ಹುಬ್ಬಳ್ಳಿ: ಹಬ್ಬ ಹಾಗೂ ಸಂಪ್ರದಾಯ ಆಚರಿಸಿಕೊಂಡು ಬರುವುದು ಅವರವರ ನಂಬಿಕೆ, ವಿಶ್ವಾಸಕ್ಕೆ ಬಿಟ್ಟ ವಿಷಯ. ಆದರೆ, ಬುದ್ಧಿಜೀವಿಗಳು ಎಂದೆನಿಸಿಕೊಂಡವರು ಪ್ರತಿಯೊಂದಕ್ಕೂ ಅಪಹಾಸ್ಯ, ಟೀಕೆ ಮಾಡುತ್ತಿರುವುದರಿಂದ ವಿಕೃತ ಜಾತ್ಯತೀತತೆ ದೊಡ್ಡ ಸಮಸ್ಯೆ ಆಗುತ್ತಿದೆ ಎಂದು ಸಂಸದ ಪ್ರಹ್ಲಾದ ಜೋಶಿ ಖೇದ ವ್ಯಕ್ತಪಡಿಸಿದರು.
ಗೋಕುಲ ರಸ್ತೆಯ ಚವ್ಹಾಣ ಗ್ರೀನ್ ಗಾರ್ಡನ್‌ದಲ್ಲಿ ವಿಶ್ವಧರ್ಮ ಟ್ರಸ್ಟ್‌ನ ಅಂಗಸಂಸ್ಥೆಯಾದ ಅಖೀಲ ಕರ್ನಾಟಕ ಸತ್ಸಂಗ ಭಜನ ಮಹಾಮಂಡಲಿ ಸಭಾ ಉತ್ತರ ವಲಯ ಭಜನೋತ್ಸವ ಮೇಳ-2017ರ ಅಂಗವಾಗಿ ಆಯೋಜಿಸಿದ್ದ ಉತ್ತರ ವಲಯ ಮಟ್ಟದ ಭಜನಾ ಸ್ಪರ್ಧೆಗಳ ಬಹುಮಾನ ವಿತರಣೆ ಹಾಗೂ ಅಭಿವಂದನಾ ಸಮಾರಂಭದಲ್ಲಿ ವಿಜೇತ ಭಜನಾ ತಂಡಗಳಿಗೆ ಬಹುಮಾನ ವಿತರಿಸಿ ಅವರು ಮಾತನಾಡಿದರು.
ವಿಶ್ವಾಸದೊಂದಿಗೆ ಆಚರಣೆ ಮಾಡಿದರೆ ಅದರಿಂದ ಸಂತೃಪ್ತಿ, ದೈವ ನಂಬಿಕೆ ಹುಟ್ಟಿಕೊಳ್ಳುತ್ತದೆ. ಇತ್ತೀಚೆಗೆ ಹಿಂದೂ ಸಂಸ್ಕೃತಿ ಹಾಗೂ ಹಬ್ಬಗಳ ಆಚರಣೆ, ದೇವರಿಗೆ ಬಲಿ ಕೊಡುವುದು ಸೇರಿದಂತೆ ಎಲ್ಲವನ್ನೂ ವಿಡಂಬನೆ ಮಾಡುತ್ತಿರುವುದು ಸರಿಯಲ್ಲ. ಭಜನೋತ್ಸವ ಕಾರ್ಯಕ್ರಮ ನಮ್ಮ ಸಂಸ್ಕೃತಿ, ಪರಂಪರೆಯಲ್ಲಿ ವಿಶಿಷ್ಟವಾಗಿದೆ ಎಂದರು.
ಉತ್ತರ ಕರ್ನಾಟಕ ವಲಯ ಸಮಿತಿ ಅಧ್ಯಕ್ಷೆ ಭಾರತಿ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ವಿಶ್ವಧರ್ಮ ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷ ಬ್ರಹ್ಮತೇಜ ವೆಂಕಟಸುಬ್ಬಯ್ಯ, ಸಮಿತಿಯ ಕಾರ್ಯಾಧ್ಯಕ್ಷೆ ಸಂಧ್ಯಾ ದೀಕ್ಷಿತ, ಗೌರವಾಧ್ಯಕ್ಷ ಮುಕುಂದ ನಾತು, ಗೋವಿಂದ ಜೋಶಿ, ವನಜಾ ಕಾಥವಟೆ, ಪದ್ಮಾ ಓಕ್, ಪಾಲಿಕೆ ಸದಸ್ಯರಾದ ಸುಧೀರ ಸರಾಫ, ಶಿವಾನಂದ ಮುತ್ತಣ್ಣವರ, ಶಿವು ಮೆಣಸಿನಕಾಯಿ, ಶಂಕರ ಶೇಳಕೆ ಮೊದಲಾದವರಿದ್ದರು.
ಇದೇ ಸಂದರ್ಭದಲ್ಲಿ ಅಪ್ಪಾರಾವ ಚವ್ಹಾಣ, ಶ್ರೀಪಾದ ರಾಣೆ, ವಸಂತ ನಾಡಜೋಶಿ, ಎನ್.ಎಚ್. ನಿಡಗುಂದಿ, ವಿನಾಯಕ ಯಾದವಾಡ, ಶಂಕರ ಪಾಟೀಲ ಇನ್ನಿತರರನ್ನು ಸನ್ಮಾನಿಸಲಾಯಿತು.ಉಮಾ ಶೆಟ್ಟಿ ಸ್ವಾಗತಿಸಿದರು. ಗೋಪಾಲ ಕುಲಕರ್ಣಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವೀಣಾ ಪಾಟೀಲ ನಿರೂಪಿಸಿದರು.