜನಿಕರ ಈ ಬಗ್ಗೆ ಭಯ ಪಡುವ ಅಗತ್ಯವಿಲ್ಲ, ಕಡ್ಡಾಯ ವಾಗಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂದು ತಾಲೂಕಿನ ಯಾದಾಪುರ ಆಯುಷ್ಯ ಆಸ್ಪತ್ರೆಯ ವೈದ್ಯ ಡಾ.ರಮೇಶ್ ತಿಳಿಸಿದರು.
ಜಿಲ್ಲಾ ಆಯುಷ್ಯ ಮತ್ತು ತಾಲೂಕು ಆರೋಗ್ಯ ಇಲಾಖೆ ನಗರದ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನಾಕಚೇರಿಯಲ್ಲಿ ಮಂಗಳವಾರ ಏರ್ಪಡಿಸಿದ್ದ ರೋಗ ನಿರೋಧಕ ಮಾತ್ರೆ ಗಳ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಭಾರತ ಸೇರಿದಂತೆ ವಿಶ್ವದ ಅನೇಕ ರಾಷ್ಟ್ರ ಗಳಲ್ಲಿ ಕಂಡು ಬಂದಿರುವ ಕೋವಿಡ್-19 ನಿಯಂತ್ರಿಸಲು ಜನರಲ್ಲಿ ಜಾಗೃತಿ ಮೂಡಿಸಬೇಕಾಗಿದೆ, ಕಡ್ಡಾಯವಾಗಿ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರಕಾಯ್ದುಕೊಳ್ಳುವುದು ಹಾಗೂ ರೋಗ ನಿರೋಧಕ ಶಕ್ತಿ ಹೆಚ್ಚಿಸುವಂತಹ ಆಹಾರ ಪದಾರ್ಥಗಳ ಸೇವನೆಯನ್ನು ಮಾಡಬೇಕಾಗಿದೆ ಎಂದು ಹೇಳಿದರು.
ಒಂದು ವೇಳೆ ಯಾರಿಗಾದರೂ ಕೋವಿಡ್ ಸೋಂಕು ಕಂಡು ಬಂದಲ್ಲಿ ಆತಂಕಕ್ಕೆ ಒಳಗಾಗದೆ ಸೂಕ್ತ ಚಿಕಿತ್ಸೆಯನ್ನು ಪಡೆದುಕೊಂಡರೇ ಸಂಪೂರ್ಣವಾಗಿ ಚೇತರಿಸಿಕೊಳ್ಳಲು ಸಾಧ್ಯವಾಗುತ್ತದೆ. ಆದ್ದರಿಂದ ಪ್ರತಿನಿತ್ಯ ಸಾರ್ವಜನಿಕ ವಲಯದಲ್ಲಿ ಕೆಲಸ ಮಾಡುವ ತಮ್ಮ ಸಂಸ್ಥೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗಕ್ಕೆ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಆಯುರ್ವೇದಿಕ್ ಮಾತ್ರೆ ಗಳನ್ನು ನೀಡಲಾಗುತ್ತಿದೆ ಎಂದರು.
ಮಾತ್ರೆಗಳನ್ನು ನಿಯಮಿತವಾಗಿ ಸೇವಿಸುವ ಮೂಲಕ ಸಂಸ್ಥೆಯ ಸಿಬ್ಬಂದಿ, ಸದಸ್ಯರು ಆರೋಗ್ಯವಂತರಾಗಿ ಜನರ ಸೇವೆಯಲ್ಲಿ ತೊಡಗುವಂತೆ ವೈದ್ಯರು ಮನವಿ ಮಾಡಿದರು. ಮುನ್ನೆಚ್ಚರಿಕೆ ಕ್ರಮಗಳನ್ನು ನಾವುಗಳು ಕಡ್ಡಾಯವಾಗಿ ಪಾಲಿಸುವ ಮೂಲಕ ಕೋವಿಡ್ ವೈರಸ್ ಹರಡದಂತೆ ನೋಡಿಕೊಳ್ಳಲು ಸಾಧ್ಯ ಎಂದ ಅವರು, ಸೋಂಕಿನ ಲಕ್ಷಣಗಳ ಬಗ್ಗೆ ಮಾಹಿತಿ ನೀಡಿ, ಕೋವಿಡ್ ಸೋಂಕಿತರು ಅನುಸ ರಿಸಬೇಕಾದ ಕ್ರಮಗಳ ಬಗ್ಗೆ ಸಂಸ್ಥೆಯ ಅಧಿಕಾರಿಗಳು, ಸಿಬ್ಬಂದಿಗೆ ಹೆಚ್ಚಿನ ಮಾಹಿತಿ ನೀಡಿದರು. ಶ್ರೀಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಯೋಜನಾಧಿಕಾರಿ ಕೆ. ವಿನಾಯಕ ಪೈ ಮಾತನಾಡಿ, ಆರೋಗ್ಯ ಇಲಾಖೆ ಹಾಗೂ ಆಯುಷ್ಯ ಇಲಾಖೆ ವತಿಯಿಂದ ಉಚಿತವಾಗಿ ನಮ್ಮ ಸಂಸ್ಥೆ ಅಧಿಕಾರಿಗಳುಹಾಗೂಸಿಬ್ಬಂದಿಗೆ ರೋಗ ನಿರೋಧಕ ಶಕ್ತಿ ಹೆಚ್ಚಿಸುವಂತಹ ಆಯರ್ವೇದಿಕ್ ಮಾತ್ರೆಗಳನ್ನು ನೀಡುವುದರ ಜೊತೆಗೆ ಕೊರೊನಾ ಸೋಂಕಿನ ಬಗ್ಗೆ ಹೆಚ್ಚಿನ ಮಾಹಿತಿ ನೀಡಿದ್ದಾರೆ. ಇದರಿಂದ ತಾವುಗಳು ಮುಂದಿನ ದಿನಗಳಲ್ಲಿ ಆತಂಕ ವಿಲ್ಲದೆ ಸಾರ್ವಜನಿಕ ಸೇವೆಯಲ್ಲಿ ತೊಡಗಿಕೊಳ್ಳಲು ಅನುಕೂಲವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಸಂಸ್ಥೆ ವ್ಯವಸ್ಥಾಪಕರಾದ ಗುರುಮೂರ್ತಿ, ಕೃಷಿ ವಿಭಾಗದ ಅಧಿಕಾರಿ ಅನಿಲ್, ಮೇಲ್ವಿಚಾರಕರಾದ ಯಶೋದಾ, ಸೇವಾ ಪ್ರತಿನಿಧಿಗಳು ಹಾಜರಿದ್ದರು.