Advertisement
ಜು. 31ರಂದು ಮೀನುಗಾರಿಕೆ ನಿಷೇಧ ಅವಧಿ ಮುಗಿದ ಬಳಿಕ ಆಳಸಮುದ್ರ ಸಹಿತ ಎಲ್ಲ ವಿಧದ ಬೋಟುಗಳು ಉತ್ಸಾಹದಿಂದ ಸಮುದ್ರಕ್ಕೆ ಇಳಿದಿದ್ದವು. ಆದರೆ ಶೇ. 95ರಷ್ಟು ಬೋಟುಗಳಿಗೆ ನಿರೀಕ್ಷಿತ ಪ್ರಮಾಣದಲ್ಲಿ ಮೀನು ಸಿಕ್ಕಿಲ್ಲ.
ಏಷ್ಯಾದಲ್ಲೇ ಅತಿ ದೊಡ್ಡ ಸರ್ವ ಋತು ಬಂದರು ಖ್ಯಾತಿಯ ಮಲ್ಪೆ ಮೀನುಗಾರಿಕೆ ಬಂದರು ಈಗ ಅಕ್ಷರಶಃ ಸ್ತಬ್ಧವಾಗಿದ್ದು, ಅದರ ಪರಿಣಾಮ ಕರಾವಳಿಯ ಆರ್ಥಿಕತೆಯ ಮೇಲೆ ಬೀಳುತ್ತಿದೆ. ಮಲ್ಪೆ ಬಂದರಿನಲ್ಲೇ ದಿನಕ್ಕೆ ಕೋಟ್ಯಂತರ ರೂಪಾಯಿ ವಹಿವಾಟು ನಡೆಯುತ್ತಿದ್ದು, ಸುಮಾರು 50 ಸಾವಿರ ಮಂದಿ ಪ್ರತ್ಯಕ್ಷ – ಪರೋಕ್ಷವಾಗಿ ಮೀನುಗಾರಿಕೆಯನ್ನೇ ಅವಲಂಬಿಸಿಕೊಂಡಿದ್ದಾರೆ. ಕಳೆದ 15 ದಿನಗಳಲ್ಲಿ ನೂರಾರು ಕೋ. ರೂ. ನಷ್ಟ ಅಂದಾಜಿಸಲಾಗಿದೆ. 25 ವರ್ಷಗಳಿಂದ ಋತು ಆರಂಭದಲ್ಲಿ ಮೀನಿನ ಕ್ಷಾಮ ಎದುರಾಗಿಲ್ಲ. ಮಾಹಿತಿ ಪ್ರಕಾರ ಒಂದೆರಡು ದಿನಗಳಲ್ಲಿ ವಾತಾವರಣ ಸಹಜ ಸ್ಥಿತಿಗೆ ಬರಲಿದ್ದು, ಗಣೇಶ ಚತುರ್ಥಿ ಬಳಿಕ ಉತ್ತಮ ಮೀನುಗಾರಿಕೆಯ ನಿರೀಕ್ಷೆ ಇದೆ ಎಂದು ಮಲ್ಪೆ ಮೀನುಗಾರರ ಸಂಘದ ಮಾಜಿ ಅಧ್ಯಕ್ಷ ಕೃಷ್ಣ ಸುವರ್ಣ ತಿಳಿಸಿದ್ದಾರೆ. ಆ. 10ರಿಂದ ಆಳಸಮುದ್ರ ಬೋಟುಗಳು ಹಾಗೂ ಆ. 15ರ ಬಳಿಕ ಪರ್ಸಿನ್ ಸಹಿತ ಇನ್ನಿತರ ಬೋಟುಗಳು ಮೀನುಗಾರಿಕೆಗೆ ತೆರಳಿದ್ದರೂ ಎಲ್ಲರೂ ಬರಿಗೈಯಲ್ಲಿ ಮರಳುತ್ತಿದ್ದಾರೆ. ರವಿವಾರವೂ ಗಾಳಿ ಹಾಗೂ ನೀರಿನ ಒತ್ತಡದಿಂದಾಗಿ ಬಹುತೇಕ ಬೋಟುಗಳು ಮೀನುಗಾರಿಕೆ ಮಾಡಲಾಗದೆ ಕಾರವಾರ ಬಂದರನ್ನು ಪ್ರವೇಶಿಸಿವೆ. ಡೀಸೆಲ್ ಹಾಗೂ ಕಾರ್ಮಿಕರ ಕೂಲಿ ನೀಡಲೂ ತೊಂದರೆಯಾಗುತ್ತಿರುವ ಹಿನ್ನೆಲೆಯಲ್ಲೂ ಬಹುತೇಕ ಮೀನುಗಾರರು ಮೀನುಗಾರಿಕೆ ಸ್ಥಗಿತಗೊಳಿಸಿದ್ದಾರೆ. ಕಳೆದ ವರ್ಷ ಈ ಹೊತ್ತಲ್ಲಿ ಬಂಗುಡೆ, ಬೂತಾಯಿ, ಕ್ಯಾದರ್, ಬೊಂಡಾಸ್, ಅಂಜಲ್, ರಿಬ್ಬನ್‌ಫಿಶ್ ಮೊದಲಾದವು ದೊಡ್ಡ ಪ್ರಮಾಣದಲ್ಲಿ ಸಿಕ್ಕಿವೆ ಎನ್ನುತ್ತಾರೆ ಮೀನುಗಾರ ಸಂಘದ ಮಾಜಿ ಅಧ್ಯಕ್ಷ ಸತೀಶ್ ಕುಂದರ್.
