ಹೊಸದಿಲ್ಲಿ : ಇರಾಕ್‌ನ ಮೊಸೂಲ್‌ನಲ್ಲಿ 2014ರಿಂದ ನಾಪತ್ತೆಯಾಗಿದ್ದ 39 ಭಾರತೀಯರು ಐಸಿಸ್ ಉಗ್ರರಿಂದ ಹತರಾಗಿದ್ದುದನ್ನು ನಿನ್ನೆ ವಿದೇಶ ವ್ಯವಹಾರಗಳ ಸಚಿವೆ ಸುಶ್ಮಾ ಸ್ವರಾಜ್ ದೃಢಪಡಿಸಿರುವುದನ್ನು ಅನುಸರಿಸಿ ಹತ ಭಾರತೀಯರ ಕುಟುಂಬದವರು ತಮ್ಮವರ ಗುರುತು ಪತ್ತೆಯ ಡಿಎನ್‌ಎ ವರದಿಯನ್ನು ಒದಗಿಸುವಂತೆ ಸರಕಾರವನ್ನು ಆಗ್ರಹಿಸಿದ್ದಾರೆ.
“ನನ್ನ ಸಹೋದರ 2012ರಲ್ಲಿ ಇರಾಕ್ ಗೆ ಹೋಗಿದ್ದ; ಅಲ್ಲಿ ಬಡಗಿಯಾಗಿ ದುಡಿಯುತ್ತಿದ್ದ. ಆತ ಬದುಕಿದ್ದಾನೋ ಸತ್ತಿದ್ದಾನೋ ಎಂಬುದನ್ನು ದೃಢಪಡಿಸುವಂತೆ ನಾವು ಸರಕಾರವನ್ನು ಆಗ್ರಹಿಸಿದ್ದೆವು. ಈಗ ಸರಕಾರ ನಮಗೆ ನನ್ನ ಸಹೋದರ ಡಿಎನ್‌ಎ ಪರೀಕ್ಷಾ ವರದಿಯನ್ನು ಕೊಡಿಸುವಂತೆ ಕೇಳಿಕೊಂಡಿದ್ದೇವೆ’ ಎಂದು ಮೊಸೂಲ್‌ನಲ್ಲಿ ಐಸಿಸ್ ಉಗ್ರರಿಂದ ಹತರಾಗಿದ್ದ 39 ಭಾರತೀಯರಲ್ಲಿ ಒಬ್ಬನಾದ ಸಗಾನಂದಲಾಲ್‌ನ ಸಹೋದರ ಮಾಲ್ಕಿತ್ ರಾಮ್ ಹೇಳಿದ್ದಾರೆ.
ಇದೇ 46ರ ಹರಯದ ಗೋಬಿಂದರ್ ಸಿಂಗ್ ಅವರ ಡಿಎನ್‌ಎ ವರದಿ ಕೊಡುವಂತೆ ಆತನ ಕುಟುಂಬದವರು ಸರಕಾರವನ್ನು ಆಗ್ರಹಿಸಿದ್ದಾರೆ.
ಹತ ಭಾರತೀಯ ಕಾರ್ಮಿಕರ ಅನೇಕ ಸಂಬಂಧಿಕರು ತಮ್ಮ ಬಂಧು ಇರಾಕ್‌ನ ಮೊಸೂಲ್‌ನಲ್ಲಿ ಐಸಿಸ್ ಉಗ್ರರಿಂದ ಹತರಾಗಿರುವುದನ್ನು ಸರಕಾರದ ಯಾವುದೇ ಅಧಿಕಾರಿಗಳು ನಮಗೆ ಇಷ್ಟು ವರ್ಷ ಕಾಲವೂ ತಿಳಿಸಿಲ್ಲ ಎಂದು ದುಃಖೀಸಿದ್ದಾರೆ.
“ನಾವು ಕೇಂದ್ರ ಸಚಿವರನ್ನು ಕನಿಷ್ಠ 11 – 12 ಬಾರಿ ಸಂಪರ್ಕಿಸಿದ್ದೆವು. ಇರಾಕ್‌ನಲ್ಲಿ ನಾಪತ್ತೆಯಾಗಿರುವ ಭಾರತೀಯರು ಜೀವಂತ ಇದ್ದಾರೆ ಎಂದು ನಮಗವರು ಹೇಳುತ್ತಿದ್ದರು. ಇರಾಕ್‌ನ ಮೊಸೂಲ್‌ನಿಂದ ಬಚಾವಾಗಿ ಬಂದ ಏಕೈಕ ವ್ಯಕ್ತಿ ಹರ್ಜಿತ್ ಮಸೀಹ್ ಒಬ್ಬ ಸುಳ್ಳುಗಾರ ಎಂದು ಸರಕಾರ ಹೇಳುತ್ತದೆ. ಆದರೆ ಇಷ್ಟು ಸಮಯದ ಬಳಿಕ ಈಗ ಇದ್ದಕ್ಕಿದ್ದಂತೆಯೇ 39 ಭಾರತೀಯರು ಐಸಿಸ್ ಉಗ್ರರಿಂದ ಇರಾಕ್‌ನಲ್ಲಿ ಹತರಾದರೆಂದು ಸರಕಾರ ಹೇಗೆ ಹೇಳುತ್ತದೆ?’ ಎಂದು 31 ವರ್ಷದ ತನ್ನ ಸಹೋದರ ನಿಶಾನ್‌ನನ್ನು ಕಳೆದುಕೊಂಡಿರುವ ಆತನ ಸಹೋದರ ಶರವಣ ದುಃಖತಪ್ತರಾಗಿ ಹೇಳುತ್ತಾರೆ.