ತುಮಕೂರು: ಪ್ರತಿಯೊಬ್ಬರ ಮಾನಸಿಕ ನೆಮ್ಮದಿಗೆ ಶ್ರದ್ಧಾ ಕೇಂದ್ರಗಳು ಮುಖ್ಯ. ಅಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಬೇಕಾಗಿರುವುದು ಪ್ರತಿಯೊಬ್ಬರ ಕರ್ತವ್ಯ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಿ.ಸಿ.ಟ್ರಸ್ಟ್ ಜಿಲ್ಲಾ ನಿರ್ದೇಶಕಿ ದಯಾಶೀಲಾ ತಿಳಿಸಿದರು. ನಗರದ ಚಿಕ್ಕಪೇಟೆಯ ಹಿರೇಮಠದ ಆವರಣದಲ್ಲಿ ನಡೆದ ಧಾರ್ಮಿಕ ಕೇಂದ್ರಗಳಿಗೆ ತ್ಯಾಜ್ಯ ವಿಲೇವಾರಿ ಬುಟ್ಟಿ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿ, ಪ್ರತಿಯೊಬ್ಬ ವ್ಯಕ್ತಿಯ ಮನಸ್ಸಿಗೆ ಸಂತಸ ಉಂಟು ಮಾಡುವ ಧಾರ್ಮಿಕ ಕೇಂದ್ರಗಳು ಶುದ್ಧವಾಗಿರಬೇಕು. ಅಲ್ಲಿಯ ಪರಿಸರ ಉತ್ತಮವಾಗಿರಬೇಕು ಎಂದು ಎಂದರು.
ಸ್ವಚ್ಛತೆಗೆ ಒತ್ತು: ಶ್ರದ್ಧಾ ಕೇಂದ್ರಗಳ ಸುತ್ತ ಪರಿಸರ ಸ್ವಚ್ಛತೆಗೆ ಹೆಚ್ಚು ಒತ್ತು ನೀಡಿರುವ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ. ವೀರೇಂದ್ರ ಹೆಗಡೆಯವರು ರಾಜ್ಯದ ದೇವಾಲಯ, ಚರ್ಚ್, ಮಸೀದಿ ಸುತ್ತಲ ಸ್ವಚ್ಛತೆಗೆ ಒತ್ತು ನೀಡಿದ್ದಾರೆ. ಜಿಲ್ಲೆಯಲ್ಲಿ ಈಗಾಗಲೇ 724 ದೇವಸ್ಥಾನಗಳಲ್ಲಿ ಸ್ವಚ್ಛತಾ ಅಭಿಯಾನ ನಡೆಸಲಾಗಿದೆ. ಶ್ರದ್ಧಾ ಕೇಂದ್ರಗಳ ಸ್ವಚ್ಛತಾ ಅಭಿಯಾನದಲ್ಲಿ ಸುಮಾರು 12,000ರಿಂದ 15,000 ಸ್ವಚ್ಛತಾ ಅಭಿಯಾನದ ಕರಪತ್ರ ಹಂಚುವ ಮೂಲಕ ನಾಗರಿಕರಲ್ಲಿ ಶ್ರದ್ಧಾಕೇಂದ್ರಗಳ ಸ್ವಚ್ಛತಾ ಅಭಿಯಾನದ ಬಗ್ಗೆ ಅರಿವು ಮೂಡಿಸಲಾಗಿದೆ. ಅಭಿಯಾನಗಳಲ್ಲಿ ಸುಮಾರು 1,3489 ಸದಸ್ಯರು ಭಾಗವಹಿಸಿ ದೇವಾಲಯಗಳ ಸ್ವಚ್ಛತೆಗೆ ಒತ್ತು ನೀಡಲಾಗಿದೆ ಎಂದರು.
ಸ್ವಚ್ಛತಾ ಅಭಿಯಾನ: ತುಮಕೂರು ಜಿಲ್ಲೆಯಲ್ಲಿ 10 ತಾಲೂಕುಗಳಿದ್ದು, ನಮ್ಮ ಕಾರ್ಯ ವ್ಯಾಪ್ತಿಗೆ ಅನುಕೂಲವಾಗುವಂತೆ 5 ತಾಲೂಕು ಬೇರ್ಪಡಿಸಿದ್ದು, ಜಿಲ್ಲಾ ವ್ಯಾಪ್ತಿಯಲ್ಲಿ ಬರುವ ಐದು ತಾಲೂಕುಗಳ 675 ಕೇಂದ್ರಗಳಿಗೆ 1,350 ತ್ಯಾಜ್ಯ ವಿಲೇವಾರಿ ಬುಟ್ಟಿ ವಿತರಿಸಲಾಗುತ್ತಿದೆ. ಸ್ವಚ್ಛ ಭಾರತದ ಕನಸು ಕಂಡಿರುವ ಪೂಜ್ಯರ ಆಶಯದಂತೆ ಪ್ರತಿ ವರ್ಷದ ಜ.13ರಂದು, ಆಗಸ್ಟ್ 15 ಪೂರ್ವದಲ್ಲಿ ರಾಜ್ಯಾದ್ಯಂತ ಶ್ರದ್ಧಾಕೇಂದ್ರಗಳು ಅಂದರೆ ದೇವಸ್ಥಾನ, ಮಸೀದಿ, ಚರ್ಚ್ ಹಾಗೂ ಸಾರ್ವಜನಿಕ ಪ್ರದೇಶಗಳ ಸ್ವಚ್ಛತಾ ಅಭಿಯಾನ ಕೈಗೊಂಡು ಜನರಲ್ಲಿ ಅರಿವು ಮೂಡಿಸಲಾಗುತ್ತಿದೆ ಎಂದರು.