Related Articles
ಮಲ್ಪೆ ಪರ್ಸಿನ್ ಮೀನುಗಾರರಿಗೆ ಮೀನಿನ ಕ್ಷಾಮ, ಹವಾಮಾನ ವೈಪರೀತ್ಯ ನಿವಾರಣೆಗಾಗಿ ಕೊಡವೂರು ಶಂಕರನಾರಾಯಣ, ಉಚ್ಚಿಲ ಮಹಾಲಕ್ಷ್ಮೀ, ಕಾಪು ಮಾರಿಯಮ್ಮ ಬೊಬ್ಬರ್ಯ ದೈವಕ್ಕೆ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದಾರೆ. ಈ ಎಲ್ಲ ದೈವ ದೇವರ ಪ್ರಸಾದವನ್ನು ಶನಿವಾರ ಸಮುದ್ರ ಮಧ್ಯೆ (10 ಮಾರು ಆಳ ದೂರದಲ್ಲಿ) ಎಲ್ಲ ಬೋಟುಗಳನ್ನು ಒಂದೆಡೆ ಸೇರಿಸಿ ಸಾಮೂಹಿಕವಾಗಿ ಪ್ರಾರ್ಥನೆ ನಡೆಸಿ ಪ್ರಸಾದವನ್ನು ಸಮುದ್ರರಾಜನಿಗೆ ಸಮರ್ಪಿಸಲಾಗಿದೆ.
Advertisement
1 ಕೆ.ಜಿ.ಬಂಗುಡೆಗೆ 402 ರೂ.!ಕೆಲವು ಬೋಟುಗಳಿಗೆ ಸಿಗುವ ಅಲ್ಪಸ್ವಲ್ಪ ಮೀನು ಖರೀದಿಗಾಗಿ ವ್ಯಾಪಾರಿಗಳ ನಡುವೆ ಸ್ಪರ್ಧೆ ಏರ್ಪಟ್ಟಿದೆ. ಮೊನ್ನೆ ಪರ್ಸಿನ್ ಬೋಟೊಂದಕ್ಕೆ ಸಿಕ್ಕಿದ್ದ ಬಂಗುಡೆ ಮೀನು ಕೆ.ಜಿ. ಗೆ 402 ರೂ. ಗೆ ಹರಾಜಾಗಿರುವುದು ದಾಖಲೆಯಾಗಿದೆ. ಸಾಮಾನ್ಯವಾಗಿ ಬಂಗುಡೆ ಮೀನು ಕೆ.ಜಿ.ಗೆ 100ರಿಂದ 150 ರೂ. ಗೆ ಮಾರಾಟವಾಗುತ್ತದೆ ಎನ್ನುತ್ತಾರೆ ಕನ್ನಿ ಮೀನುಗಾರ ಸಂಘದ ಅಧ್ಯಕ್ಷ ದಯಾಕರ ವಿ. ಸುವರ್ಣ. ಪ್ರತಿಕೂಲ ವಾತಾವರಣದಿಂದ ಮೀನುಗಾರಿಕೆಯನ್ನು ಆಗಾಗ ನಿಲ್ಲಿಸಬೇಕಾಗುತ್ತದೆ. ಆದರೂ ಕೆಲವು ಬೋಟುಗಳು ಅಪಾಯ ಎದುರಿಸಿ ಆಳ ಸಮುದ್ರದಲ್ಲಿ ಮೀನುಗಾರಿಕೆ ನಡೆಸಿದರೂ ಮೀನು ಸಿಗದೆ ಬರಿಗೈಯಲ್ಲಿ ಮರಳುವಂತಾಗಿದೆ. ಪಶ್ಚಿಮ ಕರಾವಳಿಯಲ್ಲೆಡೆ ಪ್ರತಿಕೂಲ ಗಾಳಿ ಮತ್ತು ಸಮುದ್ರದ ನೀರಿನ ಒತ್ತಡ ಜೋರಾಗಿರುವುದರಿಂದ ಮೀನುಗಾರಿಕೆ ಸಾಧ್ಯವಾಗುತ್ತಿಲ್ಲ.
– ದಯಾನಂದ ಕೆ. ಸುವರ್ಣ, ಅಧ್ಯಕ್ಷರು, ಮಲ್ಪೆ
ಮೀನುಗಾರರ ಸಂಘ ನಟರಾಜ್ ಮಲ್ಪೆ