Advertisement

ಶುಲ್ಕ ಕಟ್ಟಿದರೂ ಇಲ್ಲರೀ ತ್ಯಾಜ್ಯ ವಿಲೇವಾರಿ

01:21 PM Apr 27, 2022 | Team Udayavani |

ರಾಯಚೂರು: ಕೆಲಸಕ್ಕೆ ಕರಿಬೇಡಿ ಊಟಕ್ಕೆ ಮರಿಬೇಡಿ ಎನ್ನುವಂತಾಗಿದೆ ರಾಯಚೂರು ನಗರಸಭೆ ವರಸೆ.

Advertisement

ನಗರದ ಹೊರವಲಯದ ಸಾಕಷ್ಟು ಬಡಾವಣೆಗಳಲ್ಲಿ ಘನತ್ಯಾಜ್ಯ ವಿಲೇವಾರಿ ಮಾಡದಿದ್ದರೂ ಪ್ರತಿ ವರ್ಷ ಶುಲ್ಕ ಮಾತ್ರ ಪಾವತಿಸಬೇಕಿದೆ. ಇಷ್ಟು ದಿನ ಆಸ್ತಿ ಕರದ ಜತೆಗೆ ಈ ಶುಲ್ಕ ಪಾವತಿಸುತ್ತಿದ್ದ ಕಾರಣ ಜನರಿಗೆ ಅದು ತಿಳಿಯುತ್ತಿರಲಿಲ್ಲ. ಆದರೆ, ಈಗ ಘನತ್ಯಾಜ್ಯ ವಿಲೇವಾರಿ ಶುಲ್ಕವೂ ಪ್ರತ್ಯೇಕವಾಗಿ ಪಾವತಿಸಬೇಕಿದೆ. ಅದಕ್ಕೆ ಪ್ರತ್ಯೇಕ ಚಲನ್‌ ಪಡೆದು ಭರ್ತಿ ಮಾಡಬೇಕಿದೆ.

ತಿಂಗಳಿಗೆ 10 ರೂ.ನಂತೆ ವರ್ಷಕ್ಕೆ 120 ರೂ. ಪಾವತಿಸಬೇಕಿದ್ದು, ಸ್ಥಳದ ಅಳತೆ ಆಧರಿಸಿ ದರ ಪರಿಷ್ಕರಣೆ ಮಾಡಲಾಗುತ್ತಿದೆ. ಉದಾಹರಣೆಗೆ 30×40 ಅಳತೆಯ ಸ್ಥಳವಿದ್ದರೆ ಆಸ್ತಿ ತೆರಿಗೆ ಜತೆಗೆ ಘನತ್ಯಾಜ್ಯ ವಿಲೇವಾರಿ ಶುಲ್ಕ 120 ರೂ. ಪಾವತಿಸಬೇಕು. ನಿವೇಶನ ಅಳತೆ 40×60 ಇದ್ದಲ್ಲಿ 180 ರೂ. ವಾಣಿಜ್ಯ ವಕಯಗಳಾದರೆ ಈ ಶುಲ್ಕ ಇನ್ನೂ ಹೆಚ್ಚಾಗುತ್ತದೆ. ಇಷ್ಟು ದಿನ ಆಸ್ತಿ ತೆರಿಗೆ ಪಾವತಿಸುತ್ತಿದ್ದ ಜನರಿಗೆ ಈ ಬಗ್ಗೆ ಗೊತ್ತಿರಲಿಲ್ಲ. ಈಚೆಗೆ ನಗರಸಭೆ ಶೇ.3ರಷ್ಟು ತೆರಿಗೆ ಹೆಚ್ಚಳ ಮಾಡಿದೆ.