ಪ್ರತಿಯೊಬ್ಬರೂ ಸ್ವಚ್ಛತೆಗೆ ಆದ್ಯತೆ ನೀಡಬೇಕು. ತಮ್ಮ ಮನೆಯ ಸುತ್ತ-ಮುತ್ತಲೂ ಪರಿಸರ ಸ್ವಚ್ಛವಾಗಿಟ್ಟುಕೊಂಡು ಹಸಿಕಸ, ಒಣಕಸ ಬೇರ್ಪಡಿಸಿ ಕಸದ ವಾಹನಗಳಿಗೆ ನೀಡಬೇಕು. ರಸ್ತೆ ಬದಿಗಳಲ್ಲಿ ಎಸೆಯಬಾರದು ಎಂದು ಮನವಿ ಮಾಡಿದರು. ಹಿರೇಮಠಾಧ್ಯಕ್ಷ ಡಾ. ಶಿವಾನಂದ ಶಿವಾಚಾರ್ಯ ಸ್ವಾಮಿಜಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕಾರ್ಯಕ್ರಮದಲ್ಲಿ ಕಸದಿಂದ ಸ್ವಚ್ಛತೆಯೆಡೆಗೆ ಹೋಗುವ ಕೆಲಸ ಮಾಡಬೇಕಾಗಿದೆ. ದೇಶ ಸ್ವಚ್ಛವಾಗಿದ್ದರೆ ಜನರ ಸ್ವಾಸ್ಥ್ಯ ಚೆನ್ನಾಗಿರುತ್ತದೆ. ಸ್ವಚ್ಛ ಭಾರತದ ಕನಸನ್ನು 25 ವರ್ಷಗಳಿಂದ ನನಸು ಮಾಡಲು ಡಾ. ಡಿ.ವೀರೇಂದ್ರ ಹೆಗ್ಗಡೆ ಪ್ರಯತ್ನಿಸುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.
ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷ ಪ್ರಸ್ ರಾಜಣ್ಣ, ನಿಕಟಪೂರ್ವ ಅಧ್ಯಕ್ಷ ಡಾ. ಸಂಜಯ್ ನಾಯ್ಕ, ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯರಾದ ಕಾಮರಾಜು, ಗಣೇಶ್ ಪ್ರಸಾದ್, ವಿಜಯಭಾಸ್ಕರ್, ಪ್ರೇಮ ಹೆಗ್ಗಡೆ, ಸಂಚಾರಿ ಪೊಲೀಸ್ ಇನ್ಸ್‌ಪೆಕ್ಟರ್ ವಿಜಯಲಕ್ಷಿ, ತಾಲೂಕಿನ ಯೋಜನಾಧಿಕಾರಿ ಚೆನ್ನಕೇಶವ, ವಲಯ ಮೇಲ್ವಿಚಾರಕ ಕೇಶವಮೂರ್ತಿ ಬೆಳ್ಳಾವಿ, ನವೀನ, ತಾಲೂಕಿನ ಶ್ರದ್ಧಾಕೇಂದ್ರ ಸ್ವಚ್ಛತೆ ಆಗಿರುವ ದೇವಸ್ಥಾನ ಸಮಿತಿ, ಅರ್ಚಕರು ಹಾಗೂ ಸ್ಥಳೀಯ ಸ್ವ-ಸಹಾಯ ಸಂಘದ ಸದಸ್ಯರು ಭಾಗವಹಿಸಿದ್ದರು.
ತ್ಯಾಜ್ಯಾಸುರನ ಹೊಡೆದು ಹಾಕಬೇಕಿದೆ – ಸ್ವಾಮೀಜಿ: ತ್ಯಾಜ್ಯಾಸುರನನ್ನು ಹೊಡೆದು ಹಾಕುವ ಕೆಲಸ ಮಾಡಬೇಕಾಗಿದೆ. ದೇವಸ್ಥಾನಗಳಲ್ಲಿ ಬರುವ ಭಕ್ತರಿಗೆ ದೇವಸ್ಥಾನದ ಅರ್ಚಕರು ಸ್ವಚ್ಛತೆ ಅರಿವು ಮೂಡಿಸುವ ಹಾಗೂ ಕಸದ ಬುಟ್ಟಿ ಬಳಕೆ ಮಾಡಬೇಕೆಂದು ಹೇಳಬೇಕು. ತುಮಕೂರು ಸ್ಮಾರ್ಟ್‌ಸಿಟಿಯನ್ನು ಸ್ವಚ್ಛ ಸಿಟಿಯನ್ನಾಗಿ ಮಾಡಲು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮಾಡುತ್ತಿರುವ ಕೆಲಸವನ್ನು ಹಿರೇಮಠಾಧ್ಯಕ್ಷ ಡಾ.ಶಿವಾನಂದ ಶಿವಾಚಾರ್ಯ ಸ್ವಾಮಿಜಿ ಪ್ರಶಂಶಿಸಿದರು.