ಚಿಕ್ಕಬಳ್ಳಾಪುರ: ತಾಲೂಕಿನ ದಿಬ್ಬೂರು ಗ್ರಾಪಂ ಕೇಂದ್ರ ಸ್ಥಾನದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಸ್ವತ್ಛ ಭಾರತ ಯೋಜನೆಯಡಿ ಮಂಜೂರಾದ ಸಮುದಾಯ ಶೌಚಾಲಯ ನಿರ್ಮಿಸಲು ಅಧಿಕಾರಿಗಳೇ ನಿರ್ಲಕ್ಷ್ಯ ವಹಿಸಿ ಕಾಮಗಾರಿಗೆ ಅಡ್ಡಗಾಲು ಆಗಿದ್ದಾರೆ ಎಂದು ಆರೋಪಿಸಿ ಸಮತಾ ಸೈನಿಕ ದಳದ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿದರು.
ಇಬ್ಬರು ಸದಸ್ಯರು ವಿರೋಧ: ತಾಲೂಕಿನ ದಿಬ್ಬೂರು ಗ್ರಾಪಂನಲ್ಲಿ ಒಟ್ಟು 16 ಮಂದಿ ಸದಸ್ಯರಿದ್ದು, ಇದರಲ್ಲಿ 14 ಮಂದಿ ಸದಸ್ಯರು ಗ್ರಾಪಂ ಕಚೇರಿ ಪಕ್ಕದಲ್ಲಿಯೇ ಇರುವ ಸಾರ್ವಜನಿಕ ಸ್ಥಳದಲ್ಲಿ ಸಮುದಾಯ ಶೌಚಾಲಯ ನಿರ್ಮಾಣ ಮಾಡಲು ಒಪ್ಪಿ ಸರ್ವ ಸದಸ್ಯರ ಸಭೆಯಲ್ಲಿ ತೀರ್ಮಾನಿಸಿದ್ದು, ಇಬ್ಬರು ಸದಸ್ಯರು ಮಾತ್ರ ವಿರೋಧ ವ್ಯಕ್ತಪಡಿಸಿದ್ದಾರೆ. ವಿರೋಧ ವ್ಯಕ್ತಪಡಿಸಿರುವ ಸದಸ್ಯರು ತಾಪಂಗೆ ಪತ್ರ ಬರೆದು ಶೌಚಾಲಯ ನಿರ್ಮಿಸದಂತೆ ಮನವಿ ಮಾಡಿದ್ದು, ಇದನ್ನು ಬೆಂಬಲಿಸಿ ಅಧಿಕಾರಿಗಳು ವರ್ತಿಸುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದು ಪ್ರತಿಭಟನಕಾರರು ಆರೋಪಿಸಿದರು.
ಆದೇಶ ಉಲ್ಲಂಘನೆ ಆರೋಪ: ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ತಾಪಂ ಸದಸ್ಯ ಸುಬ್ಬರಾಯಪ್ಪ, ದಿಬ್ಬೂರು ಗ್ರಾಪಂ ಸುಮಾರು 20 ಕ್ಕೂ ಅಧಿಕ ಹಳ್ಳಿಗಳ ಕೇಂದ್ರ ಸ್ಥಾನವಾಗಿದೆ. ಸಾರ್ವಜನಿಕ ಶೌಚಾಲಯವಿಲ್ಲದೆ, ನಾನಾ ಕೆಲಸಗಳಿಗಾಗಿ ಬರುವ ಮಹಿಳೆಯರೂ ಸೇರಿದಂತೆ ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದರು. ಹೀಗಾಗಿ ಸ್ವತ್ಛ ಭಾರತ್ ಮಿಷನ್‌ನಡಿ ಸಾರ್ವಜನಿಕ ಸ್ಥಳದಲ್ಲಿ ಸಮುದಾಯ ಶೌಚಾಲಯ ನಿರ್ಮಿಸಲು ಹಿಂದಿನ ಜಿಲ್ಲಾಧಿಕಾರಿ ಆದೇಶ ನೀಡಿದರೂ ಅಧಿಕಾರಿಗಳು ಆದೇಶವನ್ನೇ ಉಲ್ಲಂ ಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಶೌಚಾಲಯ ಕಾಮಗಾರಿಗೆ ಅಡ್ಡಿ: ದಿಬ್ಬೂರು ಗ್ರಾಪಂ ಉಪಾಧ್ಯಕ್ಷ ಮಂಜುನಾಥ್ ಮಾತನಾಡಿ, ದಿಬ್ಬೂರು ಗ್ರಾಪಂ ಆಸ್ಪತ್ರೆ, ಬಸ್ ನಿಲ್ದಾಣ, ಶಾಲಾ-ಕಾಲೇಜುಗಳು, ಸ್ತ್ರೀ ಸಂಘಗಳು, ಸೇರಿದಂತೆ ನಿತ್ಯ ಸಾವಿರಾರು ಮಂದಿ ರೈತರು, ಕೂಲಿ ಕಾರ್ಮಿಕರು ದಿಬ್ಬೂರಿಗೆ ಆಗಮಿಸುತ್ತಾರೆ. ಆದರೆ ಸಾರ್ವಜನಿಕರಿಗೆ ಶೌಚಾಲಯವಿಲ್ಲದೇ ಪರದಾಡುವಂತಹ ಸನ್ನಿವೇಶ ನಿರ್ಮಾಣವಾಗಿದೆ ಎಂದು ಆರೋಪಿಸಿದರು. ದಿಬ್ಬೂರು ಗ್ರಾಪಂನಲ್ಲಿ ಸಮುದಾಯ ಶೌಚಾಲಯ ನಿರ್ಮಾಣಕ್ಕೆ ಅನುಮೋದನೆಗೊಂಡಿದೆ.
ತಾಪಂ ಸಾಮಾನ್ಯ ಸಭೆಯಲ್ಲಿ ಒಪ್ಪಿಗೆ ಪಡೆಯಲಾಗಿದೆ. ಆದರೂ ಅಧಿಕಾರಿಗಳು ಶೌಚಾಲಯ ಕಾಮಗಾರಿಗೆ ಅಡ್ಡಿಪಡಿಸುತ್ತಿದ್ದಾರೆ ಎಂದು ಟೀಕಿಸಿದರು. ಪ್ರತಿಭಟನೆಯಲ್ಲಿ ಜಿಪಂ ಮಾಜಿ ಅಧ್ಯಕ್ಷ ಪಿ.ಎನ್,ಮುನೇಗೌಡ, ಸಮತಾ ಸೈನಿಕ ದಳದ ಜಿಲ್ಲಾಧ್ಯಕ್ಷ ವೆಂಕಟರಮಣ, ದಿಬ್ಬೂರು ಗ್ರಾಪಂ ಸದಸ್ಯ ರಾಜಣ್ಣ, ಮುಖಂಡರಾದ ಮೋಹನ್, ಗಂಗರೆಕಾಲುವೇ ನವೀನ್ ಸೇರಿದಂತೆ ಗ್ರಾಮಸ್ಥರು ಹಾಜರಿದ್ದರು.
ಸಂವಿಧಾನದ ಚೌಕಟ್ಟಿನಲ್ಲಿ ಕೆಲಸ ಮಾಡಬೇಕಾದ ಅಧಿಕಾರಿಗಳು ಜನಪ್ರತಿನಿಧಿಗಳ, ಸಾರ್ವಜನಿಕರ ವಿರೋಧಿ ನೀತಿ ಅನುಸರಿಸುತ್ತಿದ್ದಾರೆ. ಸ್ವತ್ಛತೆಗೆ ಆದ್ಯತೆ ನೀಡಬೇಕಾದ ಅಧಿಕಾರಿಗಳೇ ಗ್ರಾಪಂ ಕಚೇರಿಯಲ್ಲಿ ಆರಂಭಿಸಬೇಕಿದ್ದ ಸಮುದಾಯ ಶೌಚಾಲಯ ನಿರ್ಮಾಣಕ್ಕೆ ತಡೆ ಹಿಡಿದಿರುವುದು ವಿಪರ್ಯಾಸ. ಅಧಿಕಾರಿಗಳು ಕೂಡಲೇ ಕಾಮಗಾರಿ ಆರಂಭಕ್ಕೆ ಗ್ರಾಪಂಗೆ ಸೂಚಿಸಬೇಕು.
-ಪುರಗಡ್ಡೆ ಕೃಷ್ಣಪ್ಪ, ಹಿರಿಯ ಮುಖಂಡ