Advertisement

ಕೆರೆಗಳ ನಿರ್ವಹಣೆ ಇಲ್ಲದೆ ನೀರು ಪೂರೈಕೆಗೆ ಅಡ್ಡಿ

12:23 AM Feb 11, 2020 | Lakshmi GovindaRaj |

ಬೆಂಗಳೂರು: ರಾಜ್ಯದಲ್ಲಿ 35 ಸಾವಿರ ಕೆರೆಗಳಿದ್ದರೂ ನಿರ್ವಹಣೆ ಸಮರ್ಪಕವಾಗಿಲ್ಲದ ಕಾರಣ ಜನರಿಗೆ ಸುಸ್ಥಿರ ಹಾಗೂ ಶುದ್ಧ ಕುಡಿಯುವ ನೀರು ಪೂರೈಸಲು ಸಾಧ್ಯವಾಗುತ್ತಿಲ್ಲ ಎಂದು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಹೇಳಿದರು.

Advertisement

ಮಹಿಳಾ ವಾಣಿಜ್ಯೋದ್ಯಮಿಗಳ ಸಂಘಗಳ ಒಕ್ಕೂಟವು ನಗರದಲ್ಲಿ ಸೋಮವಾರ ಹಮ್ಮಿಕೊಂಡಿದ್ದ “ರಾಷ್ಟ್ರೀಯ ಸುರಕ್ಷಿತ ನೀರು ಮತ್ತು ನೈರ್ಮಲ್ಯ’ ಸಮ್ಮೇಳನದ ಪೂರ್ವಭಾವಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸರ್‌ ಎಂ. ವಿಶ್ವೇಶ್ವರಯ್ಯ ಅವರ ತವರು ಜಿಲ್ಲೆ ಕೋಲಾರದಲ್ಲಿ 2,500 ಕೆರೆಗಳಿವೆ. ಕೆರೆಗಳ ಜಲಾನಯನ ಪ್ರದೇಶ ಒತ್ತುವರಿಯಾಗಿ ನಾಶವಾಗುತ್ತಿದೆ. ಕೆರೆಯಲ್ಲಿ ಹೂಳು ತುಂಬಿವೆ.

ಭೂಮಿಯ ಮೇಲ್ಭಾಗದಲ್ಲಿರುವ ನೀರು ಶುದ್ಧವಾಗಿರುತ್ತದೆ. ಕೊಳವೆ ಬಾವಿಯ ನೀರು ಪರಿಶುದ್ಧವಾಗಿರುವುದಿಲ್ಲ. ಹಾಗಾಗಿ ಜಲಾನಯನ ಪ್ರದೇಶಗಳು ಒತ್ತುವರಿಯಾಗದಂತೆ ಕ್ರಮ ವಹಿಸಬೇಕು ಹಾಗೂ ಹಳ್ಳಗಳನ್ನು ಸ್ವತ್ಛಗೊಳಿಸಬೇಕು ಎಂದು ತಿಳಿಸಿದರು.

ಪ್ರತಿ ಜಿಲ್ಲೆಗೊಂದು ಮಾದರಿ ಗ್ರಾಮವನ್ನು ಆಯ್ಕೆ ಮಾಡಿ ಮಳೆ ನೀರು ಕೊಯ್ಲು ಅಳವಡಿಕೆ, ಬಯಲು ಬಹಿರ್ದೆಸೆ ಮುಕ್ತವಾಗಿಸುವ ಬಗ್ಗೆ ಜಾಗೃತಿ ಮೂಡಿಸಬೇಕು. ಈ ಕಾರ್ಯಕ್ಕೆ ಸರ್ಕಾರದ ಸಹಭಾಗಿತ್ವವಿರಲಿದೆ. ಇಸ್ರೇಲ್‌ನಲ್ಲಿ ಕೇವಲ 50 ಮಿ.ಮೀ. ಮಳೆಯಾದರೂ ನೀರನ್ನು ಸದ್ಬಳಕೆ ಮಾಡಿಕೊಂಡು ತರಕಾರಿ ಬೆಳೆದು ರಫ್ತು ಮಾಡುತ್ತಿದೆ.

ಇಸ್ರೇಲ್‌ನಲ್ಲಿ ಜನಸಂಖ್ಯೆ ಕಡಿಮೆಯಿರುವ ಹಿನ್ನೆಲೆಯಲ್ಲಿ ಹೊರದೇಶಗಳ ನಾಗರಿಕರು ಕೃಷಿ ಕಾರ್ಮಿಕರಾಗಿ ದುಡಿಯುತ್ತಿದ್ದಾರೆ. ರಾಜ್ಯದಲ್ಲಿ ವಾರ್ಷಿಕ 900 ಮಿ.ಮೀ. ಮಳೆಯಾಗುವ ಪ್ರದೇಶದಲ್ಲೂ ಬರದ ಪರಿಸ್ಥಿತಿ ಸೃಷ್ಟಿಯಾಗುತ್ತದೆ ಎಂದು ಹೇಳಿದರು.

Advertisement

ಮನೆ ಮನೆಗೆ ನಲ್ಲಿಗಳ ಮೂಲಕವೇ ನೀರು ಪೂರೈಸಬೇಕು. ಮೀಟರ್‌ ಅಳವಡಿಸಿದಾಗ ಮಾತ್ರ ನೀರನ್ನು ಮಿತವಾಗಿ ಬಳಸುತ್ತಾರೆ. ಕೇಂದ್ರ ಸರ್ಕಾರವು ನೀರಾವರಿ ಹಾಗೂ ಕುಡಿಯುವ ನೀರು ಪೂರೈಕೆಗಾಗಿ 3.68 ಲಕ್ಷ ಕೋಟಿ ರೂ. ಅನುದಾನವನ್ನು ಬಜೆಟ್‌ನಲ್ಲಿ ಕಾಯ್ದಿರಿಸಿದೆ. ಇದರಲ್ಲಿ ರಾಜ್ಯದ ಯೋಜನೆಗಳಿಗೆ ಶೇ. 50ರಷ್ಟು ಅನುದಾನ ಸಿಗಲಿದ್ದು, ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.

ರಾಜ್ಯದಲ್ಲಿ 48 ಲಕ್ಷ ಶೌಚಾಲಯಗಳನ್ನು ನಿರ್ಮಿಸಿದರೂ ಜನ ಅವುಗಳನ್ನು ಪೂರ್ಣ ಪ್ರಮಾಣದಲ್ಲಿ ಬಳಸುತ್ತಿಲ್ಲ. ಸ್ಥಳೀಯ ಜನಪ್ರತಿನಿಧಿಗಳ ಸಹಯೋಗದಲ್ಲಿ ಜನರಲ್ಲಿ ಜಾಗೃತಿ ಮೂಡಿಸಬೇಕು. ಎಲ್ಲರಿಗೂ ಶುದ್ದ ಕುಡಿಯುವ ನೀರು ಹಾಗೂ ನೈರ್ಮಲ್ಯ ಕಾಪಾಡುವತ್ತ ಅರಿವು ಮೂಡಿಸಲು ಶ್ರಮಿಸಬೇಕು ಎಂದು ಹೇಳಿದರು. ವಸತಿ ಸಚಿವ ವಿ.ಸೋಮಣ್ಣ, ನಗರಾಭಿವೃದ್ಧಿ ಇಲಾಖೆ ಪ್ರಧಾನ ಕಾರ್ಯದರ್ಶಿ ಅಂಜುಂ ಪರ್ವೇಜ್‌, ಸಂಸ್ಥೆಯ ಅಧ್ಯಕ್ಷೆ ಐಶ್ಚರ್ಯ ನಂಜಪ್ಪ ಇತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next