ಈ ತಿಂಗಳು ಕೊನೆವರೆಗೆ ಶೇ.5ರಷ್ಟು ರಿಯಾಯಿತಿ ಇರುವ ಕಾರಣ ಜನ ಹೆಚ್ಚಾಗಿ ತೆರಿಗೆ ಪಾವತಿಗೆ ಬರುತ್ತಿದ್ದು, ಈಗ ಜನರಿಗೆ ಬಿಸಿ ಮುಟ್ಟುತ್ತಿದೆ. ಆದರೆ, ನಮ್ಮ ಬಡಾವಣೆಯಲ್ಲಿ ತ್ಯಾಜ್ಯ ವಿಲೇವಾರಿಗೆ ವಾಹನಗಳೇ ಬರುವುದಿಲ್ಲ. ತಿಂಗಳುಗಳು ಕಳೆದೂ ಕಸ ತೆರವು ಮಾಡುವುದಿಲ್ಲ. ಸಂಬಂಧಿಸಿದ ವಾರ್ಡ್‌ ಸದಸ್ಯರಿಗೆ, ಅಧಿಕಾರಿಗಳಿಗೆ ತಿಳಿಸಿದರೂ ಕೇಳ್ಳೋರಿಲ್ಲ. ಇನ್ನೂ ಕಸ ವಿಲೇವಾರಿ ವಾಹನಗಳು ನಗರದ ಕೆಲ ಬಡಾವಣೆಗಳಲ್ಲಿ ಮಾತ್ರ ಓಡಾಡುತ್ತಿದ್ದು, ಹೊರವಲಯದ ಬಡಾವಣೆಗಳತ್ತ ಮುಖ ಮಾಡುವುದಿಲ್ಲ. ಇನ್ನೂ ಪೌರ ಕಾರ್ಮಿಕರು ಎಲ್ಲಿರುತ್ತಾರೋ, ಯಾವಾಗ ಕಸ ಗುಡಿಸುತ್ತಾರೋ ತಿಳಿಯುವುದಿಲ್ಲ.

ಕಂಡಕಂಡಲ್ಲಿ ಕಸ ತುಂಬಿರುತ್ತದೆ. ಚರಂಡಿಗಳಿಂದ ಕಸ ಹೊರಗೆ ತೆಗೆದರೂ ಅದನ್ನು ಗಾಡಿಗಳಿಗೆ ತುಂಬಿಕೊಂಡು ಹೋಗಲು ವಾರಗಟ್ಟಲೇ ಕಾಲಕ್ಷೇಪ ಮಾಡುತ್ತಾರೆ. ಸುತ್ತಲಿನ ನಿವಾಸಿಗಳು ದುರ್ನಾತದಲ್ಲೇ ಕಾಲ ಕಳೆಯುವಂತಾಗುತ್ತದೆ. ಆದರೆ, ನಗರಸಭೆ ಸೌಲಭ್ಯ ಸರಿಯಾಗಿ ಕಲ್ಪಿಸದಿದ್ದರೂ ಶುಲ್ಕ ಮಾತ್ರ ಸರಿಯಾಗಿ ಕಟ್ಟಿಸಿಕೊಳ್ಳುತ್ತದೆ ಎಂದು ದೂರುತ್ತಾರೆ ಸಾರ್ವಜನಿಕರು.

Advertisement

ಘನತ್ಯಾಜ್ಯ ವಿಲೇವಾರಿಗೆ ಪ್ರತ್ಯೇಕ ಶುಲ್ಕ ಪಡೆಯುತ್ತಿಲ್ಲ. ಇಷ್ಟು ದಿನ ಆಸ್ತಿ ತೆರಿಗೆ ಜತೆಗೆ ಪಡೆಯಲಾಗುತ್ತಿತ್ತು. ಈಗ ಪ್ರತ್ಯೇಕ ಚಲನ್‌ ನೀಡಲಾಗುತ್ತಿದೆ. ಸಮರ್ಪಕ ತ್ಯಾಜ್ಯ ವಿಲೇವಾರಿ ದೃಷ್ಟಿಯಿಂದಲೇ 29 ವಾಹನಗಳನ್ನು ಖರೀದಿಸಿದ್ದು, ಶೀಘ್ರದಲ್ಲೇ ಸೇವೆ ಲಭ್ಯವಾಗಲಿದೆ. -ಕೆ.ಮುನಿಸ್ವಾಮಿ, ನಗರಸಭೆ ಪೌರಾಯುಕ್ತ

Advertisement

Udayavani is now on Telegram. Click here to join our channel and stay updated with the latest news.

Next